ಸೆ. ೨೬ ರಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ : ಯಶಸ್ವಿಗೆ ಕೃಷ್ಣ ಉದಪುಡಿ ಕರೆ

 ಕೊಪ್ಪಳ ಜಿಲ್ಲಾ ಪಂಚಾಯತಿಯ ವತಿಯಿಂದ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹದ ಅಂಗವಾಗಿ ಸೆ. ೨೬ ರಿಂದ ಅ. ೦೨ ರವರೆಗೆ ಜಿಲ್ಲೆಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಾರ್ವಜನಿಕರು, ಅಧಿಕಾರಿಗಳು ಸಪ್ತಾಹದ ಯಶಸ್ವಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಮನವಿ ಮಾಡಿದರು.
  ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಾಗತಿಕ ಮಟ್ಟದಲ್ಲಿ ಸ್ವಚ್ಛತೆ ಹಾಗೂ ಶೌಚಾಲಯಗಳು ತುರ್ತು ಹಾಗೂ ಆದ್ಯತೆಯ ವಿಷಯಗಳಾಗಿವೆ.  ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಅನೈರ್ಮಲ್ಯದ ಅಭ್ಯಾಸಗಳನ್ನು ತೊಡೆದು ಹಾಕಲು ಹಳ್ಳಿಗಳಲ್ಲಿ ಸ್ವಚ್ಛ ಪರಿಸರವನ್ನು ನಿರ್ಮಿಸಲು ನಿರ್ಮಲ ಭಾರತ ಅಭಿಯಾನವನ್ನು ದೇಶಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ.  ಆದರೂ ಗ್ರಾಮೀಣ ನೈರ್ಮಲ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತಿಲ್ಲ.  ಗ್ರಾಮೀಣರ ನೂರಾರು ವರ್ಷಗಳ ಅನಿಷ್ಠ ರೂಢಿ, ಅಭ್ಯಾಸಗಳನ್ನು ತೊಡೆದುಹಾಕುವಂತಹ ಮನಸ್ಥಿತಿ ಅವರಲ್ಲಿ ನಿರ್ಮಾಣ ಮಾಡಬೇಕಿದೆ.  ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಸಪ್ತಾಹ ದಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಬಯಲು ಮಲವಿಸರ್ಜನೆ ಮುಕ್ತ ಹಾಗೂ ಉತ್ತಮ ಪರಿಸರದ ಜಿಲ್ಲೆಯನ್ನಾಗಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವ ಅಗತ್ಯವಿದೆ.
  ನಿರ್ಮಲ ಭಾರತ ಅಭಿಯಾನದಡಿ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಸೆ. ೨೬ ರಿಂದ ಅ. ೦೨ ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಗ್ರಾಮಗಳ ನೈರ್ಮಲ್ಯ ಕಾಪಾಡಿಕೊಳ್ಳಲು ಜನಜಾಗೃತಿ ಮೂಡಿಸಲಾಗುತ್ತದೆ.  ಸೆ. ೨೬ ರಿಂದ ಈ ಸಪ್ತಾಹ ಕಾರ್ಯಕ್ರಮಕ್ಕೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಚಾಲನೆ ನೀಡಲಾಗುವುದು.  ಅಂದು ಜಿಲ್ಲಾ ಮಟ್ಟದಲ್ಲಿ ಕೊಪ್ಪಳದ ಗವಿಮಠದಿಂದ ಸಾಹಿತ್ಯ ಭವನದವರೆಗೆ ಎನ್.ಎಸ್‌ಎಸ್ ಘಟಕ, ವಸತಿ ನಿಲಯಗಳ ವಿದ್ಯಾರ್ಥಿಗಳು, ಧರ್ಮಸ್ಥಳ ಸ್ವ-ಸಹಾಯ ಸಂಘ ಮುಂತಾದವರ ಸಹಯೋಗದೊಂದಿಗೆ ಸ್ವಚ್ಛತಾ ರಥದ ಸಹಿತ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಾಥಾ ದಲ್ಲಿ ಜನಜಾಗೃತಿ ಮೂಡಿಸುವ ಸ್ವಚ್ಛತಾ ರಥ ಸಂಚರಿಸಲಿದೆ ಅಲ್ಲದೆ ಜಾಥಾದಲ್ಲಿ ಸಾಂಸ್ಕೃತಿಕ ತಂಡಗಳೂ ಸಹ ಭಾಗವಹಿಸಲಿವೆ.  ಗ್ರಾಮ ಮಟ್ಟದಲ್ಲಿಯೂ ಸಹ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಪ್ರೇರಣೆದಾರರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಿದ್ದಾರೆ.  ಈ ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ, ಸ್ವ-ಸಹಾಯ ಸಂಘಗಳ ಕಾರ್ಯಕರ್ತೆಯರು, ಸದಸ್ಯರುಗಳು ಪಾಲ್ಗೊಳ್ಳುವರು.  ಸೆ. ೨೭ ರಂದು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ನೌಕರರು, ಜನಪ್ರತಿನಿಧಿಗಳು, ಪಂಚಾಯತಿ ಸಿಬ್ಬಂದಿಗಳು, ವಿವಿಧ ಇಲಾಖೆಗಳ ವಸತಿ ನಿಲಯಗಳ ವಿದ್ಯಾರ್ಥಿಗಳಿಂದ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸಲಾಗುವುದು.  