fbpx

ದಾಬೋಲ್ಕರ್ ನೀಡಿದ ಬೆಳಕು

ಈ ದೇಶದ ಪೊಲೀಸ್ ಬೇಹುಗಾರಿಕೆ ವ್ಯವಸ್ಥೆಯ ಬಗ್ಗೆ ಒಮ್ಮೆಮ್ಮೆ ಅಚ್ಚರಿಯಾಗು ತ್ತದೆ. ಅದು ಯಾರನ್ನು ಮುಗಿಸಬೇಕೆಂದು ಗುರಿಯಿಟ್ಟು ಕೆಲಸ ಮಾಡುತ್ತದೋ ಅವರನ್ನು ಮುಗಿಸುತ್ತದೆ. ಉಗ್ರಗಾಮಿಗಳೆಂದು ಯಾರ್ಯಾರನ್ನೋ ಕತ್ತಲು ಕೋಣೆಗೆ ತಳ್ಳುತ್ತದೆ. ಕೋರ್ಟಿನಲ್ಲಿ ಆರೋಪ ಮುಕ್ತರಾಗಿ ಬರುತ್ತಾರೆಂಬ ಶಂಕೆಯ ಮೇಲೆ ಕೆಲವರನ್ನು ಎನ್‌ಕೌಂಟರ್ ಮಾಡಿ ಕೊಲ್ಲುತ್ತದೆ. ಸೆರಮನೆಗೆ ತಳ್ಳಬೇಕಾದವರನ್ನು ಸುಮ್ಮನೇ ಬಿಡುತ್ತದೆ. ಅಪರೂಪಕ್ಕೆ ಒಮ್ಮೆ ಹೇಮಂತ ಕರ್ಕರೆ ಅವರಂಥ ದಕ್ಷ ಸೆಕ್ಯುಲರ್ ಪೊಲೀಸ್ ಅಧಿಕಾರಿಗಳಿಂದಾಗಿ ಮಾಲೆಗಾಂವ್ ಬಾಂಬ್ ಸ್ಫೋಟದ ದೇಶದ್ರೋಹಿ ಪಾತಕಿಗಳು ಜೈಲು ಕಂಬಿ ಎಣಿಸುತ್ತಾರೆ.

 ಇಂಥ ಪೊಲೀಸ್ ವ್ಯವಸ್ಥೆ ಅನೇಕ ಬಾರಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಂಶಯಾಸ್ಪದವಾಗಿ ವಿಫಲವಾಗುತ್ತದೆ. ಛತ್ತೀಸ್‌ಗಡದ ಕಾರ್ಮಿಕ ನಾಯಕರಾಗಿದ್ದ ಶಂಕರ ಗುಹಾ ನಿಯೋಗಿ ಹಂತಕರನ್ನು ಪತ್ತೆ ಹಚ್ಚಲು ಪರದಾಡಿದ ಕತೆ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದ ಅಂಧಶ್ರದ್ಧೆ ವಿರೋಧಿ ಹೋರಾಟಗಾರ ನರೇಂದ್ರ ದಾಬೋಲ್ಕರ್ ಅವರನ್ನು ಕೋಮುವಾದಿ ಫ್ಯಾಸಿಸ್ಟ್ ಹಂತಕರು ಕೊಲೆ ಮಾಡಿ ಒಂದು ವರ್ಷ ಗತಿಸಿದರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸು ವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲಗೊಂಡಿದೆ. ಬರೀ ಪೊಲೀಸ್ ವೈಫಲ್ಯ ಮಾತ್ರವಲ್ಲ ಮಹಾರಾಷ್ಟ್ರ ಸರಕಾರದ ಲೋಪವೂ ಇದರಿಂದ ಬಟ್ಟ ಬಯಲಾಗಿದೆ. ಪುಣೆಯ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ದಾಬೋಲ್ಕರ್ ಅಭಿಮಾನಿಗಳು, ರಂಗಭೂಮಿ ಕಾರ್ಯಕರ್ತರು, ಕಲಾವಿದರು, ಕವಿಗಳು ಕಳೆದ ಆಗಸ್ಟ್ 20ರಂದು ಸಂಜೆ ಸ್ಥಳೀಯ ಓಂಕಾರೇಶ್ವರ್ ದೇವಾಲಯದ ಬಳಿ ಸಭೆ ಸೇರಿ ಕಂದಾಚಾರದ ವಿರುದ್ಧ ಹೋರಾಟ ನಡೆಸಿ ಇದೇ ಜಾಗದಲ್ಲಿ ಬಲಿದಾನ ಮಾಡಿದ ದಾಬೋಲ್ಕರ್ ಅವರಿಗೆ ಗೌರವ ಸಲ್ಲಿಸಿದರು. ‘‘ಫುಲೆ, ಶಾಹು, ಅಂಬೇಡ್ಕರ್ ಹಮ್ ಸಬ್ ಹೈ ದಾಬೋಲ್ಕರ್’’ ಎಂದು ಘೋಷಣೆ ಕೂಗು ತ್ತಿದ್ದ ಸಾವಿರಾರು ಯುವಕರು ದಾಬೋಲ್ಕರ್ ಹಂತಕರನ್ನು ಪತ್ತೆ ಹಚ್ಚುವಲ್ಲಿ ವಿಫಲಗೊಂಡ ಸರಕಾರವನ್ನು, ಪೊಲೀಸರನ್ನು ಖಂಡಿಸಿದರು. ಒಂದು ವರ್ಷದ ತನಿಖೆ ನಂತರವೂ ಅಪರಾಧಿಗಳು ಯಾಕೆ ಸಿಕ್ಕಿಲ್ಲ ಎಂದು ಪ್ರಶ್ನಿಸಿದರು. ದಾಬೋಲ್ಕರ್ ಹಂತಕರನ್ನು ಪತ್ತೆ ಹಚ್ಚಲು ವಿಫಲಗೊಂಡ ಮಹಾರಾಷ್ಟ್ರದ ಕಾಂಗ್ರೆಸ್- ಎನ್‌ಸಿಪಿ ಮೈತ್ರಿಕೂಟದ ಸರಕಾರ ತನಿಖೆ ಯನ್ನು ಸಿಬಿಐಗೆ ಒಪ್ಪಿಸಿತು. ಸಿಬಿಐ ತನಿಖೆ ಮುಂದುವರಿಸಿದರೂ ಪ್ರಯೋಜನ ವಾಗಲಿಲ್ಲ. ಒಬ್ಬ ಪ್ರಗತಿಪರ ಚಿಂತಕನನ್ನು , ವಿಚಾರವಾದಿ ಹೋರಾಟಗಾರನನ್ನು ಕೊಂದು ದಕ್ಕಿಸಿಕೊಂಡ ಶಕ್ತಿಗಳು ಯಾರೆಂದು ಎಲ್ಲರಿಗೂ ಗೊತ್ತಿದೆ. ಆದರೆ ಈ ಪಾತಕಿಗಳನ್ನು ಹಿಡಿದು ದಂಡಿಸುವ ಸಾಮರ್ಥ್ಯ ತನಿಖಾ ತಂಡಕ್ಕಿರ ಲಿಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ. ನರೇಂದ್ರ ದಾಬೋಲ್ಕರ್ ಅವರನ್ನು ಹತ್ಯೆ ಮಾಡಿದ ಕರಾಳಶಕ್ತಿಗಳ ಬೇರು ಅತ್ಯಂತ ಆಳವಾಗಿದೆ. ಮಂತ್ರ ತಂತ್ರಗಳ ಮೂಲಕ ಕೋಟ್ಯಂತರ ರೂ. ಕೊಳ್ಳೆ ಹೊಡೆಯುವ ಈ ಫಟಿಂಗರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ. ಕೋಮುವಾದಿ ಶಕ್ತಿಗಳ ಬೆಂಗಾವಲಿದೆ. ‘‘ಇದನ್ನು ತನಿಖೆಯ ವೈಫಲ್ಯ ಎನ್ನುವ ಬದಲಾಗಿ ಯಾರನ್ನೋ ರಕ್ಷಿಸಲು ಪೊಲೀಸರು