fbpx

ದಕ್ಷ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅಕಾಲಿಕ ಮರಣ : ಕೊಪ್ಪಳದಲ್ಲಿ ಶ್ರದ್ಧಾಂಜಲಿ

ಕೊಪ್ಪಳ ಮಾ.  : ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಅಕಾಲಿಕ ಮರಣಕ್ಕೆ   ತೀವ್ರ ಶೋಕ ವ್ಯಕ್ತಪಡಿಸಿದ ಕೊಪ್ಪಳದ ಎಲ್ಲ ಅಧಿಕಾರಿ, ಸಿಬ್ಬಂದಿಗಳು, ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.
  ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ೨೦೧೩ ರ ಫೆ. ೧೫ ರಿಂದ ಆಗಸ್ಟ್ ೧೨ ರವರೆಗೆ ಸುಮಾರು ೦೬ ತಿಂಗಳ ಕಾಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಡಿ.ಕೆ. ರವಿ ಅವರ ಅಕಾಲಿಕ ಮರಣ ನಿಮಿತ್ಯ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರದಂದು ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಯಿತು. 
  ಮೃತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ದಕ್ಷ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವು ಆಘಾತಕಾರಿ ಸಂಗತಿಯಾಗಿದ್ದು, ಜನ ಸಾಮಾನ್ಯರಿಂದ ಮೊದಲುಗೊಂಡು ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೂ ತೀವ್ರ ನೋವು ತಂದಿದೆ.  ರವಿ ಅವರ ಪ್ರಾಮಾಣಿಕತೆ ಮತ್ತು ದಕ್ಷತೆ ಜನರ ಮಾತಿನಲ್ಲಿ ಕೇಳಿ ಬರುತ್ತಿದೆ.  ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆ ಆಗಿರಲಿಲ್ಲ.  ಡಿ.ಕೆ. ರವಿ ಅವರು ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತನಿಖೆಯ ಪ್ರಕರಣಗಳನ್ನು ಕೈಗೆತ್ತಿಕೊಂಡು, ತ್ವರಿತವಾಗಿ ವಿಲೇವಾರಿ ಮಾಡಿದ್ದರು.  ಈ ಮೂಲಕ  ಸಿಬ್ಬಂದಿಗಳ ಮಾನಸಿಕ ಸಂಕಟವನ್ನು ದೂರಗೊಳಿಸಿ, ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರು.  ಅವರ ಬದುಕಿನಲ್ಲಿ ಸಾರ್ಥಕ ಸೇವೆ ಸಲ್ಲಿಸಿ, ಈ ನಾಡಿನ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಗ್ರಾಮೀಣಾಭಿವೃದ್ಧಿಗಾಗಿ ಅವರು ಹಾಕಿಕೊಟ್ಟ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು ಎಂದರು.  
  ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ ಅವರು ಮಾತನಾಡಿ, ಇತ್ತೀಚೆಗಿನ ವ್ಯವಸ್ಥೆಯ ಪರಿಸ್ಥಿತಿಗಳ ನಡುವೆ ಸಮರ್ಪಕ ಸರ್ಕಾರಿ ಸೇವೆ ಸಲ್ಲಿಸುವುದು ಅಧಿಕಾರಿ, ಸಿಬ್ಬಂದಿಗಳಿಗೆ ಕಷ್ಟಕರವಾಗುತ್ತಿದೆ.  ಒತ್ತಡ ಅಥವಾ ಪರಿಸ್ಥಿತಿ  ಡಿ.ಕೆ. ರವಿ ಅವರನ್ನು ಸಾವಿನ ದವಡೆಗೆ ನೂಕಿದೆ.  ಡಿ.ಕೆ. ರವಿ ಅವರ ಸಾವಿನ ಬಗ್ಗೆ ಸರ್ಕಾರ ಸತ್ಯಾಸತ್ಯತೆಯನ್ನು ಹೊರತಂದು, ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜಾ ಅವರು ಮಾತನಾಡಿ, ದಕ್ಷ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರು ಕೇವಲ ಅಲ್ಪಾವಧಿಯಲ್ಲಿಯೇ ಜನಮನ್ನಣೆ ಗಳಿಸಿರುವುದು, ಅವರ ಕಾರ್ಯ ವೈಖರಿಗೆ ನಿದರ್ಶನವಾಗಿದೆ.  ಸರ್ಕಾರಿ ಸೇವೆಯಲ್ಲಿ ಒತ್ತಡಗಳು ಇರುವುದು ಸಹಜ.  ಆದರೆ ಹೋರಾಟದ ನಡುವೆಯೇ ನಾವು ನಮ್ಮ ಕಾರ್ಯ ಸಾಧಿಸಬೇಕಿದೆ. ಅಧಿಕಾರಿ, ಸಿಬ್ಬಂದಿಗಳು ಮನೋಬಲ ವೃದ್ಧಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ ಎಂದರು.  
  ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಜಿಲ್ಲಾ ಆಡಳಿತ ಭವನದ ಎಲ್ಲ ಕಚೇರಿಗಳ ಅಧಿಕಾರಿ, ಸಿಬ್ಬಂದಿಗಳು  ಎರಡು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.  
Please follow and like us:
error

Leave a Reply

error: Content is protected !!