ರಾಜ್ಯ ಸರಕಾರದ ಭವಿಷ್ಯ ನಿರ್ಧರಿಸಲಿರುವ ‘ಹಾವೇರಿ ಸಮಾವೇಶ’ಕ್ಕೆ ಕ್ಷಣಗಣನೆ;

ಬಿಎಸ್‌ವೈ ಹೆಗಲಿಗೆ ಕೆಜೆಪಿ ಸಾರಥ್ಯ
 ರಾಜ್ಯ ರಾಜಕೀಯಕ್ಕೆ ಹೊಸ ದಿಕ್ಸೂಚಿ ಎಂದೇ ಹೇಳಲಾಗುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಾಳೆ(ಡಿ.9) ಹಾವೇರಿಯಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ದ ‘ಐತಿಹಾಸಿಕ’ ಸಮಾವೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ಭವಿಷ್ಯ ನಿರ್ಧರಿಸಲಿರುವ ಹಾವೇರಿ ಸಮಾವೇಶದಲ್ಲೆ ಬಿಎಸ್‌ವೈ ಕೆಜೆಪಿ ಸಾರಥ್ಯವನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶ ರಾಜಕೀಯ ನಾಯಕರು ಹಾಗೂ ಜನ ಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ.
ಸಮಾವೇಶದಲ್ಲಿ ಪಾಲ್ಗೊಳುವ ಬಿಜೆಪಿ ಶಾಸಕರು, ಸಂಸದರು ಹಾಗೂ ಮುಖಂಡರ ಮೇಲೆ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆಡೆ ಮಾಡಿದೆ. ಅಲ್ಲದೆ, ಸಮಾವೇಶದಲ್ಲಿ ಯಾವ-ಯಾವ ಮಂತ್ರಿಗಳು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಸಜ್ಜುಗೊಂಡ ಮೈದಾನ: ನಗರದ ಕೆಎಲ್‌ಇ ಸಂಸ್ಥೆಯ ಜಿಎಚ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಸಮಾವೇಶಕ್ಕೆ ಅದ್ದೂರಿ ಸಿಂಗಾರ ಮಾಡಲಾಗಿದ್ದು, ನಗರದಲ್ಲಿ ಎಲ್ಲಿ ನೋಡಿದರೂ, ಮಾಜಿ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರಗಳ ಆಳೆತ್ತರ ಕಟೌಟ್‌ಗಳು, ಬಂಟಿಂಗ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಸರಿ ಸುಮಾರು ಹದಿನೈದು ಎಕ್ರೆ ಪ್ರದೇಶದಲ್ಲಿ ಸಮಾವೇಶಕ್ಕೆ 5 ಲಕ್ಷ ಚದರಡಿ ವಿಸ್ತೀರ್ಣದ ಬೃಹತ್ ವೇದಿಕೆ ಸಿದ್ದವಾಗಿದ್ದು, 150 ಧ್ವನಿ ವರ್ಧಕಗಳು, 28 ಸೌಂಡ್ ಸಿಸ್ಟಂ, 25 ಎಲ್‌ಸಿಡಿ ಸಿಸ್ಟಂ, 100 ಟಿವಿ ಪರದೆಗಳನ್ನು ಅಳವಡಿಸಲಾಗಿದೆ. ಅಲ್ಲದೆ ಬಿಎಸ್‌ವೈ ಅವರು ನೇರವಾಗಿ ವೇದಿಕೆಗೆ ಆಗಮಿಸಲು ಮುಖ್ಯ ವೇದಿಕೆಯಲ್ಲಿ 12 ಅಡಿಗಳಷ್ಟು ದಾರಿ ವ್ಯವಸ್ಥೆ ಕಲ್ಪಿಸಲಾಗಿದೆ.
5 ಲಕ್ಷ ಮಂದಿಯ ನಿರೀಕ್ಷೆ: ಹಾವೇರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 5 ಲಕ್ಷ ಮಂದಿ ಸೇರುವ ನಿರೀಕ್ಷೆ ಇದ್ದು, 2 ಲಕ್ಷ ಮಂದಿ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕರನ್ನು ಸಮಾವೇಶದ ಸ್ಥಳಕ್ಕೆ ಕರೆತರಲು 16 ಸಾವಿರಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 11ಗಂಟೆಯ ಸುಮಾರಿಗೆ ಆರಂಭಗೊಳ್ಳಲಿರುವ ಉದ್ಘಾಟನಾ ಸಮಾರಂಭದ ಚಿತ್ರಿಕರಣಕ್ಕೆ ಹೆಲಿಕಾಪ್ಟರ್ ಬಳಸಿಕೊಳ್ಳಲಾಗುತ್ತಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾಂವಿ, ರಾಣಿಬೆನ್ನೂರು, ಬ್ಯಾಡಗಿ, ಹೀರೆಕೇರೂರು, ಹಾನಗಲ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನ ಸಾಗರವೇ ಹರಿದು ಬರುವ ನಿರೀಕ್ಷೆ ಇದೆ. ಅಲ್ಲದೆ, ಮೈಸೂರು, ಹಾಸನ ಮಾರ್ಗದಲ್ಲಿ ಹಾವೇರಿಗೆ ವಿಶೇಷ ರೈಲಿನ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.
ಬಿಜೆಪಿಯಲ್ಲಿನ ಆಂತರಿಕ ಬೇಗುದಿಯಿಂದ ಬೇಸತ್ತು ಕರ್ನಾಟಕ ಜನತಾ ಪಕ್ಷ ಕಟ್ಟಲು ಮುಂದಾಗಿರುವ ಯಡಿಯೂರಪ್ಪ, ನಾಳಿನ ಸಮಾವೇಶದ ಮೂಲಕ ತನ್ನ ರಾಜಕೀಯ ವಿರೋಧಿಗಳಿಗೆ ಯಾವ ಸಂದೇಶ ನೀಡಲಿದ್ದಾರೆಂಬುದು ಎಲ್ಲರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.
ಇವರೆಲ್ಲ ಹೋಗ್ತಾರಾ…ಸಮಾವೇಶದಲ್ಲಿ ಬಿಎಸ್‌ವೈ ಆಪ್ತ ಸಚಿವರಾದ ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಸಿ.ಎಂ.ಉದಾಸಿ, ಮುರುಗೇಶ್ ನಿರಾಣಿ, ವಿ. ಸೋಮಣ್ಣ, ಸುನೀಲ್ ವಲ್ಯಾಪುರೆ, ಶಾಸಕರಾದ ಲಕ್ಷ್ಮಣ ಸವದಿ, ನರಸಿಂಹಸ್ವಾಮಿ, ಬಿ.ಪಿ. ಹರೀಶ್, ಸಿ.ಸಿ.ಪಾಟೀಲ, ಎಚ್.ಹಾಲಪ್ಪ, ನೆಹರೂ ಓಲೆಕಾರ್, ಶ್ರೀಶೈಲಪ್ಪ ಬಿದರೂರ, ಎಂ. ಚಂದ್ರಪ್ಪ, ಮೇಲ್ಮನೆ ಸದಸ್ಯರಾದ ಎಂ.ಡಿ.ಲಕ್ಷ್ಮಿನಾರಾಯಣ, ಲೇಹರ್ ಸಿಂಗ್, ಭಾರತಿಶೆಟ್ಟಿ, ಬಿ.ಜೆ. ಪುಟ್ಟಸ್ವಾಮಿ, ಮುಮ್ತಾಝ್ ಅಲಿಖಾನ್, ಶಿವರಾಜ್ ಸಜ್ಜನ ಸೇರಿದಂತೆ ಹಲವು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಈ ಮಧ್ಯೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಹಲವು ಮುಖಂಡರು ಕೆಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ದಕ್ಷಿಣ ಭಾರತದ ರಾಜ್ಯ ಬಿಜೆಪಿ ಸರಕಾರ ಅಳಿವು-ಉಳಿವಿನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ನಾಳಿನ ಹಾವೇರಿ ಸಮಾವೇಶ ವಹಿಸಲಿದೆ.

        ಬ್ಯಾನರ್ ಹಾಕಿಕೊಳ್ಳುವ ಮೂಲಕ ಕೊಪ್ಪಳ ಸಂಸದರ ಪುತ್ರ ನೇರವಾಗಿ ಕೆಜಿಪಿಯಲ್ಲಿ ಭಾಗವಹಿಸಲಿದ್ದೇವೆ ಎಂದು ಸಾರಿದ್ದಾರೆ.ಗಂಗಾವತಿಯಿಂದ ಬಿಜೆಪಿಯ ಒಂದು ಗುಂಪು ,ಕೊಪ್ಪಳ ,ಕುಷ್ಟಗಿ ಹಾಗೂ ಯಲಬುರ್ಗಾದಿಂದಲೂ ನಾಳೆ ವಾಹನಗಳು ಹೊರಡಲಿವೆ.
             ನೇರವಾಗಿ ಗುರುತಿಸಿಕೊಳ್ಳದಿದ್ದರೂ  ಶಾಸಕರು ತಮ್ಮ ಬೆಂಬಲಿಗರನ್ನು ಮುಂದೆಬಿಡುತ್ತಾರೆ ಎನ್ನಲಾಗುತ್ತಿದೆ.

Leave a Reply