ಸದ್ಗುರುವಿನ ಮಾರ್ಗದರ್ಶನದಿಂದ ಮಾತ್ರ ಭವಬಂಧನದಿಂದ ಮುಕ್ತಿ – ಮಾತಾಜೀ ಪ್ರಬೋಧಮಯಿ.

ಹೊಸಪೇಟೆ-ಸದ್ಗುರುವಿನ ಮಾರ್ಗದರ್ಶನದಿಂದ ಪರಮನೀಚನು ಸದ್ಗುಣವಂತನಾಗುವ ಅದ್ಭುತ ಚಮತ್ಕಾರ ನಡೆಯುವುದು ‘ಗುರು-ಶಿಷ್ಯ ಪರಂಪರೆ’ಯಲ್ಲಿ ಮಾತ್ರ ಇದಕ್ಕೆ ಸಾಕ್ಷಿಭೂತವಾಗಿ ‘ಬುದ್ಧ-ಅಂಗುಲಿಮಾಲ’ ನಿದರ್ಶನವೆಂದು ನಗರದ ಹಂಸಾಂಬ ಶಾರದಾಶ್ರಮದ ಮಾತಾಜೀ ಪ್ರಬೋಧಮಯಿ ತಿಳಿಸಿದರು.ಅವರು ಬಸವೇಶ್ವರ ಬಡಾವಣೆಯಲ್ಲಿರುವ ಅಕ್ಕ ಮಹಾದೇವಿ ಭವನದಲ್ಲಿ ಸ್ಥಳೀಯ ಅಕ್ಕನಬಳಗ ಏರ್ಪಡಿಸಿದ್ದ ‘ಗುರುಪೂರ್ಣಿಮೆ’ ವಿಶೇಷ ಪ್ರವಚನದಲ್ಲಿ ಮಾತನಾಡುತ್ತಾ ಗುರು-ಶಿಷ್ಯ ಪರಂಪರೆಯು ಆನಾದಿ ಕಾಲದಿಂದ ಭಾರತೀಯ ಸಂಸ್ಕೃತಿಯ ತಳಹದಿಯಾಗಿದೆ, ಉತ್ತಮ ಗುರುವು ಅದ್ಭುತ ಶಿಷ್ಯರನ್ನು ಸೃಷ್ಠಿಸಬಹುದು ಎನ್ನುವುದಕ್ಕೆ ಅಲೆಗ್ಜಾಂಡರ್-ಅರಿಸ್ಟಾಟಲ್, ರಾಮ ಕೃಷ್ಣ ಪರಮಹಂಸ-ವಿವೇಕಾನಂದರು  ಉದಾಹರಣೆಯಾಗಿದ್ದಾರೆ. ಭಾರತೀಯ ಚಿಂತನೆಗಳು ಬದಲಾಗದ ಸತ್ಯದಂತೆ, ಸಂಸ್ಕೃತಿಯ ಬೇರುಗಳು ಆಳವಾಗಿದ್ದು ವಿಶ್ವ ಮಾನ್ಯತೆ ಗಳಿಸಿವೆ, ದೇಹಕ್ಕೆ ಪ್ರಾಧಾನ್ಯತೆ ನೀಡದೆ ಅದರೊಳಗಿರುವ ಚೇತನವನ್ನು ಪುರಸ್ಕರಿಸಿ, ನಾನು ಅವಿನಾಶಿ ಆತ್ಮ ಎಂದು ಮನಸ್ಸಿಗೆ ತಲುಪಿಸುವ ಒಂದು ಸಂದೇಶವೇ ದಿವ್ಯೌಷಧಿಯಾಗುವುದು, ಆಸೆಗಳು ತೊಲಗುವವರಿಗೂ ಆತ್ಮಜ್ಞಾನ ಗೋಚರಿಸುವುದಿಲ್ಲ, ಅಜ್ಞಾನ ತೊಲಗಿದಾಗ ಮಾತ್ರ ಮನುಷ್ಯ ಮಾನವನಾಗಲು ಸಾಧ್ಯ, ಚಿಂತನೆಗಳಂತೆ ಜೀವನ ರೂಪಿತವಾಗುವುದರಿಂದ ಪ್ರತಿಯೊಬ್ಬರು ಉತ್ತಮ  ಗುರುವಿನ ಮಾರ್ಗದರ್ಶನದಂತೆ ನಡೆದು ಭವಬಂಧನದಿಂದ ಮುಕ್ತರಾಗಿ, ಆತ್ಮನು ಸರ್ವಶಕ್ತನು ಎನ್ನುವ ಭಾವನೆಯಿಂದ ಜೀವನ ಮಾಡಿದಾಗ  ವಿಸ್ಮಯಗಳು ನಡೆದು ಸರ್ವ ಸಂಕಷ್ಟಗಳು ನಿವಾರಣೆಯಾಗುವವು ಎಂದು ಮಾತಾಜೀ ತಿಳಿಸಿದರು. ಈ ಸಂದರ್ಭದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ರತ್ನ ಕೋರಿಶೆಟ್ಟಿ, ನಿರ್ದೇಶಕರಾದ ಗೌರಮ್ಮ ಗಂಗಾಧರ, ರತ್ನಮ್ಮ ಚಂದ್ರಶೇಖರ, ಖಜಾಂಚಿಯಾದ ಗಂಗಮ್ಮ ಕೊತ್ತಂಬ್ರಿ, ಸದಸ್ಯರುಗಳಾದ ಶಾರದಾ ನಿಂಬಗಲ್, ಅನ್ನಪೂರ್ಣ.ಹೆಚ್.ಎಂ, ಕರಿಬಸಮ್ಮ, ಬಸವ ಬಳಗದ ಸದಸ್ಯರು ಹಾಗೂ ನೂರಾರು ಜನ ಭಕ್ತರು ಹಾಜರಿದ್ದರು, ಶೀಲ ಕುಮಾರಸ್ವಾಮಿ ಮತ್ತು ಪ್ರಭಾ ಸಿಂಧಗಿ ವಚನಗಳನ್ನು ಹಾಡಿದರು,  ಅನ್ನಪೂರ್ಣ ಸದಾಶಿವ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಾತಾಜೀಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

Related posts

Leave a Comment