ವೀರಬಸಪ್ಪ ಬಳ್ಳೊಳ್ಳಿ ಯುವಕರಿಗೆ ಸ್ಫೂರ್ತಿಯಾಗಿದ್ದರು – ಗವಿಶ್ರೀಗಳು

ಕೊಪ್ಪಳ : ಲಿಂ. ಶ್ರೀ ವೀರಬಸಪ್ಪ ಬಳ್ಳೊಳ್ಳಿಯವರು ಘನವ್ಯಕ್ತಿತ್ವದ ಸಾಂಸ್ಕೃತಿಕ ಮನಸ್ಸಿನ ಶ್ರೀಮಂತರಾಗಿದ್ದರು. ಸಮಾಜಕ್ಕೆ ಅವರ ಕೊಡುಗೆ ಅಪಾರವಾದುದು. ಅವರು ಯುವಜನಾಂಗಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ಸೇವೆ ಅನುಪಮವಾದುದು ಎಂದು ಶ್ರೀ ಗವಿಸಿದ್ಧೇಶ್ವರ ಶ್ರೀಗಳು ನುಡಿದರು. ಅವರು ದಿ. ೧೮-೦೬-೨೦೧೧ ರಂದು ಲಿಂ. ಶ್ರೀ ವೀರಬಸಪ್ಪ ಬಳ್ಳೊಳ್ಳಿಯವರ ೬ ನೇ ವರ್ಷದ ಸ್ಮರಣೆ ನಿಮಿತ್ಯ ಬಳ್ಳೊಳ್ಳಿ ಮಿಲ್ ಆವರಣದಲ್ಲಿ ಬಳ್ಳೊಳ್ಳಿ ಪರಿವಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮನೆಯಲ್ಲಿ-ಮಹಾಮನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಶ್ರೀಗಳು ಮನುಷ್ಯನ ಇಚ್ಛಾಶಕ್ತಿ, ಬುದ್ಧಿಶಕ್ತಿ, ಕ್ರಿಯಾಶಕ್ತಿಗಳ ಕುರಿತು ಔಚಿತ್ಯಪೂರ್ಣ ನಿದರ್ಶನಗಳನ್ನು ನೀಡುವುದರ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾದಾಮಿ ಎಸ್.ಬಿ. ಮಮದಾಪುರ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಜೆ.ಬಿ. ಶೀಲವಂತರ್ ತಮ್ಮ ಭಾಷಣದಲ್ಲಿ ಸಮಾಜಕ್ಕೆ, ಸಾಹಿತ್ಯಕ್ಕೆ, ಸಾಂಸ್ಕೃತಿಕ ಲೋಕಕ್ಕೆ ಬಳ್ಳೊಳ್ಳಿ ಮನೆತನದ ಕೊಡುಗೆಗಳ ಬಗ್ಗೆ ಹೇಳುತ್ತ, ಶರಣರ ನಡೆ-ನುಡಿ, ಅವರ ಸಾಹಿತ್ಯ, ೧೨ ನೇ ಶತಮಾನದ ಅದ್ಭುತ ಕ್ರಾಂತಿ ಕುರಿತಾಗಿ ಮಾತನಾಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಜಮುರಾ ಕಲಾಲೋಕ ತಂಡ ಚಿತ್ರದುರ್ಗದ ತೋಟಪ್ಪ ಉತ್ತಂಗಿ, ಶ್ರೀಮತಿ ಕೋಕಿಲಾ ರುದ್ರಮೂರ್ತಿ ಮತ್ತು ಸಂಗಡಿಗರ ವಚನ ಗಾಯನ ಎಲ್ಲರ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಬಳ್ಳೊಳ್ಳಿಯವರ ಮನೆಯಲ್ಲಿ, ಮಿಲ್‌ನಲ್ಲಿ ಸುಮಾರು ೪೦ ವರ್ಷಗಳಿಂದಲೂ ಸೇವೆ ಸಲ್ಲಿಸಿದ ಇಬ್ಬರು ಮಹನೀಯರನ್ನು ಮತ್ತು ಸಹಜ ಸಮೃದ್ಧಿ ಯೋಗದ ಶಿವಕುಮಾರ ಗುರೂಜಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಾರಂಭದಲ್ಲಿ ಶ್ರೀಮತಿ ವಿಶಾಲಾಕ್ಷಿ ಹಿರೇಮಠ, ಕು. ಭೀಮಾಂಬಿಕಾ ಹಿರೇಮಠ ಮತ್ತು ಕು. ಅನ್ನಪೂರ್ಣ ಹಿರೇಮಠ ಪ್ರಾರ್ಥಿಸಿದರೆ, ಶಿವಯೋಗಿ ಬಳ್ಳೊಳ್ಳಿ ಸ್ವಾಗತಿಸಿದರು. ಬಸವರಾಜ್ ಮುದಗಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹೇಶ ಬಳ್ಳಾರಿ, ವೀರೇಶ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಬಸವರಾಜ್ ಬಳ್ಳೊಳ್ಳಿ ವಂದಿಸಿದರು.

Please follow and like us:
error