ಗಂಡುಗಲಿ ಕುಮಾರರಾಮನ ನಾಡು ಗಂಗಾವತಿ

ಗಂಗಾವತಿ: ಈ ತಾಲ್ಲೂಕಿನ ನಕ್ಷೆಯಲ್ಲಿ ಯಾವ ಭಾಗ ಮುಟ್ಟಿದರೂ ನಿಮಗೆ ಬತ್ತದ ತೆನೆ ಕೈಗೆಟುಕುತ್ತದೆ. ರಸ್ತೆಯ ಇಕ್ಕೆಲಗಳಲ್ಲೂ ಹಾಸಿದ ಹಸಿರಿನಲ್ಲಿ ಅಕ್ಕಿಯದೇ ವಾಸನೆ. ರಾಶಿ ರಾಶಿ ಬತ್ತದ ಮೂಟೆಗಳನ್ನು ಒಡಲಲ್ಲಿ ಇಟ್ಟುಕೊಂಡ ರೈಸ್‌ಮಿಲ್‌ಗಳು ನಿಮ್ಮನ್ನು ಸ್ವಾಗತಿಸುತ್ತವೆ.
ಈ ಬಾರಿಯ ಕನ್ನಡದ ನುಡಿಜಾತ್ರೆಯ ಆತಿಥ್ಯ ವಹಿಸಿರುವ ಗಂಗಾವತಿ ತಾಲ್ಲೂಕಿನ ಬಗ್ಗೆ ಇದು ಪೀಠಿಕೆ.
ಬತ್ತದಲ್ಲಿ ಎಷ್ಟು ಬಗೆ ಎಂದು ತಿಳಿಯಬೇಕಾದರೆ ಇಲ್ಲಿನ ಜನರನ್ನೊಮ್ಮೆ ಮಾತನಾಡಿಸಿ. ಯಾವ ಅಕ್ಕಿಯ ರುಚಿ ಹೇಗೆ ಎಂಬ ವಿವರ ಅವರ ಬಳಿ ಲಭ್ಯ. ತಾಲ್ಲೂಕಿನಲ್ಲಿ 35,800 ಹೆಕ್ಟೇರ್ ಬತ್ತ ಬೆಳೆಯುವ ಪ್ರದೇಶವಿದೆ. ಪ್ರತಿ ಬೆಳೆಗೆ ಇಲ್ಲಿ 23.62 ಲಕ್ಷ ಟನ್ ಬತ್ತ ಉತ್ಪಾದನೆಯಾಗುತ್ತದೆ. 120ಕ್ಕೂ ಹೆಚ್ಚು ರೈಸ್‌ಮಿಲ್‌ಗಳಿವೆ. ಈ ಕಾರಣಕ್ಕಾಗಿಯೇ ಇದನ್ನು `ಬತ್ತದ ಕಣಜ` ಎಂದು ಕರೆಯಲಾಗುತ್ತದೆ.
ಕೊಪ್ಪಳ ಜಿಲ್ಲೆಯ ಮಹತ್ವದ ವಾಣಿಜ್ಯ ಕೇಂದ್ರವಾದ ಗಂಗಾವತಿ ತುಂಗಭದ್ರಾ ಜಲಾಶಯಕ್ಕೆ ಹತ್ತಿರವಿದ್ದು, ವಿಶ್ವವಿಖ್ಯಾತ ಹಂಪಿಗೆ ಕೇವಲ 14 ಕಿ.ಮೀ. ಅಂತರದಲ್ಲಿದೆ. ವಿಜಯನಗರದ ಮಾತೃ ಸ್ಥಾನ ಆನೆಗುಂದಿ, ಗುಜ್ಜಲ ವಂಶದ ನಾಯಕರ ಆಡಳಿತ ಕೇಂದ್ರವಾಗಿದ್ದ ಕನಕಗಿರಿ, ಯತಿಗಳ ಸನ್ನಿಧಾನವಿರುವ ನವವೃಂದಾವನ, ಪಂಪಾಸರೋವರ ಪಂಪಾಂಬಿಕಾ ದೇವಸ್ಥಾನ, ಅಂಜನಾದ್ರಿ ಬೆಟ್ಟ ಈ ಭಾಗದ ಐತಿಹಾಸಿಕ ತಾಣಗಳು.