ಯತ್ನಿಸುತ್ತಿದ್ದಾರೆ’’ ಎಂದು ದಾಬೋಲ್ಕರ್ ಪುತ್ರ ಹಮೀದ್ ದಾಬೋಲ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಹಮೀದ್ ಹೆಸರು ಕೇಳಿ ಅಚ್ಚರಿಯಾಗ ಬಹುದು. ಆದರೆ ಮಹಾರಾಷ್ಟ್ರದ ವಿಚಾರವಾದಿ ಹಮೀದ್ ದಲವಾಯಿ ಅವರ ಹೆಸರನ್ನು ದಾಬೋಲ್ಕರ್ ತಮ್ಮ ಮಗನಿಗೆ ಇಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಜ್ಯೋತಿಷ್ಯ, ಮಾಟಮಂತ್ರ, ವಾಸ್ತುಶಾಸ್ತ್ರ ಸೇರಿದಂತೆ ಅಮಾಯಕರನ್ನು ವಂಚಿಸುವ ಎಲ್ಲ ಕಂದಾಚಾರಗಳನ್ನು ವಿರೋಧಿಸಿ ದಾಬೋಲ್ಕರ್ ಏಕಾಂಗಿಯಾಗಿ ಹೋರಾ ಡುತ್ತ ಬಂದರು. ತಾನೇ ‘‘ಮಹಾರಾಷ್ಟ್ರ ಅಂಧಃಶ್ರದ್ಧೆ ನಿರ್ಮೂಲನಾ ಸಮಿತಿ’’ ಎಂಬ ಸಂಘಟನೆಯೊಂದನ್ನು 1989ರಲ್ಲಿ ಕಟ್ಟಿ ಬೆಳೆಸಿದರು. ಈಗ ಈ ಸಂಘಟನೆ ಮಹಾರಾಷ್ಟ್ರದ ಹಳ್ಳಿ ಹಳ್ಳಿಗಳಿಗೆ ವಿಸ್ತರಿ ಸುತ್ತಿದೆ. ಇವರಿಂದ ಜನರನ್ನು ವಂಚಿಸುವ ಮಂತ್ರವಾದಿಗಳ ದಂಧೆಗೆ ದೊಡ್ಡ ಏಟು ಬಿದ್ದಿತ್ತು. ಅವರೆಲ್ಲ ಒಂದುಗೂಡಿ ದಾಬೋಲ್ಕರ್‌ರನ್ನು ಮುಗಿಸಲು ಸಂಚು ರೂಪಿಸಿದ್ದರು. ಆರೆಸ್ಸೆಸ್, ಶಿವಸೇನೆ, ವಿಶ್ವಹಿಂದೂ ಪರಿಷತ್ತು, ಹಿಂದು ಜನ ಜಾಗೃತಿ ಸಮಿತಿ ಸನಾತನದಂಥ ಕೋಮುವಾದಿ ಸಂಘಟನೆಗಳಿಗೆ ದಾಬೋಲ್ಕರ್‌ರನ್ನು ಕಂಡರೆ ಆಗುತ್ತಿರಲಿಲ್ಲ. ಅಜ್ಞಾನದ ಮೇಲೆ ಹಿಂದುತ್ವದ ಸಾಮ್ರಾಜ್ಯ ಕಟ್ಟಲು ಹೊರಟಿರುವ ಈ ಶಕ್ತಿಗಳು ನೇರವಾಗಿ ಹಂತಕರೊಂದಿಗೆ ಗುರುತಿಸಿಕೊಂಡಿಲ್ಲ ವಾದರೂ ಗಾಂಧೀಜಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆಗೆ ಮರೆಯಲ್ಲಿ ನಿಂತು ಕಣ್ಸನ್ನೆ ಮಾಡಿದಂತೆ ಮಾಡಿ ರಬಹುದೆಂದು ಪುಣೆಯ ಜನ ಮಾತಾಡಿಕೊಳ್ಳುತ್ತಾರೆ. ನಕಲಿ ದೇವಮಾನವರು, ಫಟಿಂಗ ಸನ್ಯಾಸಿಗಳ ಪವಾಡಗಳನ್ನು ಬಯಲಿ ಗೆಳೆಯುತ್ತಲೇ ಬಂದ ದಾಬೋಲ್ಕರ್ 1990ರಲ್ಲಿ ರತ್ನಾಗಿರಿಯಲ್ಲಿ ನರೇಂದ್ರ ಮಹಾರಾಜ್ ಎಂಬ ‘‘ದೇವ ಮಾನವ’’ನ ಆಶ್ರಮದ ಮೇಲೆ ತಮ್ಮ ಸಂಘಟನೆಯ ಕಾರ್ಯಕರ್ತರೊಂದಿಗೆ ದಾಳಿ ಮಾಡಿ ಮಂತ್ರ ತಂತ್ರದಿಂದ ಕಾಯಿಲೆಯನ್ನು ವಾಸಿ ಮಾಡುವುದಾಗಿ ವಂಚಿಸುತ್ತಿದ್ದ ಆತನ ಮುಖವಾಡ ಕಳಚಿದರು. ಆ ದಿನ ನರೇಂದ್ರ ಮಹಾರಾಜ ತಮ್ಮ ಕಾಯಿಲೆ ಗುಣಪಡಿಸುತ್ತಾನೆ ಎಂದು ನಂಬಿ ಸುಮಾರು 20 ಸಾವಿರ ಮಂದಿ ಅಲ್ಲಿ ಸೇರಿದ್ದರು. ಆದರೆ ನರೇಂದ್ರ ದಾಬೋಲ್ಕರ್ ಕೇವಲ ತಮ್ಮ 15 ಮಂದಿ ಬೆಂಬಲಿಗ ರೊಂದಿಗೆ ಆಶ್ರಮಕ್ಕೆ ನುಗ್ಗಿ ಆತನನ್ನು ಚರ್ಚೆಗೆ ಕರೆದು ಸವಾಲು ಹಾಕಿದರು. ಕೊನೆಗೆ ನರೇಂದ್ರ ಮಹಾರಾಜ್ ಸೋತು ದಾಬೋಲ್ಕರ್‌ರಿಗೆ ಶರಣಾಗತನಾದ. ಕರ್ನಾಟಕದಲ್ಲಿ ಎಂಬತ್ತರ ದಶಕದಲ್ಲಿ ಡಾ.ಎಚ್.ನರಸಿಂಹಯ್ಯನವರು ಪುಟ್ಟಪರ್ತಿ ಸಾಯಿಬಾಬಾಗೆ ಈ ರೀತಿ ಬೆವರಿಳಿಸಿದ್ದರು. 2000ನೆ ಇಸವಿಯಲ್ಲಿ ಅಹ್ಮದ್‌ನಗರ ಜಿಲ್ಲೆಯ ಶನಿಸಿಂಗಣಾಪುರ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಆಗ್ರಹಿಸಿ ಇಂಥದೇ ಬೃಹತ್ ಆಂದೋಲನ ಆರಂಭಿಸಿ, ಕೊನೆಗೆ ನ್ಯಾಯಾಲಯಕ್ಕೆ ಹೋಗಿ ದಾಬೋಲ್ಕರ್ ಜಯಶಾಲಿಯಾದರು. ಇದರಿಂದ ರೊಚ್ಚಿಗೆದ್ದ ಹಿಂದು ಜನಜಾಗೃತಿ ಸಮಿತಿ, ಸನಾತನ ಸಂಸ್ಥಾ ದಂಥ ಸಂಘಟನೆಗಳು ದಾಬೋಲ್ಕರ್ ವಿರುದ್ಧ ಅಪಪ್ರಚಾರ ನಡೆಸಿದವು. ಸನಾತನ ಸಂಸ್ಥಾ ಪತ್ರಿಕೆಯ ಸಂಪಾದಕೀಯದಲ್ಲಿ ‘‘ದೇವರ ಇಚ್ಛೆಯಂತೆ ದಾಬೋಲ್ಕರ್ ಹತ್ಯೆ ನಡೆದಿದೆ’’ ಎಂದು ಬರೆಯಲಾಯಿತು. ಮೂಢನಂಬಿಕೆಗಳನ್ನು ನಿಷೇಧಿಸ ಬೇಕೆಂದು ದಾಬೋಲ್ಕರ್ ಹೋರಾಡು ತ್ತಲೇ ಬಂದರು. ಕೊನೆಗೆ ಅವರ ಹತ್ಯೆಯ ನಂತರ ಮಹಾರಾಷ್ಟ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಬ್ಲಾಕ್ ಮ್ಯಾಜಿಕ್‌ನಂಥ ಮೂಢನಂಬಿಕೆಗಳನ್ನು ನಿಷೇಧಿಸಿತು. ಈ ಕಾನೂನು ಜಾರಿಗೊಂಡ ನಂತರ ರಾಜ್ಯದಲ್ಲಿ ನರಬಲಿ, ಮಹಿಳೆಯರ ಲೈಂಗಿಕ ಶೋಷಣೆಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ. ಸುಮಾರು 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ದಾಬೋಲ್ಕರ್‌ರ 20 ವರ್ಷಗಳ ಹೋರಾಟಕ್ಕೆ ದೊರೆತ ಜಯವಾಗಿದೆ. ಇದರಿಂದ ಹತಾಶಗೊಂಡ ವಂಚಕ ಕಂದಾಚಾರಿ ಶಕ್ತಿಗಳು ದಾಬೋಲ್ಕರ್‌ರನ್ನು ಕೊಂದು ಹಾಕಿದವು. ಕೊಲೆ ರಾಜಕೀಯ ಮಹಾರಾಷ್ಟ್ರಕ್ಕೆ ಹೊಸದಲ್ಲ. ಶಿವಸೇನೆ ಕಣ್ಣು ಬಿಟ್ಟಾಗಲೇ ಮಹಾರಾಷ್ಟ್ರಕ್ಕೆ ಅದು ಕಾಲಿರಿ ಸಿತು. 1970ರಲ್ಲಿ ಮುಂಬೈ ಕಮ್ಯುನಿಸ್ಟ್ ಶಾಸಕ ಕೃಷ್ಣ ದೇಸಾಯಿ ಅವರನ್ನು ಕರಾಳ ಶಕ್ತಿಗಳು ಕೊಂದು ಹಾಕಿದವು. ದಾಬೋಲ್ಕರ್‌ರನ್ನು ಹತ್ಯೆ ಮಾಡಿದ ನಂತರ ಅವರ ವಿಚಾರವಾದಿ ಸಂಘಟನೆ ರಾಜ್ಯದ ತುಂಬ ಪ್ರಭಾವಶಾಲಿಯಾಗಿ ಬೆಳೆದಿದೆ. ರಾಜ್ಯದಲ್ಲಿ ಸುಮಾರು 250 ಶಾಖೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಐದು ಸಾವಿರ ಸ್ವಯಂ ಸೇವಕರು ಕಂದಾಚಾರದ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ತಮ್ಮ ನಾಯಕನನ್ನು ಕೊಂದ ಹಂತಕರನ್ನು ಸರಕಾರ ಇನ್ನು ಬಂಧಿಸಿಲ್ಲವಲ್ಲ ಎಂಬ ನೋವು ಅವರನ್ನು ಕಾಡುತ್ತಲೇ ಇದೆ. ದಾಬೋಲ್ಕರ್ ಅವರು ತಮ್ಮನ್ನು ತಾವು ಸುಟ್ಟುಕೊಂಡು ಅಂಧಕಾರದಲ್ಲಿ ಬೆಳಕಿನ ಕಿರಣ ಚೆಲ್ಲಿದರು. ಇಂಥ ಬಲಿದಾನದ ನೆತ್ತರೆಣ್ಣೆಯ ಬೆಳಕೇ ಮಾನವ ಕೋಟಿಯನ್ನು ಶತಮಾನಗಳಿಂದ ನಡೆಸಿಕೊಂಡು ಬಂದಿದೆ.
-varthabharati
Please follow and like us:
error

Leave a Reply

error: Content is protected !!