ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ:

ಅಧ್ಯಕ್ಷರಾಗಿ ಗೋನಾಳ, ಉಪಾಧ್ಯಕ್ಷರಾಗಿ ಜೂಡಿ ಹಾಗೂ ಯಾಳಗಿ ಆಯ್ಕೆ
ಕೊಪ್ಪಳ,ಜು.೧೦: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ಉಳಿದಿರುವ ೧ ವರ್ಷದ ಅವಧಿಗಾಗಿ ನೂತನ ಅಧ್ಯಕ್ಷರಾಗಿ ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕೆಯ ಸಂಪಾದಕ ಜಿ.ಎಸ್.ಗೋನಾಳ ಮತ್ತು ಉಪಾಧ್ಯಕ್ಷರುಗಳಾಗಿ ಹಿರಿಯ ಪತ್ರಕರ್ತರಾದ ವೈ.ಬಿ.ಜೂಡಿ ಮತ್ತು ಪರಮಾನಂದ ಯಾಳಗಿ ಅವರು ಆಯ್ಕೆಗೊಂಡಿದ್ದಾರೆ.
ಜಿಲ್ಲಾಧ್ಯಕ್ಷರಾಗಿದ್ದ ನಾಗರಾಜ ಸುಣಗಾರ ಅವರು ಉನ್ನತ ಮಟ್ಟದ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಹಿನ್ನಲೆಯಲ್ಲಿ ಸಂಘಕ್ಕೆ ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಸ್ವ-ಇಚ್ಚೆಯಿಂದ ಸಭೆಯಲ್ಲಿ ರಾಜೀನಾಮೆ ನೀಡಿರುವ ಪ್ರಯುಕ್ತ ಬುಧವಾರ ಮಧ್ಯಾಹ್ನ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರೆಲ್ಲರೂ ಸೇರಿ ಸಂಘಕ್ಕೆ ಉಪಾಧ್ಯಕ್ಷರಾಗಿದ್ದ ಜಿ.ಎಸ್.ಗೋನಾಳ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆಗೊಳಿಸಲಾಯಿತು.
ಅದರಂತೆ ತೆರವುಗೊಂಡಿದ್ದ ಗ್ರಾಮೀಣ ಮತ್ತು ನಗರ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಕೋಟೆ ಕರ್ನಾಟಕ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ವೈ.ಬಿ.ಜೂಡಿ ಹಾಗೂ ನವೋದಯ ದಿನಪತ್ರಿಕೆಯ ವರದಿಗಾರ ಪರಮಾನಂದ ಯಾಳಗಿ ಅವರು ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಾದಿಕ್ ಅಲಿ ತಿಳಿಸಿದ್ದಾರೆ. ಸದರಿ ನೇಮಕಗೊಂಡ ಪದಾಧಿಕಾರಿಗಳ ವಿವರ ರಾಜ್ಯ ಸಮಿತಿಗೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆದು ಈ ತಿಂಗಳ ಕೊನೆಯ ವಾರದಲ್ಲಿ ಅದ್ದೂರಿ ಪತ್ರಿಕಾ ದಿನಾಚರಣೆ ಮಾಡುವ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. 
ನಂತರ ನೂತನ ಅಧ್ಯಕ್ಷ ಜಿ.ಎಸ್.ಗೋನಾಳ ಅವರು ಮಾತನಾಡಿ, ನೆನೆಗುದಿಗೆ ಬಿದ್ದಿರುವ ಸಂಘದ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ತ್ವರೀತಗತಿಯಲ್ಲಿ ಎಲ್ಲಾ ಪತ್ರಕರ್ತರ ಸಹಕಾರದೊಂದಿಗೆ ನನ್ನ ಅಧಿಕಾರದ ಅಲ್ಪ ಅವಧಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಹಿತ ಮತ್ತು ಪತ್ರಕರ್ತರ ಹಿತ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.   
ಈ ಸಭೆಯಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಹರೀಶ ಹೆಚ್.ಎಸ್, ಜಿಲ್ಲಾ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ಖಜಾಂಚಿ ಹನುಮಂತ ಹಳ್ಳಿಕೇರಿ ಸೇರಿದಂತೆ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಪತ್ರಕರ್ತರಾದ ರಮೇಶ ಪವಾರ್, ಈರಣ್ಣ ಕಳ್ಳಿಮನಿ, ಫಕೀರಪ್ಪ ಗೋಟೂರು, ರಾಜಾಸಾಬ ತಾಳಿಕೇರಿ, ಮಂಜುನಾಥ ಕೋಳೂರು ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು. 
Please follow and like us:
error