fbpx

ಜನಾದೇಶ ಖರೀದಿಗೆ ಕಾರ್ಪೊರೇಟ್ ಹುನ್ನಾರ

ಸ್ವಾತಂತ್ರದ ಆರೂವರೆ ದಶಕಗಳ ನಂತರ ಭಾರತದ ಜನತಂತ್ರ ಕವಲು ದಾರಿಗೆ ಬಂದು ನಿಂತಿದೆ. ಈ ಜನತಂತ್ರ ನಿಜವಾದ ಅರ್ಥದಲ್ಲಿ ಜನತೆಯ ಪ್ರಭುತ್ವವಾಗಿ ಅರಳಬೇಕೋ ಇಲ್ಲವೇ ಉಳ್ಳವರ ಖಾಸಗಿ ಸೊತ್ತಾಗಬೇಕೋ ಈ ಪ್ರಶ್ನೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಮ್ಮೆದುರು ಬಂದು ನಿಂತಿದೆ. ಭಾರತ ಸರ್ವತಂತ್ರ ಸಮಾಜವಾದಿ ಗಣರಾಜ್ಯ ಎಂದು ಹೆಸರಿಟ್ಟುಕೊಂಡಿದ್ದರೂ ಇದೆಂದೂ ಜನತೆಯ ಪ್ರಭುತ್ವವಾಗಿರಲಿಲ್ಲ. ಹಾಗೆಂದು ಉಳ್ಳವರು ಸಂಪೂರ್ಣವಾಗಿ ಇದನ್ನು ಸಂಪೂರ್ಣವಗಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಸಲದ ಚುನಾವಣೆ ಈ ನಿಟ್ಟಿನಲ್ಲಿ ನಿರ್ಣಾಯಕ ವಾಗಿದೆ.
ಭಾರತದ ನೆಲ ಜಲ ಕಾಡನ್ನು ದೋಚ ಬೇಕಾದರೆ ಅದಕ್ಕು ಮೊದಲು ಪ್ರಭುತ್ವವನ್ನು ಪ್ರಜೆಗಳ ಕೈಯಿಂದ ಸಂಪೂರ್ಣ ಅಪಹರಣ ಮಾಡಬೇಕು. ಈ ಅಪಹರಣ ಮಾಡ ಬೇಕಾದರೆ ಈಗಿರುವ ಸಂವಿಧಾನ ಮತ್ತು ಸಂಸತ್ತನ್ನು ಬಳಸಿಕೊಳ್ಳಬೇಕು. ಈ ಗುರಿ ಸಾಧಿಸಬೇಕಾದರೆ ಕೇಂದ್ರ ಸರಕಾರದ ಅಧಿಕಾರ ಸೂತ್ರ ತಮ್ಮ ಚಮಚಾ ಕೈಯಲ್ಲಿರ ಬೇಕು. ಹಾಗಾಗಬೇಕಾದರೆ ಚುನಾವಣೆಯಲ್ಲಿ ತಮ್ಮ ಚೇಲಾ ಕೂಟ ಗೆಲ್ಲಬೇಕು.
ಇದರ ಅರ್ಥ ಜನಾದೇಶವನ್ನೇ ಖರೀದಿ ಮಾಡಬೇಕು. ಈಗ ಸಂಘ ಪರಿವಾರದ ಪ್ರಧಾನಿ ಅಭ್ಯರ್ಥಿ ಕಾರ್ಪೊರೇಟ್ ಬ್ರೋಕರ್ ನರೇಂದ್ರ ಮೋದಿ ಪರವಾಗಿ ಮಾಧ್ಯಮಗಳ ಮೂಲಕ ಮೂಡಿ ಸಿದ ಸಮೂಹ ಸನ್ನಿ ಇಂಥ ಜನಾದೇಶ ಖರೀದಿ ಹುನ್ನಾರ ವಲ್ಲದೇ ಬೇರೇನೂ ಅಲ್ಲ. ಈ ಜನಾದೇಶ ಖರೀದಿಯ ಷಡ್ಯಂತ್ರದ ಭಾಗವಾಗಿ ನರೇಂದ್ರ ಮೋದಿಯ ವೈಭವೀಕರಣ ನಡೆ ದಿದೆ. ಆತನ ಚಿತ್ರವಿರುವ ಟಿ ಷರ್ಟುಗಳು, ಟೋಪಿಗಳು ಮುಖವಾಡಗಳು ದೇಶದ ತುಂಬ ರಾರಾಜಿಸುತ್ತಿವೆ.
ಅಂತಲೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳನ್ನು ಕಾರ್ಪೊರೇಟ್ ಕಂಪೆನಿಗಳು ಖರೀದಿಸಿ ಈ ಕುತಂತ್ರ ನಡೆಸಿವೆ ಎಂದು ಕೇಜ್ರಿವಾಲ್ ಮಾಡಿದ ಆರೋಪದಲ್ಲಿ ಸುಳ್ಳೇನಿಲ್ಲ. ದೃಶ್ಯ ಮಾಧ್ಯಮಗಳಲ್ಲಿ ತೋರಿಕೆಗೆ ನಿಷ್ಪಕ್ಷಪಾತ ಸುದ್ದಿ ಪ್ರಸಾರ ಮಾಡುವಂತೆ ಕಂಡರೂ ಅತ್ಯಂತ ಸೂಕ್ಷ್ಮವಾಗಿ ನಡೆದಿರುವುದು ಮೋದಿ ಎಂಬ ನರಹಂತಕರನ್ನು ದೇಶದ ಮೇಲೆ ಹೇರುವ ಹುನ್ನಾರ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಪರ್ಯಾಯವಾಗಿ ಈ ದೇಶವನ್ನು ಉದ್ದರಿಸಲು ನರೇಂದ್ರ ಮೋದಿ ಎಂಬ ಪವಾಡ ಪುರುಷ ಅವತರಿಸಿ ಬಂದಿದ್ದಾನೆ ಎಂದು ನಗಾರಿ ಬಾರಿಸುವ ಕಾರ್ಪೊರೇಟ್ ಮಾಧ್ಯಮಗಳು ಯುಪಿಎ ಸರಕಾರದ ನೀತಿಗಳಿಗೆ ಪರ್ಯಾಯವಾಗಿ ಧೋರಣೆ ಯನ್ನು ಪ್ರತಿಪಾದಿಸುತ್ತಿರುವ ಎಡಪಕ್ಷಗಳನ್ನು ಯಾಕೆ ಕಡೆಗಣಿಸಿವೆ.
ದೃಶ್ಯ ಮಾಧ್ಯಮಗಳ ಎಲ್ಲ ಸುದ್ದಿ ಚಾನೆಲ್‌ಗಳ ವಾರ್ತೆಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳಿಗೆ ಒಂದೇ ಒಂದು ನಿಮಿಷ ಅವಕಾಶವನ್ನು ಯಾಕೆ ಕೊಡುತ್ತಿಲ್ಲ. ಮೋದಿ ವಿರುದ್ಧ ತಿರುಗಿ ಬಿದ್ದ ನಂತರ ಕೇಜ್ರಿವಾಲರನ್ನು ಕಡೆಗಣಿಸಿದ್ದೇಕೆ? ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಆತ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿತವಾಗುತ್ತಿದೆ.
ಜನಾದೇಶ ಖರೀದಿಗೆ ಮುನ್ನ ಉದಾರವಾದಿಗಳೆಂದು ಕರೆಸಿಕೊಳ್ಳುತ್ತಿದ್ದ ಕೆಲ ಬುದ್ಧಿಜೀವಿಗಳನ್ನು ಕೊಂಡುಕೊಳ್ಳಲು ಭಾರೀ ಬೆಲೆ ತೆರಲಾಗು ತ್ತಿದೆ. ಎಂ.ಜೆ.ಅಕ್ಬರ್, ಮಧುಕಿಶ್ವರ ಕನ್ನಡದ ಬೆಳವಾಡಿ ಹೀಗೆ ಮೋದಿಯ ಹೊಸ ಭಟ್ಟಂಗಿಗಳು ತಮಗೆ ವಹಿಸಿಕೊಟ್ಟ ಕೆಲಸ ಮಾಡಲು ತಮ್ಮ ಅಂತಃಸಾಕ್ಷಿಯನ್ನೇ ಕೊಂಡು ಕೊಂಡಿದ್ದಾರೆ.
