ಬಿಜೆಪಿ ಪರ ಪಕ್ಷೇತರರು

ಬೆಂಗಳೂರು,   ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಐದು ಮಂದಿ ಪಕ್ಷೇತರರು ಬಿಜೆಪಿ ಪರ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷೇತರ ಶಾಸಕರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಸದಾನಂದ ಗೌಡರೊಂದಿಗೆ ಮಾತುಕತೆ ನಡೆಸಿದ್ದು, ಸಿಎಂ ಪರವಾಗಿ ಮತ ಚಲಾಯಿಸಲು ಮುಂದಾಗಿದ್ದಾರೆ.
ಐವರು ಪಕ್ಷೇತರ ಶಾಸಕರ ಪೈಕಿ ನಾಲ್ವರು ಸಭೆಯಲ್ಲಿ ಹಾಜರಿದ್ದು, ತಮ್ಮ ಅಭಿಪ್ರಾಯಗಳನ್ನು ಸಿಎಂರೊಂದಿಗೆ ಹಂಚಿಕೊಂಡಿದ್ದಾರೆ.
ವೆಂಕಟರಮಣಪ್ಪರ ಅನುಪಸ್ಥಿತಿಯಲ್ಲಿ ಪಕ್ಷೇತರರಾದ ಡಿ.ಸುಧಾಕರ್, ಗೂಳಿಹಟ್ಟಿ ಶೇಖರ್, ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ ಸಭೆಯಲ್ಲಿ ಭಾಗವಹಿಸಿದ್ದು, ಬಳಿಕ ತಾವು ಸಿಎಂ ಪರ ಮತ ಚಲಾಯಿಸುವುದಾಗಿ ಘೋಷಿಸಿದ್ದಾರೆ. ಅನಂತರ ಶಾಸಕರ ಭವನದಲ್ಲಿ ಐದು ಮಂದಿ ಪಕ್ಷೇತರರು ಸಭೆ ನಡೆಸಿ ತಮ್ಮ ಅಧಿಕೃತ ನಿರ್ಧಾರವನ್ನು ಘೋಷಿಸಿದರು. ಈ ವೇಳೆ ಮಾತನಾಡಿದ ಶಿವರಾಜ ತಂಗಡಗಿ, ನಾವು ಯಾವುದೇ ಆಮಿಷ, ಆಸೆಗೆ ಒಳಗಾಗದೆ ರಾಜ್ಯದ ಹಿತದೃಷ್ಟಿಯಿಂದ ಸದಾನಂದ ಗೌಡರಿಗೆ ಮತ ಹಾಕಲು ನಿರ್ಧರಿಸಿದ್ದೇವೆ ಎಂದರು. ಇದರಿಂದ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಮತ್ತಷ್ಟು ಬಲಬಂದಂತಾಗಿದೆ.
Please follow and like us:
error