ವಿಶ್ವಕರ್ಮ ಅಭಿವೃದ್ದಿ ನಿಗಮದಿಂದ ಸಾಲ ಸೌಲಭ್ಯ : ಅರ್ಜಿ ಆಹ್ವಾನ

 ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿಶ್ವಕರ್ಮ ಸಮುದಾಯಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ವಿಶ್ವಕರ್ಮ ಸಮಾಜದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು : ವಿಶ್ವಕರ್ಮ ಸಮುದಾಯಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವಾರ್ಷಿಕ ಶೇ.೪ ಬಡ್ಡಿದರದಲ್ಲಿ ಗರಿಷ್ಠ ರೂ.೪೫,೦೦೦/-ಗಳವರೆಗೆ ಸಾಲ ಹಾಗೂ ಗರಿಷ್ಠ ರೂ.೫,೦೦೦/-ಗಳ ಸಹಾಯಧನ.(ಪಂಚವೃತ್ತಿಗಳೆಂದರೆ ಚಿನ್ನ ಬೆಳ್ಳಿ ಕಲಸ, ಶಿಲ್ಪಕಲೆ, ಲೋಹದ ಕೆಲಸ, ಮರಗೆಲಸ ಮತ್ತು ಎರಕ ಕೆಲಸ ಎಂದು ಸಂಭಾವಿಸಲಾಗಿದೆ).
ಸ್ವಯಂ ಉದ್ಯೋಗ ನೇರಸಾಲ ಯೋಜನೆ : ವಿಶ್ವಕರ್ಮ ಮತ್ತು ಅದರ ಉಪ ಜಾತಿಗೆ ಸೇರಿದ ಜನರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ವಾರ್ಷಿಕ ಶೇ.೪ರ ಬಡ್ಡಿದರದಲ್ಲಿ ರೂ.೪೦,೦೦೦/-ಸಾಲ ಮತ್ತು ಶೇ.೩೦ ರಷ್ಟು ಅಥವಾ ಗರಿಷ್ಠ ರೂ.೧೦,೦೦೦/-ಗಳ ಸಹಾಯಧನ.
ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ: ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ, ವ್ಯಾಪಾರ, ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಠ ರೂ.೫.೦೦ ಲಕ್ಷಗಳವರೆಗೆ ಸಾಲ. ನಿಗಮದಿಂದ ಶೇ.೨೦ರಷ್ಟು ಗರಿಷ್ಠ ರೂ.೧.೦೦ ಲಕ್ಷಗಳ ಶೇಕಡ ೪ರ ಬಡ್ಡಿದರದಲ್ಲಿ ಮಾರ್ಜಿನ್ ಹಣ. ರೂ.೧.೦೦ ಲಕ್ಷಕ್ಕಿಂತ ಕಡಿಮೆ ಇರುವ ಸಾಲಕ್ಕೆ ಶೇ.೩೦ರಷ್ಟು ಅಥವಾ ಗರಿಷ್ಠ ರೂ.೧೦,೦೦೦/-ಗಳ ಸಹಾಯಧನ(ಸಬ್ಸಿಡಿ).
ಅರಿವು-ಶೈಕ್ಷಣಿಕ ನೇರಸಾಲ ಯೋಜನೆ: ವಿಶ್ವಕರ್ಮ ಸಮುದಾಯಗಳ ಜನಾಂಗದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.೩.೫೦ ಲಕ್ಷಗಳ ಮಿತಿಯಲ್ಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ (ಸಿ.ಇ.ಟಿ) ಪ್ರವೇಶ ಪಡೆದು, ಬಿ.ಇ.(ಸಿ.ಇ.ಟಿ.), ಎಂ.ಬಿ.ಬಿ.ಎಸ್, ಬಿ.ಯು.ಎಂ.ಎಸ್, ಬಿ.ಡಿ.ಎಸ್, ಬಿ.ಎ.ಎಂ.ಎಸ್, ಬಿ.ಹೆಚ್.ಎಂ.ಎಸ್, ಎಂ.ಬಿ.ಎ, ಎಂ.ಟೆಕ್, ಎಂ.ಇ., ಎಂ.ಡಿ., ಪಿ.ಹೆಚ್.ಡಿ, ಬಿ.ಸಿ.ಎ/ಎಂ.ಸಿ.ಎ, ಎಂ.ಎಸ್.ಅಗ್ರಿಕಲ್ಚರ್, ಬಿ.ಎಸ್.ಸಿ. ನರ್ಸಿಂಗ್, ಬಿ.ಫಾರಂ/ಎಂ.ಫಾರಂ, ಬಿ.ಎಸ್.ಸಿ.ಪ್ಯಾರಾ ಮೆಡಿಕಲ್, ಬಿ.ಎಸ್.ಸಿ. ನರ್ಸಿಂಗ್, ಬಿ.ಟೆಕ್, ಬಿ.ಪಿ.ಟಿ, ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ, ಬಿ.ಎನ್.ಎಂ, ಬಿ.ಹೆಚ್.ಎಂ, ಎಂ.ಡಿ.ಎಸ್, ಎಂ.ಎಸ್.ಡಬ್ಲ್ಯೂ, ಎಲ್.ಎಲ್.ಎಂ, ಎಂ.ಎಫ್.ಎ, ಎಂ.ಎಸ್.ಸಿ. ಬಯೋ ಟೆಕ್ನಾಲಜಿ ಮತ್ತು ಎಂ.ಎಸ್.ಸಿ (ಎ.ಜಿ) ಕೋರ್ಸ್‌ಗಳಲ್ಲಿ ಉಚಿತ ಸೀಟು ಪಡೆದು ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಅವಧಿಗೆ ಶೇಕಡ ೨ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ ೧.೦೦ ಲಕ್ಷಗಳ ವರೆಗೆ ಸಾಲ.
