ಭಕ್ತ ಸಾಗರದ ಮಧ್ಯ ಶರಣರ ದೀರ್ಘದಂಡ ನಮಸ್ಕಾರ

ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಮಹಾರಥೋತ್ಸವದ ಅಂಗವಾಗಿ ಎರಡನೆಯ ದಿನ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರವು ಜರುಗಿತು. ಬಳಗಾನೂರಿನ  ಶ್ರೀ ಶಿವಶಾಂತವೀರ ಶರಣರು ಶ್ರೀಮಠದ ದ್ವಾರಬಾಗಿಲಿನಿಂದ ಹಿಡಿದು ಶ್ರೀ ಗವಿಮಠದ ಬೆಟ್ಟದ ಮೇಲಿನ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಹಾಗೂ ಶಿವಶಾಂತ ಶಿವಯೋಗಿಗಳ ಗದ್ದುಗೆಯವರೆಗೆ ಹೂವಿನ ಹಾಸಿಗೆಯ ಮೇಲೆ ಭಕ್ತಿಯ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕಿದರು.  ಶರಣರ ಹಿಂದೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡ ಅಪಾರ ಭಕ್ತ ಸಮೂಹವೇ ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿಕೊಂಡರು.  ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ತಮ್ಮ ಗುರುಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆ ಪಡೆದ ನಂತರ ಅಂದಿನಿಂದ ನಿರಂತರವಾಗಿ ಸುಮಾರು ೫೦ ವರ್ಷಗಳಿಂದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಅವರ ಲಿಂಗೈಕ್ಯದ ನಂತರ ಬಳಗಾನೂರಿನ ಶರಣಾದ ಶ್ರೀ ಶಿವಶಾಂತವೀರ ಶರಣರು ತಮ್ಮ ಗುರುಗಳ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮವನ್ನು ನೋಡಲು ಜನಸಾಗರವೇ  ಆಗಮಿಸಿ ಶರಣರ ದರ್ಶನಾಶಿರ್ವಾದ ಪಡೆದರು. ಹೊಂಬಳ, ಚಿಕ್ಕೇನಕೊಪ್ಪ, ಸೂಡಿ ಗ್ರಾಮದ ಸದ್ಭಕ್ತರ ಭಜನಾ ಮಂಡಳಿಯವರ ಭಕ್ತಿಗೀತೆಗಳು, ಜಯಘೋಷಗಳು, ಭಕ್ತಿ ಗೀತೆಗಳು, ಭಕ್ತಿಭಾವದ ಜಯಘೋಷಗಳು ಮುಗಿಲು ಮುಟ್ಟಿ ಭಕ್ತರೆಲ್ಲರ ಎದೆಯಲ್ಲಿ ‘ಗವಿಸಿದ್ಧ, ಗವಿಸಿದ್ಧ’ ಎಂಬ ವಾಣಿ ಪ್ರತಿಧ್ವನಿಸಿತು.

Leave a Reply