ಸೆ. ೨೮ ರಂದು ಜಿಲ್ಲಾ ಮಟ್ಟದಲ್ಲಿ ಕೊಪ್ಪಳದ ಗವಿಮಠದ ಮಹಾಸ್ವಾಮೀಜಿಗಳಿಂದ ಕಿನ್ನಾಳ, ಮಂಗಳೂರು, ಮಂಗಳೂರು, ಬೇವೂರು, ನೆಲಜೇರಿ ಹಾಗೂ ಇರಕಲ್ಲಗಡ ಗ್ರಾಮಗಳ ಜನರಿಗೆ ಸ್ವಚ್ಛತೆ ಮತ್ತು ಜಾಗೃತಿ ಮೂಡಿಸುವ ಪಾದಯಾತ್ರೆ ಅದೇ ರೀತಿ ಪ್ರತಿ ಗ್ರಾಮ ಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ಸರ್ವಧರ್ಮ ಗುರುಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ಜಾಥಾ ನಡೆಯಲಿದೆ.  ಸೆ. ೨೯ ರಂದು ಜಿಲ್ಲ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಂಚಾಯತಿಯ ಸಿಬ್ಬಂದಿಗಳ ನೇತೃತ್ವದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗುವುದು.  ಅಲ್ಲದೆ ಅಧಿಕಾರಿಗಳು ತಮ್ಮ ಕಚೇರಿ ಹಾಗೂ ಸುತ್ತಮುತ್ತಲ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗುವುದು.  ಸೆ. ೩೦ ರಂದು ಪ್ರತಿ ಗ್ರಾಮ ಮಟ್ಟದಲ್ಲಿ ಪ್ರತಿ ಗ್ರಾಮದ ಕನಿಷ್ಟ ೧೦ ರಿಂದ ೨೦ ಯುವಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ಆಯೋಜಿಸುವ ಮೂಲಕ ಸ್ವಚ್ಛತೆ ಮತ್ತು ಶೌಚಾಲಯದ ಅಗತ್ಯ ಕುರಿತಂತೆ ಜಾಗೃತಿ ಮೂಡಿಸಲಿದ್ದಾರೆ.  ಅ. ೦೧ ರಂದು ಬೆಳಿಗ್ಗೆ ೫ ಗಂಟೆಗೆ ಪ್ರತಿ ಗ್ರಾಮ ಮತ್ತು ಪಂಚಾಯತಿ ಮಟ್ಟದಲ್ಲಿ ಬಯಲು ಮಲವಿಸರ್ಜನೆಯನ್ನು ವಿರೋಧಿಸುವ ನಿಟ್ಟಿನಲ್ಲಿ ವಿಸಿಲ್ ಕಾರ್ಯಕ್ರಮ, ೧೦ ಗಂಟೆಗೆ ಶೌಚಾಲಯ ಹೊಂದದೇ ಇರುವವರ ಮನೆಗಳಿಗೆ ಭೇಟಿ ನೀಡಿ, ಸ್ವಚ್ಛತೆ ಮತ್ತು ಶೌಚಾಲಯ ಹೊಂದುವಂತೆ ಮನವೊಲಿಸುವ ಕಾರ್ಯಕ್ರಮ.  ಸಂಜೆ ೫ ಗಂಟೆಗೆ ವೈದ್ಯರು, ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಸ್ವಚ್ಛತೆ ಹಾಗೂ ಶೌಚಾಲಯದ ಅಗತ್ಯತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಅ. ೦೨ ರಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆಡಳಿತ ಭವನದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವುದರೊಂದಿಗೆ ಗಾಂಧಿ ಜಯಂತಿ ಆಚರಣೆ ಮಾಡುವುದು ಅಲ್ಲದೆ ಪ್ರತಿ ಗ್ರಾಮ ಮಟ್ಟದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತೆಯ ಕುರಿತು ಭಾಷಣ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗುವುದು.  ಈ ವಿಶೇಷ ಸಪ್ತಾಹ ಕಾರ್ಯಕ್ರಮದ ಅನುಷ್ಠಾನದ ಹೊಣೆಗಾರಿಕೆಯನ್ನು ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಹಿಸಲಾಗಿದ್ದು, ಇದರಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೂ ಸೇರಿದಂತೆ ಪಂಚಾಯತಿಯ ಸಿಬ್ಬಂದಿಗಳ ಪಾತ್ರವೂ ಮಹತ್ವದ್ದಾಗಿದೆ.  ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ.  ಎಲ್ಲರೂ ಒಗ್ಗೂಡಿ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಮನವಿ ಮಾಡಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಜಿ.ಪಂ. ಯೋಜನಾಧಿಕಾರಿ ಬಿ. ಕಲ್ಲೇಶ್ ಸೇರಿದಂತೆ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಪಿಡಿಓಗಳು ಸಭೆಯಲ್ಲಿ ಭಾಗವಹಿಸಿದ್ದರು.
Please follow and like us:

Leave a Reply