ಸುಗಮ ಪಿಯುಸಿ ಪರೀಕ್ಷೆಗೆ ವ್ಯವಸ್ಥಿತ ಸಿದ್ಧತೆ ಕೈಗೊಳ್ಳಿ- ಡಾ. ಸುರೇಶ್ ಇಟ್ನಾಳ್

 ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೯೧೬೪ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು ೧೩ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷೆಯು ಸಮರ್ಪಕವಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ರಾಜ್ಯದ ವಿವಿಧೆಡೆ ಪ್ರಶ್ನೆಪತ್ರಿಕೆಗಳ ಬಹಿರಂಗದ ಬಗ್ಗೆ ಇತ್ತೀಚೆಗೆ ಹಲವಾರು ಅಕ್ರಮಗಳು ನಡೆಯುತ್ತಿರುವ ಬಗ್ಗೆ ವರದಿಗಳು ಕೇಳಿಬರುತ್ತಿದ್ದು, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.    ಲಕೋಟೆಯಲ್ಲಿ ನಿಗದಿಗಿಂತ ಪ್ರಶ್ನೆಪತ್ರಿಕೆಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ಕೂಡಲೆ ಪರೀಕ್ಷಾ ಬೊರ್ಡ್‌ಗೆ ಮಾಹಿತಿ ನೀಡಬೇಕು.  ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು ಅಲ್ಲದೆ ಆಸನ ವ್ಯವಸ್ಥೆಯಲ್ಲಿ ನಿಯಮದಂತೆ ಸಮರ್ಪಕ ಅಂತರ ಕಾಯ್ದುಕೊಳ್ಳಬೇಕು.  ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು, ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವ ಮೂಲಕ ಪರೀಕ್ಷಾಭಯ ಹೋಗಲಾಡಿಸಬೇಕು.  ಪರೀಕ್ಷೆ ಸಂದರ್ಭದಲ್ಲಿ ಆಯಾ ವಿಷಯದ ಉಪನ್ಯಾಸಕರನ್ನು ಅಥವಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬಾರದು.  ಪರೀಕ್ಷೆ ಸಂದರ್ಭದಲ್ಲಿ ಮಾಧ್ಯಮದವರು ಚಿತ್ರೀಕರಣ ಅಥವಾ ಫೋಟೋ ಪಡಯಲು ಅವಕಾಶ ನೀಡಿದಲ್ಲಿ, ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ, ಮಾಧ್ಯಮದವರು ಪರೀಕ್ಷೆ ಪ್ರಾರಂಭಕ್ಕೂ ಮೊದಲು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಡಿಯೋ ಅಥವಾ ಫೋಟೋ ಪಡೆಯಲು ಮಾತ್ರ ಅವಕಾಶ ನೀಡಬಹುದು.  ಪರೀಕ್ಷೆ ಪ್ರಾರಂಭದ ನಂತರ ಮಾಧ್ಯಮದವರ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಅವರು ಪರೀಕ್ಷೆಯ ಕುರಿತು ಸಭೆಗೆ ವಿವರಣೆ ನೀಡಿ, ಈ ವರ್ಷ ೨೮೭೬-ಬಾಲಕ, ೩೦೦೪-ಬಾಲಕಿಯರು ಸೇರಿದಂತೆ ಒಟ್ಟು ೫೮೮೦ ರೆಗ್ಯುಲರ್ ವಿದ್ಯಾರ್ಥಿಗಳು.  ೧೪೬೬-ಬಾಲಕ, ೬೯೩-ಬಾಲಕಿಯರು ಸೇರಿ ೨೧೫೯ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೭೩೧-ಬಾಲಕ, ೩೯೪-ಬಾಲಕಿಯರು ಸೇರಿದಂತೆ ೧೧೨೫ ಖಾಸಗಿ ಅಭ್ಯರ್ಥಿಗಳು ಹೀಗೆ ಒಟ್ಟಾರೆ ೯೧೬೪ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ.  ಕೊಪ್ಪಳದ ಗವಿಸಿದ್ದೇಶ್ವರ ಪ.ಪೂ. ಕಾಲೇಜು, ಬಾಲಕರ ಸ.ಪ.ಪೂ. ಕಾಲೇಜು, ಬಾಲಕಿಯರ ಸ.ಪ.ಪೂ. ಕಾಲೇಜು.  ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜು, ಕುಕನೂರಿನ ವಿದ್ಯಾನಂದ ಗುರುಕುಲ ಪ.ಪೂ. ಕಾಲೇಜು, ಕುಷ್ಟಗಿಯ ಬಾಲಕರ ಸ.ಪ.ಪೂ.ಕಾಲೇಜು, ತಾವರಗೇರಾದ ಬಾಲಕಿಯರ ಸ.ಪ.ಪೂ. ಕಾಲೇಜು.  ಗಂಗಾವತಿಯ ಬಾಲಕರ ಸ.ಪ.ಪೂ. ಕಾಲೇಜು.  ಹೆಚ್.ಆರ್.ಸರೋಜಮ್ಮ ಪ.ಪೂ.ಕಾಲೇಜು, ಎಸ್‌ಎಂಎನ್‌ಎಮ್ ಬಾಲಕಿಯರ ಸ.ಪ.ಪೂ. ಕಾಲೇಜು.  ಕಾರಟಗಿಯ ಸರ್ಕಾರಿ ಪ.ಪೂ. ಕಾಲೇಜು ಮತ್ತು ಶ್ರೀರಾಮನಗರದ ಎ.ಕೆ.ಆರ್.ಡಿ ಪ.ಪೂ. ಕಾಲೇಜು ಸೇರಿ ಒಟ್ಟು ೧೩ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷಾ ನಕಲು ತಡೆಗೆ ಒಟ್ಟು ೦೭ ವಿಚಕ್ಷಣ ದಳವನ್ನು ರಚಿಸಲಾಗಿದೆ ಎಂದರು.
  ಸಭೆಯಲ್ಲಿ ಡಿಡಿಪಿಐ ಜಿ.ಹೆಚ್. ವೀರಣ್ಣ, ಜಿಲ್ಲಾ ಖಜಾನಾಧಿಕಾರಿ ಕಳ್ಳೇರ್, ತಹಸಿಲ್ದಾರರುಗಳಾದ ಬಿರಾದಾರ್, ಚಂದ್ರಕಾಂತ್, ಪಾಟೀಲ್ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.

Related posts

Leave a Comment