ಗಂಗಾವತಿ ಪರಿಸರದಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಜನರು ವಾಸವಾಗಿದ್ದ ಬಗ್ಗೆ ಅವಶೇಷಗಳಿವೆ. ಹಿರೇಬೆಣಕಲ್‌ನಲ್ಲಿ ಬೃಹತ್ ಶಿಲಾಯುಗ ಜನರ ನೂರಾರು ಸಮಾಧಿಗಳು ಹಾಗೂ 17 ಗವಿಗಳಲ್ಲಿ ವರ್ಣಚಿತ್ರಗಳಿವೆ. ನೀರು ಹೆಚ್ಚಾಗಿ ದೊರೆಯುತ್ತಿದ್ದ ಈ ಭಾಗದಲ್ಲಿ 11ನೇ ಶತಮಾನಕ್ಕಿಂತ ಮುಂಚೆ ಗಂಗೆಯನ್ನು ಆರಾಧಿಸುವ ಬುಡಕಟ್ಟು ಜನಾಂಗವಿತ್ತು ಎಂಬ ಉಲ್ಲೇಖವಿದೆ.
`ನೊಳಂಬ ಪಲ್ಲವರ ಅರಸ ಉದಯಾದಿತ್ಯನು, ಜನರು ಆರಾಧಿಸುತ್ತಿದ್ದ ಗಂಗೆಗೆ ದೇಗುಲ ನಿರ್ಮಿಸಿ ಅದಕ್ಕೆ ಗಂಗಾವತಿ ಎಂಬ ಹೆಸರಿಟ್ಟ. ಆಗಿನಿಂದ ಗಂಗಾವತಿ ಎಂಬ ಹೆಸರಾಯಿತು. ಕುಮಾರರಾಮನ ಕಾಲದಲ್ಲಿ ಇದನ್ನು ನೀಲಾವತಿ ಪಟ್ಟಣ ಎಂದು ಕರೆಯಲಾಯಿತು` ಎಂದು ಸ್ಥಳೀಯ ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ್ ತಿಳಿಸಿದರು.
ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಪ್ರಧಾನ ವೇದಿಕೆಗೆ `ಗಂಡುಗಲಿ ಕುಮಾರರಾಮ`ನ ಹೆಸರಿದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗಿಂತ ಮುಂಚೆ ಕರ್ನಾಟಕದ ಇತಿಹಾಸದಲ್ಲಿ ಕುಮಾರರಾಮನ ಹೆಸರು ಹೆಚ್ಚು ಚರ್ಚೆಯಲ್ಲಿತ್ತು. ಈತ ಗಂಗಾವತಿ ತಾಲ್ಲೂಕಿನ ಕಮ್ಮಟದುರ್ಗದ ಅರಸನಾಗಿದ್ದ ಕಂಪಿಲರಾಯನ ಪುತ್ರ.
ಕುಮಾರರಾಮ (1290-1327) ಆದರ್ಶ ರಾಜಕುಮಾರ ಮತ್ತು ಸದ್ಗುಣಿಯಾಗಿದ್ದ. ಅಪ್ರತಿಮ ವೀರನೂ ಆಗಿದ್ದ ಆತ ವಾರಂಗಲ್‌ನ ಕಾಕತೀಯರು, ಹೊಯ್ಸಳ ವೀರಬಲ್ಲಾಳ, ಮಹಮದ್ ಬಿನ್ ತುಘಲಕ್ ವಿರುದ್ಧ ನಡೆದ ಯುದ್ಧಗಳಲ್ಲಿ ತನ್ನ ತಂದೆಗೆ ಸಾಥ್ ನೀಡಿದ್ದ. ತುಘಲಕ್‌ನ ಸೈನ್ಯದೊಂದಿಗೆ ಹೋರಾಡಿ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡ.
ಹಕ್ಕ-ಬುಕ್ಕರ ಸಂಬಂಧಿಯಾಗಿದ್ದ ಕುಮಾರರಾಮನಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದ ಕೀರ್ತಿ ಸಲ್ಲುತ್ತದೆ. ಕುಮಾರರಾಮನ ಕುರಿತು ಅತಿಹೆಚ್ಚು ಮೌಖಿಕ ಕಾವ್ಯ ರಚನೆಯಾಗಿರುವುದು ಆತನ ಜನಪ್ರಿಯತೆಗೆ ಸಾಕ್ಷಿ. ಇಂಥ ಮಹನೀಯರ ನೆಲದಲ್ಲಿ ಕನ್ನಡದ ಸಾಹಿತ್ಯ ಜಾತ್ರೆ ನಡೆಯಲಿದೆ.- ಕೃಪೆ ಪ್ರಜಾವಾಣಿ
Please follow and like us:
error