ಜೂ.೨೩, ಬದುಕು ಬಯಲು ನಾಟಕ ಪ್ರದರ್ಶನ

ಕೊಪ್ಪಳ, ಜೂ. ೧೬ : ‘ರಂಗಯಾನ’ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಭಾಗ್ಯನಗರದ ಸರಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಜೂ.  ೨೩ ರಂದು ಸಂಜೆ ೬.೦೦ ಗಂಟೆಗೆ ಹೆಗ್ಗೋಡಿನ ಜನಮನದಾಟ ಕಲಾವಿದರು ‘ಬದುಕು ಬಯಲು’ ನಾಟಕವನ್ನು ಅಭಿನಯಿಸುವರು.
ನೀನಾಸಂ ರಂಗಶಾಲೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಂ. ಗಣೇಶ ಅವರು ನಾಟಕವನ್ನು ನಿರ್ದೇಶಿಸಿದ್ದು, ಎ. ರೇವತಿಅವರ ಆತ್ಮ ಕಥೆಯನ್ನಾಧರಿಸಿದ ಈ ನಾಟಕವನ್ನು ದು. ಸರಸ್ವತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ನೂತನ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಟಣಕನಕಲ್‌ನ ಕಾಲಜ್ಞನ ಬ್ರಹ್ಮ ಶ್ರೀ ಶರಣಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಸ.ಪ.ಪೂ. ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕ ರಾಜಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಭಾಗ್ಯನಗರ ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ ಭೈರಾಪೂರ, ಜಿ.ಪಂ. ಸದಸ್ಯೆ ಶ್ರೀಮತಿ ವನಿತಾ ಗಡಾದ, ತಾ.ಪಂ. ಸದಸ್ಯರಾದ ದಾನಪ್ಪ ಕವಲೂರು, ಶ್ರೀನಿವಾಸ ಹ್ಯಾಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸೌಭಾಗ್ಯ, ಖ್ಯಾತ ಉದ್ಯಮಿ ಶ್ರೀನಿವಾಸ ಗುಪ್ತಾ, ಜಿ.ಪಂ. ಮಾಜಿ ಉಪಾಧ್ಯಕ್ಷ ಮನಪ್ಪ ಕಬ್ಬೇರ, ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಘಂಟಿ, ಹೆಗ್ಗೋಡಿನ ಜನಮನದಾಟ ತಂಡದ ವ್ಯವಸ್ಥಾಪಕ ಜಯರಾಮ್ ಕೆ.ಎನ್, ಹೊಂಗಿರಣ ಸಮಾಜಸೇವಾ ಸಂಸ್ಥೆಯ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆಯ ಅಧ್ಯಕ್ಷ ತ್ರಿಮೂರ್ತಿ ಯಡ್ಡೋಣಿ ಹಾಗೂ ಕೋಟೆಯ ಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ವೈ. ಬಿ. ಜೂಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಲೈಂಗಿಕ ಅಲ್ಪಸಂಖ್ಯಾತರ(ಹಿಜ್ಡಾ) ಬದುಕಿನ ತೊಳಲಾಟ, ಸಾಮಾಜಿಕ ಹಿಂಸೆಯನ್ನು ಅನಾವರಣಗೊಳಿಸುವ ಈ ನಾಟಕ ಈಗಾಗಲೇ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಹಲವಾರು ಯಶಸ್ವಿ ಪ್ರಯೋಗಗಳನ್ನು ನೀಡಿದೆ. ಜೂ. ೨೩ ರಂದು ಪ್ರದರ್ಶನಗೊಳ್ಳಲಿರುವ ಈ ನಾಟಕವನ್ನು ರಂಗ ಪ್ರೇಮಿಗಳು ವೀಕ್ಷಿಸಿ ಯಶಸ್ವಿಗೊಳಿಸಬೇಕು ಎಂದು ರಂಗಯಾನ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ತಿಳಿಸಿದ್ದಾರೆ.
Please follow and like us:
error