ಬರದ ನಾಡಲ್ಲಿ ಸಂಪೂರ್ಣರಾತ್ರಿ ಸಂಗೀತ ಕಾರ್ಯಕ್ರಮ

ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನೇ ವರ್ಷಾಚರಣೆ 
ಕೊಪ್ಪಳ : ಇಲ್ಲಿನ ಶ್ರೀ ಶಾರದಾ ಸಂಗೀತ ಮತ್ತು ಸಂಸ್ಕೃತ ಶಿಕ್ಷಣ ಸಂಸ್ಥೆ (ರಿ) ೧೧ನೇ ವರ್ಷದ ಸಂಪೂರ್ಣ ರಾತ್ರಿ ಶಾಸ್ತ್ರೀಯ, ವಾದ್ಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಗರದ ರಾಘವೇಂದ್ರ ದೇವಸ್ಥಾನದ ಆವರಣದಲ್ಲಿ ದಿ.ಹನುಮಂತರಾವ್ ಬಂಡಿ ವೇದಿಕೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. 
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ|| ಕೆ.ಜಿ. ಕುಲಕರ್ಣಿಯವರು ನೆರವೇರಿಸಿ ಮಾತನಾಡುತ್ತಾ, ಶ್ರೀ ಶಾರದಾ ಸಂಗೀತ ಸಂಸ್ಥೆ ಸಂಗೀತ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಸಂಸ್ಥೆಯನ್ನು ಹುಟ್ಟು ಹಾಕಿದ ದಿ.ಹನುಮಂತರಾವ್ ಬಂಡಿಯವರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ. ಇಡೀ ತಮ್ಮ ಜೀವನವನ್ನು ಸಂಗೀತಕ್ಕೆ ಮುಡುಪಾಗಿಟ್ಟು ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆಂದರೆ ತಪ್ಪಾಗಲಾರದು ಎಂದು ಬಣ್ಣಿಸಿದರು. 
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಅಧ್ಯಕ್ಷತೆವಹಿಸಿ ಮಾತನಾಡಿ, ಹಲವಾರು ಕಲಾವಿದರು ಸಂಗೀತ ಲೋಕಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಸೂಕ್ತ ಸಹಾಯ-ಸಹಕಾರ ನೀಡಬೇಕಾಗಿರುವುದು ಅತ್ಯವಶ್ಯಕ. ಕಳೆದ ೧೧ ವರ್ಷಗಳಿಂದ ಸಂಗೀತಾಭಿಮಾನಿಗಳಿಗೆ ಇಂತಹ ಅಭೂತಪೂರ್ವ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುವುದು ಒಂದು ಸಾಧನೆಯೇ ಸರಿಯೇ. ಈ ಸಂಸ್ಥೆಯಿಂದ ಇಂತಹ ಕಾರ್ಯಕ್ರಮಗಳು ನಿರಂತರ ಜರುಗಿದ ಸಂಗೀತಾಸಕ್ತರಿಗೆ ಸಂಗೀತ ಸುಧೆಯನ್ನು ನೀಡಲಿ ಎಂದು ಶುಭ ಹಾರೈಸಿದರು.
ವಸಂತ ಪೂಜಾರರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಒಂದು ದಶಕದಿಂದಲೂ ಸಂಸ್ಥೆಯೊಂದಿಗೆ ನನಗೆ ಅತಿ ನಿಕಟ ಸಂಪರ್ಕವಿದ್ದು, ಎಂತಹ ಕಷ್ಟ ಕಾಲದಲ್ಲೂ ದಿ.ಹನುಮಂತರಾವ್ ಬಂಡಿಯವರು ತಮ್ಮ ಸಂಗೀತ ಸೇವೆಯನ್ನು ನಿಲ್ಲಿಸಿದ್ದಿಲ್ಲ. ಅಹೋರಾತ್ರಿ ಸಂಗೀತ ಕಾರ್ಯಕ್ರಮವನ್ನು ಪ್ರಾರಂಭಿಸಿವುದರೊಂದಿಗೆ ಕೊಪ್ಪಳ ಜನತೆಗೆ ಸಂಗೀತದ ಸವಿ ಉಣಬಡಿಸಿದ್ದಾರೆ. ಈ ಸಮಯದಲ್ಲಿ ಅವರನ್ನು ನೆನೆಸಿಕೊಳ್ಳುವುದು ಅತ್ಯಂತ ಅವಶ್ಯಕ. ಅವರು ಕಟ್ಟಿಕೊಂಡಿದ್ದ ಕನಸನ್ನು ಬೆಳೆಸುವುದು ಪ್ರತಿಯೊಬ್ಬ ಸಂಗೀತಾಸಕ್ತರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಇಂತಹ ಸಂಗೀತ ಕಾರ್ಯಕ್ರಮಗಳನ್ನು ಎಲ್ಲರೂ ಬೆಳೆಸಿ ಈ ಸಂಗೀತ ಸಂಸ್ಥೆಗೆ ಸಹಕಾರ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. 
