You are here
Home > Koppal News > ಮಕ್ಕಳಿಗೆ ಪಾಲಕರಿಂದ ಸಂಸ್ಕಾರ, ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆಯಬೇಕಿದೆ : ಸಂಗಣ್ಣ ಕರಡಿ

ಮಕ್ಕಳಿಗೆ ಪಾಲಕರಿಂದ ಸಂಸ್ಕಾರ, ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆಯಬೇಕಿದೆ : ಸಂಗಣ್ಣ ಕರಡಿ

ಕೊಪ್ಪಳ : ಇಂದಿನ ಸ್ಪರ್ಧಾತ್ಮಕ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ, ತನ್ಮಯತೆಯನ್ನು ರೂಢಿಸಿಕೊಳ್ಳುವಲ್ಲಿ ಮನೆಯ ವಾತಾವರಣ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪಾಲಕರಿಂದ ಸಂಸ್ಕಾರ ಹಾಗೂ ಶಾಲೆಯಲ್ಲಿ ಶಿಕ್ಷಕರಿಂದ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಆ ಮಗು ನಾಡಿನ ಭಾವಿ ಪ್ರಜೆಯಾಗಲು ಸಾಧ್ಯ ಎಂದು ಶಾಸಕ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು. 
ಅವರು ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ನಡತೆ ಅವಶ್ಯಕ ಎಂದ ಅವರು, ಮಕ್ಕಳನ್ನು ಬಾಲ್ಯಾವಸ್ಥೆಯಲ್ಲಿ ಉತ್ತಮ ಮಾರ್ಗದಲ್ಲಿ ನಡೆಸಲು ಸಾಧ್ಯ. ಈ ಸಮಯದಲ್ಲಿಯೇ ಮನೆಯೇ ಮೊದಲ ಪಾಠಶಾಲೆ ಎನ್ನುವ ಮಾತಿನಂತೆ ಮನೆಯಲ್ಲಿ ಪಾಲಕರಿಂದ ಉತ್ತಮ ನಡತೆ, ಸಂಸ್ಥಾರ ದೊರೆತಾಗ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅದು ಮುನ್ನುಡಿಯಾಗುತ್ತದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಸಾಗಿಸುವುದರೊಂದಿಗೆ ಇತರರಿಗೆ ಮಾದರಿಯಾಗಬೇಕು. ಇದಲ್ಲದೇ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೆಕು. ಶಿಕ್ಷಕರು ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ನಾಡಿಗೆ, ದೇಶಕ್ಕೆ ಕೀರ್ತಿ ತರುವಂತಹ ಮಕ್ಕಳನ್ನು ರೂಪಿಸುವಲ್ಲಿ ಶಿಕ್ಷಕರು ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಪರಮಾನಂದ ಯಾಳಗಿ ವಹಿಸಿ ಮಾತನಾಡುತ್ತಾ, ಸರಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಹೆಚ್ಚಿನ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅಧಿಕಾರಿಗಳು ಈ ಕಾರ್ಯಕ್ರಮಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಿದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗುತ್ತದೆ. ಇಂತಹ ಹಲವಾರು ಕಾರ್ಯಕ್ರಮದ ಪ್ರಯೋಜನೆಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಪರಮಾನಂದ ಯಾಳಗಿ ಮನವಿ ಮಾಡಿದರು.
ವೇದಿಕೆ ಮೇಲೆ ನಗರಸಭೆ ಸದಸ್ಯ ವಿರುಪಾಕ್ಷಪ್ಪ ಮೋರನಾಳ,  ಶಾಲೆಯ ಮುಖ್ಯೋಪಧ್ಯಾಯ ಶ್ರೀಧರಮೂರ್ತಿ, ಎಸ್.ಡಿ.ಎಂ.ಸದಸ್ಯರುಗಳಾದ ಜ್ಞಾನದೇವ ಬೋಂದಾಡೆ, ಲಕ್ಷ್ಮಮ್ಮ ಮಲ್ಲಿಕಾರ್ಜುನ ಶೆಟ್ಟರ್, ದತ್ತಾತ್ರೆಯ ತಮ್ಮಣ್ಣನವರ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ, ಬಸವರಾಜ ಬೋವಿ, ಹನುಮಂತಪ್ಪ ಹೊಸಳ್ಳಿ, ಲಲಿತಾ ನಾಯಕ, ದತ್ತು ವೈದ್ಯ ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ಪಾಲಕರು ಉಪಸ್ಥಿತರಿದ್ದರು. 

Leave a Reply

Top