ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಆಗ್ರಹ

ಬಳ್ಳಾರಿ, ಡಿ. ೧: ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಯಾಗಬೇಕು ಎಂದು ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅವರು ಆಗ್ರಹಿಸಿದರು.
ಸಂಸ್ಕೃತಿ ಪ್ರಕಾಶನ ಮತ್ತು ಜ್ಞಾನ ಜ್ಯೋತಿ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ೫೮ ನೇ ಕರ್ನಾಟಕ ರಾಜ್ಯೋತ್ಸವ ಮತ್ತು ೩ ನೇ ಸಂಸ್ಕೃತಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರ ತಂಡ ಮಂಡಿಸಿರುವ ಮೂಢನಂಬಿಕೆ ಪ್ರತಿಬಂಧಕ ಕರಡನ್ನು ಅಧ್ಯಯನ ಮಾಡದೇ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ ಅವರು, ನಂಬಿಕೆ ಎಂದರೆ ಬೆಳೆಯಿದ್ದಂತೆ, ಬೆಳೆ ಜತೆ ಸೇರಿರುವ ಕಳೆ ಮೂಢನಂಬಿಕೆ. ಕಳೆಯನ್ನು ಹೋಗಲಾಡಿಸಿದರೆ ಬೆಳೆ ಸಮೃದ್ಧವಾಗಿರುತ್ತದೆ. ನಂಬಿಕೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪಟ್ಟಭದ್ರರರ ಬಗ್ಗೆ ಎಚ್ಚರದಿಂದ ಇರಬೇಕು.  ಜನತೆಯಲ್ಲಿ ಮೌಢ್ಯ, ಕಂದಾಚಾರವನ್ನು ಹೋಗಲಾಡಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಪ್ರತಿಪಾದಿಸಿದರು.
ಮೌಢ್ಯ, ಕಂದಾಚಾರ ಜನತೆಯನ್ನು ಸಾಮಾಜಿಕ, ಆರ್ಥಿಕ, ಮಾನಸಿಕ ಗುಲಾಮಗಿರಿ ಶೋಷಣೆಗೆ ತಳ್ಳಲ್ಪಡುತ್ತದೆ. ಶೋಷಣೆ ಮುಕ್ತ ಸಮಾಜಕ್ಕೆ ಕಾಯ್ದೆ ಜಾರಿಯಾಗ ಬೇಕು ಎಂದು ಡಾ. ಅಪ್ಪಗೆರೆ ಒತ್ತಾಯಿಸಿದರು.
ವಿದ್ಯಾರ್ಥಿಗಳು ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಪ್ರಸಿದ್ಧ ರಂಗ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಭಾರತೀಯ ಸಂಸ್ಕೃತಿ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ, ಹೊಟ್ಟೆಪಾಡಿಗಾಗಿ ಮೌಢ್ಯ, ಕಂದಾಚಾರಗಳನ್ನು ಹುಟ್ಟುಹಾಕುವ ಮೂಲಕ ಜನತೆಯನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದರು. 
ಕಲಾವಿದರಿಗೆ ಸಾಧನೆ ಮುಖ್ಯ. ಪ್ರತಿಭಾವಂತ ಕಲಾವಿದ, ಸಾಧಕರನ್ನು ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು. 
ಅಧ್ಯಕ್ಷತೆ ವಹಿಸಿದ್ದ ಜ್ಞಾನಜ್ಯೋತಿ ಮಹಾವಿದ್ಯಾಲಯದ ಅಧ್ಯಕ್ಷ ಬಿ ಡಿ ಗೌಡ ಅವರು ಮಾತನಾಡಿ, ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಭಾಷೆಗೆ ವಿಶ್ವದಲ್ಲಿ ಅಗ್ರ ಸ್ಥಾನವಿದೆ. ಕನ್ನಡ ಭಾಷೆಗೆ ಉಜ್ವಲ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಭಾಷೆಯ ಬೆಳವಣಿಗೆಗೆ ಶ್ರಮಿಸುವ ಅಗತ್ಯವಿದೆ ಎಂದು ಹೇಳಿದರು.
ಮೇಡಂ ಕ್ಯೂರಿ ಅಕಾಡೆಮಿ ಅಧ್ಯಕ್ಷ ಎಸ್ ಮಂಜುನಾಥ್, ವೈಜ್ಞಾನಿಕ ಮನೋಭಾವದ ಜಗತ್ತಿನಲ್ಲಿ ಮೂಢನಂಬಿಕೆ, ಪುರಾಣಗಳ ಅಂಧಶ್ರದ್ಧೆಗೆ ಜಾಗವಿಲ್ಲ. ವಿದ್ಯಾರ್ಥಿಗಳು ಪ್ರತಿಯೊಂದನ್ನು ಪ್ರಶ್ನಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. 
ಕಾರ್ಯಕ್ರಮವನ್ನು ಸಾಹಿತಿ ಆರ್ ವಿಜಯ ರಾಘವನ್ ಅವರು ಉದ್ಘಾಟಿಸಿದರು. ಚಿಂತಕ ಎಸ್ ವಿ ಕುಲಕರ್ಣಿ ಮಾತನಾಡಿದರು.
ಅಭಿನಂದನೆ: ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ೨೦೧೩ ನೇ ಸಾಲಿನ ಪ್ರತಿಷ್ಠಿತ ಮುದ್ದಣ್ಣ ಕಾವ್ಯ ಪ್ರಶಸ್ತಿ ಪುರಸ್ಕೃತ ಆರ್. ವಿಜಯ ರಾಘವನ್, ನಾಡೋಜ ಬೆಳಗಲ್ಲು ವೀರಣ್ಣ, ವಿಚಾರವಾದಿ ಡಾ. ವೆಂಕಟಯ್ಯ ಅಪ್ಪಗೆರೆ ದಂಪತಿ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಂ ಎಸ್ ಡಬ್ಲ್ಯೂ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಕಾಲೇಜಿನ ಇರ್ಷಾದ್, ಎರಡನೇಯ ರ‍್ಯಾಂಕ್ ಗಳಿಸಿದ ರೆಹನಾ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಸಂವಾದದಲ್ಲಿ ಕಾಲೇಜಿನ ಪ್ರಾಚಾರ್ಯ ಹರೀಶ್ ನಾಯ್ಕ್, ಉಪನ್ಯಾಸಕರಾದ ಮಂಜುನಾಥ ಸ್ವಾಮಿ, ವೀರೇಶಯ್ಯ, ಎಸ್ ವಿ ಕುಲಕರ್ಣಿ, ಕುಮಾರಿ ರೇಣುಕಾ, ಡಿ ಜಿ ಮಂಜುನಾಥ್, ಪಿ ಜಿ ಸುರೇಶ್, ಪುರುಷೋತ್ತಮ್ ಹಂದ್ಯಾಳ್, ಕಪ್ಪಗಲ್ ಚಂದ್ರಶೇಖರ್ ಆಚಾರ್, ವಿದ್ಯಾರ್ಥಿಗಳಾದ ನೀಲಮ್ಮ, ಲಕ್ಷ್ಮಣ್, ಶೃತಿ, ರಮೇಶ್ ಕವಿ ಎಸ್ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
ಸಂಸ್ಕೃತಿ ಪ್ರಕಾಶನದ ಸಿ ಮಂಜುನಾಥ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಪನ್ಯಾಸಕ ಮಂಜುನಾಥ ಸ್ವಾಮಿ ನಿರೂಪಿಸಿದರು. ಉಪನ್ಯಾಸಕ ವೀರೇಶಯ್ಯ ವಂದಿಸಿದರು.
Please follow and like us:
error