ಪಡಿತರ ಚೀಟಿಗೆ ಆನ್‌ಲೈನ್ ಅರ್ಜಿ

ಬೆಂಗಳೂರು, ನ  ರಾಜ್ಯದಲ್ಲಿ ನೂತನ ಪಡಿತರ ಚೀಟಿಗಳನ್ನು ಬಯಸುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆಯೆಂದು ಇಂಧನ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆನ್‌ಲೈನ್ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಯೋಜನೆಗೆ ಚಾಲನೆ ನೀಡಲಾ ಗಿದ್ದು, ಶನಿವಾರದಿಂದಲೇ ಪಡಿತರ ಚೀಟಿ ಬಯಸುವವರು ಇಲಾಖೆಯ ವೆಬ್‌ಸೈಟ್ http://ahara.kar.nic.in ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಪಡಿತರ ಚೀಟಿಗಳ ಸಂಖ್ಯೆಯು ಮಿತಿ ಮೀರಿದಾಗ, ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲು ಮತ್ತು ಹೊಸದಾಗಿ ಪಡಿತರ ಚೀಟಿಗಳನ್ನು ನೀಡಲು ಸಾಧ್ಯವಾಗುವಂತೆ ಪಡಿತರ ಚೀಟಿಗಳ ಡಾಟಾಬೇಸ್ ಸಿದ್ಧಪಡಿಸುವ ಸಲುವಾಗಿ, ಕಳೆದ ಒಂದು ವರ್ಷದಿಂದ ಹೊಸ ಪಡಿತರ ಚೀಟಿಗಳನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಶೋಭಾ ತಿಳಿಸಿದರು.
ಕೇಂದ್ರ ಸರಕಾರದ ಎನ್‌ಐಸಿಯ ತಾಂತ್ರಿಕ ನೆರವಿನಿಂದಾಗಿ ಹೊಸ ಡಾಟಾಬೇಸನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇದಕ್ಕಾಗಿ ನಗರ ಪ್ರದೇಶಗಳಲ್ಲಿ ಪಡಿತರ ಚೀಟಿಗಳನ್ನು ವಿದ್ಯುತ್ ಮೀಟರ್ ಆರ್.ಆರ್. ಸಂಖ್ಯೆಗಳಿಗೆ ಜೋಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್‌ಗಳ ಕಂಪ್ಯೂಟರ್ ವ್ಯವಸ್ಥೆ ‘ಪಂಚತಂತ್ರ’ ಉಪಯೋಗಿಸಿ, ಮನೆಗಳ ಆಸ್ತಿ ತೆರಿಗೆ ಸಂಖ್ಯೆಗಳಿಗೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.
 ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸ ಬಯಸುವ ನಗರ ಪ್ರದೇಶಗಳ ಜನ ತಮ್ಮ ತಾಲೂಕು ಕಚೇರಿ ಅಥವಾ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ 10 ರೂ.ಶುಲ್ಕ ನೀಡಿ ತಮ್ಮ ಮಾಹಿತಿಯನ್ನು ದಾಖಲಿಸಬಹುದು. ಈ ಸಂದರ್ಭದಲ್ಲಿ ತಾವು ವಾಸವಿರುವ ವಾರ್ಡ್ ಸಂಖ್ಯೆ, ವಿದ್ಯುತ್ ಬಿಲ್, ನಿವಾಸದ ಪೂರ್ಣ ವಿಳಾಸ, ಆಸ್ತಿ ತೆರಿಗೆ ಪಾವತಿಸಿದ ವಿವರ, ಕುಟುಂಬ ಸದಸ್ಯರ ವಿವರ, ವರಮಾನದ ವಿವರ, ಅಡುಗೆ ಅನಿಲ ಸಂಪರ್ಕವಿದ್ದರೆ ಅದರ ಮಾಹಿತಿಯನ್ನು ಒದಗಿಸಬೇಕು ಎಂದು ಶೋಭಾ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿರುವ ಜನರು ಕಡ್ಡಾಯವಾಗಿ, ಅವರಿಗೆ ಸಂಬಂಧಿಸಿದ ಪಂಚಾಯತ್ ಕಚೇರಿಗೆ ಹೋಗಿ ಅಲ್ಲಿರುವ ಕಂಪ್ಯೂಟರ್ ವ್ಯವಸ್ಥೆಯ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು ಎಂದ ಅವರು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಅಧಿಕಾರಿಗಳು ತಪಾಸಣೆಗೆ ಬಂದಾಗ ದಾಖಲೆಗಳನ್ನು ಒದಗಿಸಬೇಕು ಎಂದರು.
29 ಲಕ್ಷ ತಾತ್ಕಾಲಿಕ ಪಡಿತರ ಚೀಟಿ ವಿತರಣೆ: ಸುಮಾರು 29 ಲಕ್ಷ ತಾತ್ಕಾಲಿಕ ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದು, ಅವುಗಳನ್ನು ಸದ್ಯದಲ್ಲೇ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಶೋಭಾ, ತಾತ್ಕಾಲಿಕ ಪಡಿತರ ಚೀಟಿಗಳಿಗೆ ಖಾಯಂ ಪಡಿತರ ಚೀಟಿಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸುವಂತೆ ಸರಕಾರ ಯಾವುದೇ ಸೂಚನೆ ನೀಡಿಲ್ಲ ಎಂದರು.
ಒಂದು ವೇಳೆ ಯಾವುದಾದರೂ ನ್ಯಾಯ ಬೆಲೆ ಅಂಗಡಿಯಲ್ಲಿ ಈ ರೀತಿಯ ಪ್ರಕರಣ ಕಂಡು ಬಂದಲ್ಲಿ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಈ ಹಿಂದೆ ಪಡಿತರ ಚೀಟಿಗಳನ್ನು ವಿತರಿಸಲು ಕಾಮೆಡ್ ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2011ರ ಜನಗಣತಿಯ ಆಧಾರದ ಮೇಲೆ ರಾಜ್ಯದಲ್ಲಿ 1.37 ಕೋಟಿ ಕುಟುಂಬಗಳಿವೆ. ಆದರೆ, ಸಂಸ್ಥೆ ವಿತರಣೆ ಮಾಡಿರುವ ಪಡಿತರ ಚೀಟಿಗಳ ಸಂಖ್ಯೆ 1.67 ಕೋಟಿ ಎಂದ ಅವರು, ಅಸಮರ್ಪಕವಾಗಿ ಪಡಿತರ ಚೀಟಿ ವಿತರಿಸಿದ ಕಾಮೆಡ್ ಸಂಸ್ಥೆಯ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹಾಗೂ ಗೋವಿಂದರಾಜು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಬಂಧ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಪಡಿತರ ಚೀಟಿ ಬಯಸುವವರು http://ahara.kar.nic.in ಮೂಲಕ ಅರ್ಜಿ ಸಲ್ಲಿಸಬಹುದು.
Please follow and like us:
error

Related posts

Leave a Comment