ಮಕ್ಕಳ ಭವಿಷ್ಯದ ದೃಷ್ಠಿಯಿಂದ ಶಾಲೆಗೆ ಕಳುಹಿಸಿ- ನ್ಯಾಯಧೀಶ ಕೆ.ನಾರಾಯಣ ಪ್ರಸಾದ್

ಹೊಸಪೇಟೆ: ಮಕ್ಕಳ ಮುಂದಿನ ಭವಿಷ್ಯದ ದೃಷ್ಠಿಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲೇಬೇಕೆಂದು  ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶರಾದ ಕೆ. ನಾರಾಯಣ ಪ್ರಸಾದ್ ಹೇಳಿದರು.
ನಗರದಲ್ಲಿ ಶುಕ್ರವಾರ ಪ್ರಧಾನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮತ್ತು ಎಲ್ಲಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುವ ಬಗ್ಗೆ ಪಾಲಕ ಪೋಷಕರಿಗೆ ಸಲಹೆ ಹಾಗು ಶಿಕ್ಷಣ ಇಲಾಖೆ, ಪೋಲೀಸ್ ಇಲಾಖೆ,ಇವರ ಸಂಯುಕ್ತ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಮಕ್ಕಳ ಜನ್ಮ ಸಿದ್ದ ಹಕ್ಕು, ಆದ್ದರಿಂದ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.ಎಂದರು. ಶಿಕ್ಷಣದಿಂದ ಕೇವಲ ಉದ್ಯೋಗ ಮಾತ್ರ ಅಲ್ಲ, ಜ್ಞಾನಾರ್ಜನೆ ಜೊತೆಗೆ, ವ್ಯಕ್ತಿತ್ವ ವಿಕಸನವಾಗುತ್ತದೆ . ದೇಶದ ಉತ್ತಮ ಪ್ರಜೆಯಾಗಿ ರೂಪಿಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು. ಮೂಢನಂಬಿಕೆಯಿಂದ ಮಕ್ಕಳನ್ನು ಶಾಲೆ ಬಿಡಿಸಬೇಡಿ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು. 
ನಂತರ ಮುಖ್ಯ ಅಥಿತಿಯಾಗಿ ಡಿ.ವೈ.ಎಸ್.ಪಿ. ಡಿ.ಡಿ.ಮಾಳಗಿ ಮಾತನಾಡಿ, ಶಿಕ್ಷಣ ಕಾಯ್ದೆ ಪ್ರಕಾರ ಯಾರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೋ, ಅಂಥಹ ಪೋಷಕರನ್ನು ಕಾನೂನು ಬಂಧನಕ್ಕೆ ಒಳಪಡಿಸುವ ಎಚ್ಚರಿಕೆ ನೀಡಿದರು.
ಇದೇ ಸಂಧರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಮಕ್ಕಳ, ಹಾಗು ಪೋಷಕರನ್ನು ಕರೆದು, ಅವರಿಗೆ ಶಿಕ್ಷಣದ ಮಹತ್ವ, ಕಾನೂನು ತಿಳುವಳಿಕೆ ಬಗ್ಗೆ ಅರಿವು ಮೂಡಿಸಿ ಅವರ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಲಾಯಿತು. ೬೬ ಮಕ್ಕಳ ಪೋಷಕರಿಗೆ ನೋಟೀಸನ್ನು ನೀಡಲಾಗಿತ್ತು. ಅದರಲ್ಲಿ ೨೯ ಮಕ್ಕಳು, ಪೋಷಕರು ಹಾಜರಿದ್ದರು. ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹತ್ತಿಕಾಳು ಪ್ರಭು ಸಿದ್ದಪ್ಪ , ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಬಸವರಾಜ, ಸರ್ಕಾರಿ ಅಭಿಯೋಜಕರಾದ ಸತೀಶ್, ವಕೀಲರ ಸಂಘದ ಕಾರ್ಯದರ್ಶಿ ಕೆ. ರಾಮಪ್ಪ, ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಕೆ.ಪಿ. ಮಂಜುನಾಥ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಕೆ.ಜಂಬಣ್ಣ ಉಪನ್ಯಾಸ ನೀಡಿದರು. ವಕೀಲ ಎ.ಕರುಣಾನಿಧಿ ನಿರೂಪಿಸಿದರು.

Related posts

Leave a Comment