ಜಿ.ಪಂ. ಹಾಗೂ ತಾ.ಪಂ. ಉಪಚುನಾವಣೆ ವೇಳಾಪಟ್ಟಿ ಪ್ರಕಟ

ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ.
     ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಕ್ಷೇತ್ರದ ಜಿ.ಪಂ. ಸದಸ್ಯ ಸ್ಥಾನ ಹಾಗೂ ಕುಷ್ಟಗಿ ತಾಲೂಕು ಯರಗೇರಾ ಕ್ಷೇತ್ರದ ತಾಲೂಕಾ ಪಂಚಾಯತಿ ಸದಸ್ಯ ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿದ್ದರಿಂದ, ಇದೀಗ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.  ವೇಳಾಪಟ್ಟಿಯನ್ವಯ ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಜ. 13.  ನಾಮಪತ್ರ ಸಲ್ಲಿಸಲು ಜ. 20 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳನ್ನು ಜ. 21 ರಂದು ಪರಿಶೀಲನೆ ನಡೆಸಲಾಗುವುದು.  ಉಮೇದುವಾರಿಕೆ ಹಿಂಪಡೆಯಲು ಜ. 23 ಕೊನೆಯ ದಿನಾಂಕವಾಗಿರುತ್ತದೆ.  ಮತದಾನದ ಅವಶ್ಯವಿದ್ದರೆ ಫೆ. 01 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ.  ಮತಗಳ ಎಣಿಕೆ ಫೆ. 04 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.  ಚುನಾವಣಾ ಪ್ರಕ್ರಿಯೆಯನ್ನು ಫೆ. 05 ರೊಳಗಾಗಿ ಪೂರ್ಣಗೊಳಿಸಲಾಗುವುದು.  ಚುನಾವನೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಜ. 13 ರಿಂದ ಫೆ. 05 ರವರೆಗೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ

Leave a Reply