ಆನೆಗೊಂದಿ ಉತ್ಸವ ಸಿದ್ಧತೆ ಕಾರ್ಯಗಳು ತ್ವರಿತಗೊಳಿಸಿ- ಶಿವರಾಜ ತಂಗಡಗಿ

ಕೊಪ್ಪಳ ಏ. : ಇದೇ ಏ. ೧೧ ಮತ್ತು ೧೨ ರಂದು ವಿಜೃಂಭಣೆಯಿಂದ ಆನೆಗೊಂದಿ ಉತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಸಿದ್ಧತೆಯ ಕಾರ್ಯಗಳಿಗೆ ವೇಗ ನೀಡುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಆನೆಗೊಂದಿ ಉತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಆನೆಗೊಂದಿ ಉತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಸಚಿವರುಗಳಿಗೆ ಆಹ್ವಾನವನ್ನು ನೀಡಲಾಗಿದೆ.  ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವಂತಾಗಲು, ಈಗಾಗಲೆ ವೇದಿಕೆ ದುರಸ್ತಿ ಹಾಗೂ ನೆಲ ಸಮತಟ್ಟುಗೊಳಿಸುವ ಕಾರ್ಯ ಆರಂಭವಾಗಿದ್ದು, ಮುಖ್ಯ ವೇದಿಕೆಗೆ ಶ್ರೀ ಕೃಷ್ಣದೇವರಾಯ ವೇದಿಕೆ ಹಾಗೂ ಸಮಾನಾಂತರ ವೇದಿಕೆಗೆ ವಿದ್ಯಾರಣ್ಯ ವೇದಿಕೆ ಎಂದು ಹೆಸರಿಡಲು ನಿರ್ಧಾರವಾಗಿದೆ.  ಉತ್ಸವ ಆಚರಣೆಗೆ ೧೭ ಉಪ ಸಮಿತಿಗಳನ್ನು ರಚಿಸಿದ್ದು, ಆಯಾ ಸಮಿತಿಯ ಅಧಿಕಾರಿಗಳಿಗೆ ವಹಿಸಿರುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು.  ಉತ್ಸವಕ್ಕೆ ಸುಮಾರು ೨೫೦ ಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದು, ಏ. ೧೧ ಮತ್ತು ೧೨ ಎರಡೂ ದಿನಗಳಂದು ಸ್ಥಳೀಯರಿಗೇ ಆದ್ಯತೆ ನೀಡಬೇಕು.  ಉತ್ಸವ ನಿಮಿತ್ಯ ಆನೆಗೊಂದಿ ಪ್ರವೇಶದ್ವಾರ ಹಾಗೂ ವೇದಿಕೆಗಳಿಗೆ ಆಕರ್ಷಕ ಹೂವಿನ ಅಲಂಕಾರ ಮಾಡಬೇಕು. ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಏ. ೦೮ ರಂದು ಸಂಜೆ ೫ ಗಂಟೆಗೆ ಆನೆಗೊಂದಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗುವುದು, ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಕಲಾವಿದರ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು, ಉತ್ಸವ ನಿಮಿತ್ಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಈಗಾಗಲೆ ೩೫ ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.  
  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply