ದಿಲ್ಲಿಯವರೇ ಇಲ್ಲಿಗೆ ಬರಲಿ;ವರಿಷ್ಠರಿಗೆ ಯಡಿಯೂರಪ್ಪ ಸಡ್ಡು

ಬೆಂಗಳೂರು,ಜ.6:ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷದೊಳಗೆ ಹೋರಾಟ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಯಾವುದೇ ಕಾರಣಕ್ಕೂ ವರಿಷ್ಠರ ಜೊತೆ ಮಾತುಕತೆ ನಡೆಸಲು ದಿಲ್ಲಿಗೆ ಹೋಗುವುದಿಲ್ಲ, ತನಗೆ ಸ್ಥಾನ ನೀಡುವುದಾದರೆ ಅವರೇ ಇಲ್ಲಿಗೆ ಬರಲಿ ಎಂದು ಹೇಳಿಕೆ ನೀಡುವ ಮೂಲಕ ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದಾರೆ. ತನಗೆ ಮುಖ್ಯಮಂತ್ರಿ ಸ್ಥಾನ ಇಲ್ಲವೇ ಸೂಕ್ತ ಸ್ಥಾನಮಾನ ನೀಡುವಂತೆ ತನ್ನ ಬೆಂಬಲಿಗರ ಮೂಲಕ ಹೈಕಮಾಂಡ್‌ನ ಮೇಲೆ ಯಡಿಯೂರಪ್ಪ ಒತ್ತಡ ಹಾಗೂ ಲಾಬಿ ನಡೆಸಿದ್ದಾರೆ. ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಆರ್.ಅಶೋಕ್ ದಿಲ್ಲಿಗೆ ದೌಡಾಯಿಸಿ, ವರಿಷ್ಠರೊಂದಿಗೆ ಲಾಬಿ ನಡೆಸಿದ್ದರೂ,ಅದಕ್ಕೆ ವರಿಷ್ಠರು ಮಣೆ ಹಾಕದಿರುವುದರಿಂದ ಹತಾಶರಾಗಿರುವ ಯಡಿಯೂರಪ್ಪ, ಇದೀಗ ಸ್ವತಃ ರಣರಂಗಕ್ಕಿಳಿದಿದ್ದಾರೆ.ತನಗೆ ಸೂಕ್ತ ಸ್ಥಾನಮಾನ ನೀಡುವುದಾದರೆ ರಾಜ್ಯಕ್ಕೆ ವರಿಷ್ಠರೇ ಬರಲಿ, ತಾನು ಯಾವುದೇ ಕಾರಣಕ್ಕೂ ವರಿಷ್ಠರ ಕಾಲ ಬುಡಕ್ಕೆ ಹೋಗುವುದಿಲ್ಲ ಎಂದು ಹೈಕಮಾಂಡ್‌ಗೆ ಯಡಿಯೂರಪ್ಪ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ನಗರದ ಗುಬ್ಬಿ ತೋಂಟದಪ್ಪ ಧರ್ಮಸಂಸ್ಥೆಯ ಶತಮಾನೋತ್ಸವ ಭವನದಲ್ಲಿಂದು ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕ ಕಲ್ಯಾಣ ಪ್ರತಿಷ್ಠಾನ ಆಯೋಜಿಸಿದ್ದ ‘ಸ್ಕಂದ-ಗೋತ್ರ ಪುರುಷ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ತನ್ನನ್ನು ನಂಬಿದ ಜನರಿಗೆ ತಾನು ದ್ರೋಹ ಬಗೆಯುವುದಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆಯ ಉದ್ದೇಶದಿಂದ ಪ್ರವಾಸ ಕೈಗೊಳ್ಳುತ್ತಿದ್ದೇನೆ. ತಾನು ಯಾವುದೇ ಸ್ಥಾನಮಾನಕ್ಕಾಗಿ ಒತ್ತಡ ಹೇರುತ್ತಿಲ್ಲ. ರಾಜ್ಯದಲ್ಲಿ ತನಗಿರುವ ವರ್ಚಸ್ಸಿನ ಹಿನ್ನೆಲೆಯಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಬೇಕೋ ಬೇಡವೊ ಎಂಬುದನ್ನು ನಿರ್ಧರಿಸಲಿದೆ.
ಸ್ಥಾನಮಾನ ನೀಡುವುದಾದರೆ ಪಕ್ಷದ ವರಿಷ್ಠರೇ ಇಲ್ಲಿಗೆ ಬಂದು ನೀಡಲಿ, ತಾನು ಯಾವುದೇ ಕಾರಣಕ್ಕೂ ದಿಲ್ಲಿಗೆ ಹೋಗುವುದಿಲ್ಲ ಎಂದು ಅವರು ವರಿಷ್ಠರಿಗೆ ತಿರುಗೇಟು ನೀಡಿದರು.ರಾಜ್ಯದ ಸಚಿವರು, ಶಾಸಕರು ದಿಲ್ಲಿ ಪ್ರವಾಸದ ವೇಳೆ ವರಿಷ್ಠರೊಂದಿಗೆ ತನ್ನ ಅಗತ್ಯದ ಕುರಿತು ವರಿಷ್ಠರಿಗೆ ತಿಳಿಸಿದ್ದಾರೆಯೇ ಹೊರತು, ಯಾವುದೇ ಲಾಬಿ, ಒತ್ತಡ ಹೇರಿಲ್ಲ ಎಂದ ಯಡಿಯೂರಪ್ಪ,ತಾನು ಯಾವುದೇ ಸ್ಥಾನವನ್ನು ಕೇಳುತ್ತಿಲ್ಲ ಎಂದರು.ತುಮಕೂರಿನಲ್ಲಿ ನಡೆಸಲು ಉದ್ದೇಶಿಸಿರುವ ಸಮಾವೇಶ ಶಕ್ತಿ ಪ್ರದರ್ಶನಕ್ಕಲ್ಲ.ಪಕ್ಷ ಸಂಘಟನೆಗೆ.ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದವರು ಪ್ರತಿಪಾದಿಸಿದರು.ಇದಕ್ಕೂ ಮುನ್ನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜಕೀಯದಲ್ಲಿ ಒಬ್ಬರು ಬದುಕಬೇಕಾದರೆ ಇನ್ನೊಬ್ಬರನ್ನು ಬಲಿ ಕೊಡಬೇಕಾಗುತ್ತದೆ ಎಂದು ರಾಜಕೀ ಯದ ಕುರಿತು ವಿಶ್ಲೇಷಣೆ ಮಾಡಿದರು.
ವಿಚಾರ ಸಂಕಿರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಸಂಶೋಧಕ ಡಾ.ಚಿದಾನಂದ ಮೂರ್ತಿ, ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ,ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಿವಿಯ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ.ಎಂ.ಶಿವಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು
Please follow and like us:
error