ಗಂಗಾಕಲ್ಯಾಣ ನೀರಾವರಿ ಯೋಜನೆ (ವೈಯಕ್ತಿಕ ಕೊಳವೆ ಬಾವಿ ಯೋಜನೆ): ವಿಶ್ವಕರ್ಮ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಘಟಕ ವೆಚ್ಚ ರೂ.೨.೦೦ ಲಕ್ಷಗಳಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‌ಸೆಟ್ಟು ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಒದಗಿಸುವುದು. ರೂ.೨.೦೦ ಲಕ್ಷಗಳಲ್ಲಿ ರೂ.೧.೫೦ ಲಕ್ಷಗಳ ಸಹಾಯಧನ ಹಾಗೂ ರೂ.೫೦,೦೦೦/-ಗಳ ಸಾಲ ಶೇ.೪ರ ಬಡ್ಡಿದರ.
ಅರ್ಜಿ ಸಲ್ಲಿಸುವವರು ವಿಶ್ವಕರ್ಮ ಸಮುದಾಯದ ಜನಾಂಗಕ್ಕೆ ಸೇರಿರಬೇಕು, ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ.೪೦,೦೦೦/-ಗಳು ಪಟ್ಟಣ ಪ್ರದೇಶದವರು ರೂ.೫೫,೦೦೦/-ಗಳ ಮಿತಿಯೊಳಗಿರಬೇಕು, ಸ್ವಯಂ ಉದ್ಯೋಗ/ಪಂಚವೃತ್ತಿ ಅಭಿವೃದ್ಧಿಗೆ ಸಾಲ ಪಡೆಯಲು ಬಯಸುವವರು ವೃತ್ತಿಯನ್ನು ಅಥವಾ ಯಾವುದಾದರೂ ಆರ್ಥಿಕ ಚಟುವಟಿಕೆ ನಿರ್ವಹಿಸಬೇಕು, ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಅರ್ಜಿದಾರರು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು ಹಾಗೂ ಒಂದೇ ಕಡೆ ಹೊಂದಿಕೊಂಡಂತಿರುವ ೨ ಎಕರೆ ಜಮೀನು ಹೊಂದಿರಬೇಕು. 
ಅರ್ಜಿಯೊಂದಿಗೆ  ಅರ್ಜಿದಾರರ ಪೂರ್ಣ ಹೆಸರು ಮತ್ತು ವಿಳಾಸ, ಜಾತಿ/ಪಂಗಡ/ಉಪಜಾತಿ, ವಯಸ್ಸು, ಸಾಲ ಪಡೆಯುವ ಉದ್ದೇಶ, ಕೋರಿರುವ ಸಾಲದ ಮೊತ್ತ, ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಶಾಖೆಯ ಹೆಸರು ಮತ್ತು ಬ್ಯಾಂಕ್ ಖಾತೆ ಸಂಖ್ಯೆ, ಸಾಲಕ್ಕೆ ಭದ್ರತೆ ಒದಗಿಸುವ ಮಾಹಿತಿ, ನೀರಾವರಿ ಸೌಲಭ್ಯ ಕೋರಿದ್ದಲ್ಲಿ ಅರ್ಜಿದಾರರು ಹೊಂದಿರುವ ಜಮೀನಿನ ವಿಸ್ತೀರ್ಣ ಮತ್ತು ಸರ್ವೇ ನಂಬರ್, ಶೈಕ್ಷಣಿಕ ಉದ್ದೇಶಕ್ಕೆ ಸಾಲ ಪಡೆಯಲು ಬಯಸುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್, ಕಾಲೇಜು ಸಿ.ಇ.ಟಿ. ಮೂಲಕ ಪ್ರವೇಶ ಪಡೆದ ಬಗ್ಗೆ ಪ್ರವೇಶ ಪತ್ರ, ಸ್ಟಡಿ ಸರ್ಟಿಫಿಕೇಟ್ ಮತ್ತು ಫೀಸ್ ಸ್ಟ್ರಕ್ಚರ್ ಇತ್ಯಾದಿ ಮಾಹಿತಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಇದುವರೆಗೆ ಸಾಲ ಸೌಲಭ್ಯ ಪಡೆಯದೇ ಇರುವ ಬಗ್ಗೆ ಸ್ವಯಂ ಘೋಷಣೆ ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾಡಳಿತ ಭವನ ಕೊಪ್ಪಳ ಇವರಿಂದ ಉಚಿತವಾಗಿ ಪಡೆದುಕೊಂಡು ನ.೦೫ ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
Please follow and like us:
error