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಹಿರಿಯ ಸಂಗೀತ ಕಲಾವಿದರಾದ ಮಾಧವರಾವ   ಇನಾಂದಾರ್, ಹನುಮಸಾಗರದ ವಾಜೇಂದ್ರಚಾರ್ಯ ಜೋಶಿ ಸೇರಿದಂತೆ ನಗರಸಭೆ ಸದಸ್ಯರಾದ ಇಂದಿರಾ ಭಾವಿಕಟ್ಟಿ, ವಿಷ್ಣು ತೀರ್ಥಗುಬ್ಬಿ, ವಿರುಪಾಕ್ಷಪ್ಪ ಮೋರನಾಳ, ಹಾಗೂ ನಗರ ಸಭೆಯ ಮಾಜಿ  ಸದಸ್ಯರಾದ   ಸುರೇಶ ಗಂಗೂರ್ ಹಾಗೂ ನ್ಯಾಯವಾದಿಗಳು ರಾಘವೇಂದ್ರ ಪಾನಘಂಟಿ ಮತ್ತಿತರರು ಉಪಸ್ಥಿತರಿದ್ದರು. 
ಈ ಕಾರ್ಯಕ್ರಮದಲ್ಲಿ ಧಾರವಾಡದ ಪ್ರಖ್ಯಾತ ಹಿಂದೂಸ್ಥಾನಿ ಗಾಯಕ ಕೈವಲ್ಯ ಕುಮಾರ ಗುರವ, ಗುಲಬರ್ಗಾ ಆಕಾಶವಾಣಿ ಬಾನ್ಸೂರಿ ವಾದಕರಾದ ಶೇಖ್ ಅಬ್ದುಲ್ಲಾ ಖಾಜಿ, ಗಂಗಾವತಿಯ ದೊಡ್ಡಯ್ಯ ಕಲ್ಲೂರು, ಹೈದ್ರಾಬಾದ್‌ನ ಬಾನ್ಸೂರಿ ವಾದಕರಾದ ಮಧುಪ್ಯಾಟಿ, ಸಂಗೀತ ಶಿಕ್ಷಕ ಹನುಮಂತರಾವ್ ಮಳ್ಳಿ, ಬೆಂಗಳೂರಿನ ಶಾಸ್ತ್ರೀಯ ಸಂಗೀತ ಗಾಯಕರಾದ ಶ್ರೀಮತಿ ಆತ್ಮಾ ವೆಂಕಟೇಶ,  ಶ್ರೀಮತಿ ಗೀತಾ ಹೆಬ್ಳೇಕರ್, ರಾಜ್ಯ ಕಲಾಶ್ರೀ ಪ್ರಶಸ್ತಿ ವಿಜೇತ ಶಾಸ್ತ್ರೀಯ ಗಾಯಕರಾದ  ಪ್ರಸಾದ ಜಿ.ಸುತಾರ, ಹುಬ್ಬಳ್ಳಿಯ ತಬಲಾ ಬಾಲ ಕಲಾವಿದ ಹೇಮಂತ ಜೋಶಿ, ಹಾಗೂ ತಬಲಾ ಕಲಾವಿದರಾದ ಗದಗನ ಹನುಮಂತ ಕೊಡಗಾನೂರು, ವೀರೇಶ್ವರ ಪುಣ್ಯಾಶ್ರಮದ ಗುರುನಾಥ ಜಿ.ಸುತಾರ, ಗುಲಬರ್ಗಾದ ಪಂಚಾಕ್ಷರಿ ಕಣವಿ ಹಾಗೂ ಸ್ಥಳೀಯ ಸಿತಾರ ವಾದಕ ಉಮೇಶರವರು ಪಾಲ್ಗೊಂಡು ತಮ್ಮ ಸಂಗೀತ ಸುಧೆಯಿಂದ ಜನಮನ ಸೂರೆಗೊಳಿಸಿದರು.
ಇದಕ್ಕೂ ಮುಂಚೆ ಪ್ರಾಧಿಕಾರದ ಅಧ್ಯಕ್ಷ  ಅಪ್ಪಣ್ಣ  ಪದಕಿ,  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಂಕರ ಬಿನ್ನಾಳ, ಗ್ರಾಮೀಣ ವೃತ್ತದ ಸಿ.ಪಿ.ಐ ವೆಂಕಟಪ್ಪ ನಾಯಕ, ಗುಪ್ತದಳದ ಮಾರುತಿ ಪೂಜಾರ ಮತ್ತಿತರರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ವಾದಿರಾಜ ಪಾಟೀಲ್ ಸ್ವಾಗತಿಸಿದರು, ಭೀಮಸೇನ ಇಂದರಗಿ ಕಾರ್ಯಕ್ರಮ ನಿರೂಪಿಸಿದರೆ ಶ್ರೀನಿವಾಸ ಜೋಶಿ ಕೊನೆಯಲ್ಲಿ ವಂದಿಸಿದರು. 
Please follow and like us:
error