ನೆಹರೂ-ಇಂದಿರಾ ಕಾಲದಲ್ಲೂ ಸರಕಾರದ ಮೇಲೆ ಬಂಡವಾಳಶಾಹಿಗಳ ನಿಯಂತ್ರಣವಿತ್ತು. ಟಾಟಾ, ಬಿರ್ಲಾಗಳು ತೆರೆಮರೆಯಲ್ಲಿ ನಿಂತು ಆಟ ಆಡುತ್ತಿದ್ದರು. ಆದರೆ ಖಾಸಗಿರಂಗಕ್ಕೆ ಪರ್ಯಾಯವಾಗಿ ಸಾರ್ವಜನಿಕ ಉದ್ಯಮ ರಂಗ ಆಗಿತ್ತು. ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ಧತಿ ಯಂತಹ ಕ್ರಮಗಳ ಮೂಲಕ ಸರಕಾರದ ಮೇಲೆ ಬಂಡವಾಳಶಾಹಿಯ ಹಿಡಿತ ಮಾತ್ರವಲ್ಲ ಜನತೆಯ ಅಧಿಕಾರವೂ ಇದೆ ಎಂದು ನಂಬಿಕೆ ಬರುತ್ತಿತ್ತು. ಆದರೆ ನವ ಉದಾರೀಕರಣದ ಕರಾಳ ಶಖೆ ಆರಂಭವಾದ ನಂತರ ಪ್ರಭುತ್ವ ಹಂತಹಂತವಾಗಿ ಸಿರಿವಂತರ ಕೈವಶವಾಗುತ್ತಿದೆ.
ಆರೆಸ್ಸೆಸ್ ಎಂಬ ಫ್ಯಾಸಿಸ್ಟ್ ಸಂಘಟನೆ ತೋರಿಕೆಗೆ ಸ್ವದೇಶಿ ಜಾಗರಣ ಮಂಚ್ ಎಂಬ ನಾಟಕ ಆಡಿದರೂ ನರೇಂದ್ರ ಮೋದಿ ಮೂಲಕ ಭಾರತವನ್ನು ಕಾರ್ಪೊರೇಟ್ ಬಂಡವಾಳಿಗರಿಗೆ ಮಾರಾಟ ಮಾಡಲು ಜನರನ್ನು ಕೋಮು ಆಧಾರದಲ್ಲಿ ವಿಭಜಿಸುತ್ತಿದೆ. ಗೋಹತ್ಯೆ ನಿಷೇಧದ ಹೆಸರಿ ನಲ್ಲಿ ಕರಾವಳಿ ಸೇರಿದಂತೆ ಅನೇಕ ಕಡೆ ಗೂಂಡಾಗಿರಿ ನಡೆಸುವ ಸಂಘಪರಿವಾರ ಗೋಮಾಂಸ ರಫ್ತು ವ್ಯವಹಾರದಲ್ಲಿ ಆರೆಸ್ಸೆಸ್‌ಗೆ ಗುರುದಕ್ಷಿಣೆ ಸಲ್ಲಿಸುವ ಹಿಂದೂ ಸಿರಿವಂತರೆ ಹೆಚ್ಚಿನ ಸಂಖ್ಯೆಯಲ್ಲಿರುವವರನ್ನು ಯಾಕೆ ಮುಚ್ಚಿಡುತ್ತಿದೆ.
