ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆ

ಕೊಪ್ಪಳ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬರಗಾಲಪೀಡಿತ ಪ್ರದೇಶದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ಪುನಃ ಹೊಸ ಸಾಲ ಮಂಜೂರು ಮಾಡುವಂತೆ ಹಾಗೂ ಬರಪೀಡಿತ ಪ್ರದೇಶದ ಕಾರ್ಯನಿರ್ವಹಣೆಯಲ್ಲಿ ಜಿಲ್ಲಾಡಳಿತದ ನಿರ್ಲಕ್ಷ ವಿರೋಧಿಸಿ ಎ.ಪಿ.ಎಮ್.ಸಿ. ಗಂಜ್ ಸರ್ಕಲ್‌ನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ಜಿಲ್ಲಾಧಿಕಾರಿ ಕಛೇರಿಯ ಮುಖ್ಯ ದ್ವಾರದಲ್ಲಿಯೇ ತಡೆಯಲಾಯಿತು. ಅಲ್ಲಯೇ ಸಭೆ ನಡೆಸಿದ ರೈತರು ಸರ್ಕಾರ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಯ ವಿರುದ್ಧ ಹರಿಹಾಯ್ದರು. ರೈತ ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ ಮಾತನಾಡಿ ಇಂತಹ ಭೀಕರ ಬರಗಾಲದಲ್ಲಿ ರೈತರ ಬಗ್ಗೆ ಚಿಂತನೆ ನಡೆಸದೇ ಜಿಮ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಿ ವಿದೇಶಿ ಕಂಪನಿಗಳಿಗೆ ರೈತರ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಮಾರಿಕೊಂಡು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ ಎಂದರು. ಸಚಿವರಾದ ಮುರುಗೇಶ ನಿರಾಣಿ ರೈತರ ಮೇಲೆ ಹಲ್ಲೆ ಮಾಡಿದ್ದು ಖಂಡನಾರ್ಹ ಅವರನ್ನು ಬಂಧಿಸಿ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ನಜೀರ್‌ಸಾಬ್ ಮೂಲಿಮನಿ ಮಾತನಾಡಿ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಜಿಲ್ಲಾಧಿಕಾರಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿರುವುದು ನಾಚಿಕೆ ಗೇಡಿಯ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಕೆಲವೇ ಗೋಶಾಲೆಗಳಿದ್ದು, ಸಂಖ್ಯೆಗನುಗುಣವಾಗಿ ಇನ್ನೂ ಹೆಚ್ಚಿನ ಗೋಶಾಲೆಗಳು ಮಾಡಲು ರೈತರ ಬೇಡಿಕೆ ಇದೆ ಅಂತಹದರಲ್ಲಿ ದನಗಳು ೫ ಕೇ.ಜಿ. ಗಿಂತ ಹೆಚ್ಚಿಗೆ ಮೇವು ತಿನ್ನುತ್ತಿರುವುದರಿಂದ ಅನುದಾನದ ಬಳಕೆಗೆ ಲೆಕ್ಕ ಸಿಗುತ್ತಿಲ್ಲ. ಆದ್ದರಿಂದ ಮೇವು ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂಬ ಹೇಳಿಕೆ ಖಂಡನಾರ್ಹವಾಗಿದೆ. ಇಂತಹ ಜಿಲ್ಲಾಧಿಕಾರಿಗಳು ಇಂತಹ ಪರಿಸ್ಥಿತಿಯಲ್ಲಿ ಈ ಜವಾಬ್ದಾರಿಯುತ ಸ್ಥಾನದಲ್ಲಿರುವುದು ಸೂಕ್ತವಲ್ಲ ಎಂದರು. 
ಪ್ರಮುಖ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ರೈತ ಮುಖಂಡ ಭೀಮಸೇನ ಕಲಕೇರಿ, ಜಿಲ್ಲಾ ಉಪಾಧ್ಯಕ್ಷ ಶರಣಯ್ಯ ಮುಳ್ಳೂರಮಠ, ಫಕೀರಪ್ಪ ಗೋಂದಿ ಹೊಸಳ್ಳಿ, ಗೌರವಾಧ್ಯಕ್ಷ ತ್ರಿಲಿಂಗಪ್ಪ ಬೆಟಗೇರಿ, ಹಸಿರು ಸೇನೆ ಸಂಚಾಲಕ ನಿಂಗನಗೌಡ ಗ್ಯಾರಂಟಿ, ಶಿವಣ್ಣ ಇಂದರಗಿ, ಕಾಳಪ್ಪ ರಾಠೋಡ್ ಕನಕಪ್ಪ ಪೂಜಾರ್, ಬಸವರಾಜ ಜಬ್ಬಲಗುಡ್ಡ, ಯಮುನವ್ವ ನದಾಫ್, ಕರಿಯಮ್ಮ ಹೊಳೆಯಾಚೆ ಮತ್ತಿತರರು ಉಪಸ್ಥಿತರಿದ್ದರು.

Leave a Reply