ಜನರನ್ನು ಬಾಧಿಸುತ್ತಿರುವ ಯಾವ ಜ್ವಲಂತ ಪ್ರಶ್ನೆಗಳನ್ನು ಮೋದಿ ಈ ವರೆಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ. ಎಲ್ಲೆ ಹೋಗಲಿ ಅಲ್ಲಿ ಅತ್ಯಂತ ಕೀಳುದರ್ಜೆಯ ಭಾಷಣ ಮಾಡುವ ಈತ ಇತ್ತೀಚೆಗೆ ರಕ್ಷಣ ಸಚಿವ ಎ.ಕೆ.ಆ್ಯಂಟನಿ, ಅರವಿಂದ ಕೇಜ್ರಿವಾಲರಿಗೆ ಪಾಕ್ ಎಜೆಂಟರು ಎಂದು ದೂಷಿಸಿದ ದೇಶದ ಚರಿತ್ರೆಯ ಪ್ರಾಥಮಿಕ ಜ್ಞಾನವೂ ಇಲ್ಲದ ಈತ ಬಾಯಿಗೆ ಬಂದಂತೆ ಮಾತಾಡಿ ಅಪಹಾಸ್ಯಕ್ಕೆ ಈಡಾಗು ತ್ತಿದ್ದಾನೆ. ನೆಹರೂ ಬೇಡ ಕನಿಷ್ಠ ವಾಜಪೇಯಿಯನ್ನು ಪಕ್ಕಕ್ಕಿಟು ನೋಡಿದರೂ ಇಂಥವರು ನಮ್ಮ ಪ್ರಧಾನಿಯಾಗಬೇಕೆ! ಎಂದು ಅನಿಸದಿರದು.
ಮೋದಿ ಹಾರಾಡುವ ಹೆಲಿಕಾಪ್ಟರ್ ಯಾರದು? ಆತನ ಚುನಾವಣಾ ಪ್ರಚಾರಕ್ಕೆ ಅಂಬಾನಿ, ಅದಾನಿಗಳು ಕೋಟಿ ಕೋಟಿ ಹಣ ಕೊಡುವು ದಿಲ್ಲವೇ? ನೀವು ಪ್ರಧಾನಿಯಾದರೆ ಎಲ್.ಪಿ.ಜಿ. ಸಿಲಿಂಡರ್ ದರ ಇಳಿಸುವಿರಾ? ಪೆಟ್ರೋಲ್ ದರ ಕಡಿಮೆ ಮಾಡುವಿರಾ? ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸುವಿರಾ? ಈ ಯಾವ ಪ್ರಶ್ನೆಗಳಿಗೂ ಉತ್ತರಿಸದ ಮೋದಿ ತನ್ನ ಪರ್ಯಾಯ ಕಾರ್ಯಕ್ರಮಗಳನ್ನು ಜನರ ಮುಂದಿಡುವುದಿಲ್ಲ.
ಯಾಕೆಂದರೆ ಕಾರ್ಪೊ ರೇಟ್ ಮಾಲಕರ ದಲ್ಲಾಳಿ ಎಂದು ಗೊತ್ತಾದರೆ ಜನ ತಮಗೆ ಓಟು ಹಾಕುವುದಿಲ್ಲ ಎಂದು ಆತನಿಗೆ ಗೊತ್ತಿದೆ. ನರೇಂದ್ರ ಮೋದಿ ಹೆಸರಿಗೆ ಮಾತ್ರ ಪ್ರಧಾನಿ ಅಭ್ಯರ್ಥಿ. ಆತ ಅಧಿಕಾರಕ್ಕೆ ಬಂದರೆ ಅಂಬಾನಿ ಸೇರಿದಂತೆ ದೇಶದ ಕಾರ್ಪೊರೇಟ್ ಕಂಪೆನಿಗಳೇ ದೇಶವನ್ನು ಆಳುತ್ತವೆ. ಈ ಚುನಾವಣೆ ಅವರಿಗೆ ಒಂದು ಉದ್ದಿಮೆ ಇದ್ದಂತೆ. ಉದ್ದಿಮೆಯಲ್ಲಿ ಹಣ ಹೂಡಿ ನೂರುಪಟ್ಟು ಲಾಭ ಮಾಡಿಕೊಳ್ಳುವಂತೆ ಈ ಚುನಾವಣೆಯಲ್ಲಿ ಈ ಬಂಡವಾಳಿಗರು ಹಣ ಹೂಡಿಕೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ದಲ್ಲಾಳಿ ಮಾತ್ರ.                                                             Courtesy : varthabharati
Please follow and like us:
error

Leave a Reply

error: Content is protected !!