ವಿಶ್ವ ಜನಸಂಖ್ಯಾ ದಿನಾಚರಣೆ ಚಿಕ್ಕ ಕುಟುಂಬ- ಸುಖೀ ಕುಟುಂಬ.

ಕೊಪ್ಪಳ
ಜು. ೧೦ (ಕರ್ನಾಟಕ ವಾರ್ತೆ): ವಿಶ್ವ ಜನಸಂಖ್ಯೆಯು ೫೦೦ ಕೋಟಿಯನ್ನು ಕಳೆದ ೧೯೮೭ ರ
ಜುಲೈ ೧೧ ರಂದು ತಲುಪಿತು.  ಅಂದಿನಿಂದ ಆ ದಿನವನ್ನು ವಿಶ್ವ ಜನಸಂಖ್ಯಾ
ದಿನಾಚರಣೆಯನ್ನಾಗಿ ಆಚರಿಸಲು ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ತೀರ್ಮಾನಿಸಿತು.  ಅಂದಿನಿಂದ
ಜನಸಂಖ್ಯಾ ಹಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ
ಉದ್ದೇಶದಿಂದ ಜುಲೈ ೧೧ ರಂದು ಪ್ರತಿ ವರ್ಷವೂ ವಿಶ್ವ ಜನಸಂಖ್ಯಾ ದಿನಾಚರಣೆಯನ್ನಾಗಿ
ಆಚರಿಸಲಾಗುತ್ತದೆ.  ಈ ಬಾರಿ ‘ಕುಶಲ ಪರಿವಾರದ ಮಂತ್ರ ೨ ಮಕ್ಕಳ ನಡುವೆ ಇರಲಿ ೩ ವರ್ಷದ
ಅಂತರ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಜನಸಂಖ್ಯೆ ದಿನವನ್ನು ಆಚರಿಸಲಾಗುತ್ತಿದೆ.ವಿಶ್ವ ಜನಸಂಖ್ಯೆಯು ಕ್ರಿ.ಶ. ೧ ರಲ್ಲಿ ಅಂದರೆ ೨೦೧೨ ವರ್ಷಗಳ ಹಿಂದೆ ೨೦ ಕೋಟಿ
ಇತ್ತು.  ಕ್ರಿ.ಶ. ೧೮೦೪ ರಲ್ಲಿ ೧೦೦ ಕೋಟಿ ತಲುಪಿ, ೧೯೯೯ ರಲ್ಲಿ ೬೦೦ ಕೋಟಿ ಆಗಿತ್ತು. 
೨೦೧೫ ಜೂನ್ ವೇಳೆಗೆ ವಿಶ್ವದ ಜನಸಂಖ್ಯೆ ೭೧೯. ೬೧ ಲಕ್ಷ ತಲುಪಿದೆ.  ಭಾರತದ
ಜನಸಂಖ್ಯೆಯು ೧೯೫೧ ರಲ್ಲಿ ೩೬ ಕೋಟಿ ಇತ್ತು.  ೨೦೧೧ ರ ಜನಗಣತಿ ಪ್ರಕಾರ ಭಾರತದ
ಜನಸಂಖ್ಯೆ ೧೨೧ ಕೋಟಿ ಆಗಿದೆ.  ಪ್ರತಿ ವರ್ಷ ೧ ಕೋಟಿ ೮೧ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ
ಸೇರ್ಪಡೆಯಾಗುತ್ತಿದೆ.  ಇದೇ ರೀತಿ ಮುಂದುವರೆದಲ್ಲಿ ಮುಂದಿನ ೪೦ ವರ್ಷಗಳಲ್ಲಿ ನಮ್ಮ
ದೇಶದ ಜನಸಂಖ್ಯೆ ೨೪೦ ಕೋಟಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.  ಕರ್ನಾಟಕದ
ಜನಸಂಖ್ಯೆಯು ೧೯೫೧ ರಲ್ಲಿ ಕೇವಲ ೧ ಕೋಟಿ ೯೪ ಲಕ್ಷ ಇತ್ತು.  ೨೦೧೧ ರ ಜನಗಣತಿ ಪ್ರಕಾರ ೬
ಕೋಟಿ ೧೧ ಲಕ್ಷ ತಲುಪಿದೆ.  ಪ್ರತಿ ವರ್ಷ ೮ ಲಕ್ಷ ೪೦ ಸಾವಿರ ಜನಸಂಖ್ಯೆ ರಾಜ್ಯಕ್ಕೆ
ಸೇರ್ಪಡೆಯಾಗುತ್ತಿದೆ.  ಇದೇ ವೇಗದಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದರೆ, ಮುಂದಿನ ೪೫
ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆ ೧೨ ಕೋಟಿ ೨೫ ಲಕ್ಷ ಆಗುವ ಸಂಭವ ಇದೆ.ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಢನಂಬಿಕೆಗಳು, ಬಾಲ್ಯ ವಿವಾಹ, ಕಡಿಮೆ ಸಾಕ್ಷರತಾ
ಪ್ರಮಾಣದಂತಹ ಕಾರಣಗಳಿಂದಾಗಿ ಜನಸಂಖ್ಯೆ ಹೆಚ್ಚುತ್ತಿದೆ.  ಭಾರತ ದೇಶ ಮತ್ತು ಕರ್ನಾಟಕ
ರಾಜ್ಯದ ಜನನ ಮತ್ತು ಮರಣ ದರದ ಪ್ರಮಾಣಗಳ ಅಂಕಿ-ಅಂಶಗಳನ್ನು ಹೋಲಿಸಿದಾಗ ನಮ್ಮ
ರಾಜ್ಯದಲ್ಲಿ ಜನನ ಮತ್ತು ಮರಣ ಪ್ರಮಾಣ ಕಡಿಮೆ ಆಗಿದೆ. ರಾಷ್ಟ್ರೀಯ ಆರೋಗ್ಯ
ಅಭಿಯಾನದಡಿ ಬರುವ ಸುಧಾರಿಸಿದ ಆರೋಗ್ಯ ಸೌಲಭ್ಯಗಳು, ಜನನಿ ಸುರಕ್ಷಾ ಯೋಜನೆ, ಪ್ರಸೂತಿ
ಆರೈಕೆ, ಮಡಿಲು, ತಾಯಿಭಾಗ್ಯ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿನ
ಗುಣಾತ್ಮಕ ಸೇವೆಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಂದಾಗಿ ಹತೋಟಿಯಲ್ಲಿರುವ
ಸಾಂಕ್ರಾಮಿಕ ರೋಗಗಳು ಹಾಗೂ ಸಂಚಾರಿ ತುರ್ತು ಸೇವೆಗಳಿಂದಾಗಿ ಮರಣ ಪ್ರಮಾಣ
ಇಳಿಮುಖವಾಗುತ್ತಿದೆ.  ಜನನ ನಿಯಂತ್ರಣ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನನಗಳನ್ನು
ತಡೆಗಟ್ಟಲಾಗಿದೆ.  ಕರ್ನಾಟಕದಲ್ಲಿ ಇಲ್ಲಿಯವರೆಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಮೂಲಕ
೨. ೫೦ ಕೋಟಿಗೂ ಹೆಚ್ಚು ಜನನಗಳನ್ನು ನಿಯಂತ್ರಿಸಲಾಗಿದೆ. 
ಜನಸಂಖ್ಯಾ ಸ್ಫೋಟದಿಂದಾಗುವ ಸಮಸ್ಯೆಗಳು :
    ಆಹಾರ, ನೀರು, ಬಟ್ಟೆ, ನೆಲ, ವಸತಿ ಹಾಗೂ ಖನಿಜಗಳ ಕೊರತೆ.
    ಅರಣ್ಯ ನಾಶ, ಸಸ್ಯ ಸಂಪತ್ತಿನ ನಾಶ, ಬಡತನ ಹೆಚ್ಚಳ, ನಿರುದ್ಯೋಗ ಹೆಚ್ಚಳ.
    ಶಿಕ್ಷಣ, ಆರೋಗ್ಯ ಸೇವೆ ಮತ್ತು ಇತರೆ ಸಂಪನ್ಮೂಲಗಳ ಕೊರತೆ.
    ವಾಯು, ಜಲ ಮತ್ತು ಶಬ್ದ ಮಾಲಿನ್ಯ ಹೆಚ್ಚಳ.  ಸಾಮಾಜಿಕ ಅಸಮಾನತೆ.
    ನಗರ ವ್ಯಾಪ್ತಿಯ ಕೊಳಚೆ ಪ್ರದೇಶಗಳ ಉಲ್ಬಣ, ವಸತಿ ಮತ್ತು ಸಾರಿಗೆ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಳ.
    ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆ.
   
ಜನಸಂಖ್ಯಾ ನಿಯಂತ್ರಣಕ್ಕೆ ಸೂತ್ರಗಳು :
    ಮದುವೆಯಾಗಲು ಗಂಡಿಗೆ ೨೧ ವರ್ಷ ಮತ್ತು ಹೆಣ್ಣಿಗೆ ೧೮ ವರ್ಷ ತುಂಬಿರಬೇಕು.
    ಮದುವೆಯಾದ ನಂತರ ಕನಿಷ್ಟ ಮೂರು ವರ್ಷಗಳವರೆಗೆ ಮೊದಲನೆ ಮಗುವನ್ನು ಪಡೆಯದಿರುವುದು.
    ಜನನಗಳ ನಡುವೆ ಕಡೆ ಪಕ್ಷ ೪ ವರ್ಷಗಳ ಅಂತರ ಕಾಯ್ದುಕೊಳ್ಳುವುದು.
    ಎಲ್ಲ ಅರ್ಹ ದಂಪತಿಗಳು ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸಿ, ಚಿಕ್ಕ ಕುಟುಂಬ ರೂಪಿಸಿಕೊಳ್ಳುವುದು.
    ಪೋಷಕರು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ನೀಡುವುದು.
    ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಕ್ರಿಯ ಭಾಗವಹಿಸುವಿದೆ ಒಳಗೊಂಡಂತೆ ಸಮುದಾಯದ ಸಹಭಾಗಿತ್ಯ ಪ್ರಮುಖ.
    ಯುವ ಜನತೆಯ ಸಬಲೀಕರಣ ಮತ್ತು ಶಿಕ್ಷಣ.
    ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ ನಿರಂತರವಾಗಿರುವಿಕೆ.
    ಪ್ರಸವೋತ್ತರ ಕುಟುಂಬ ಕಲ್ಯಾಣ ವಿಧಾನಗಳಿಗೆ ಹೆಚ್ಚಿನ ಒತ್ತು ಕೊಡುವುದು.

    
ಜನಸಂಖ್ಯೆ ತೀವ್ರ ಹೆಚ್ಚಳ ನಿಯಂತ್ರಿಸಲು ಸರ್ಕಾರ, ಆರೋಗ್ಯ ಇಲಾಖೆಗಳು ಹಲವು ಯೋಜನೆ,
ವಿಧಾನಗಳನ್ನು ಜಾರಿಗೆ ತಂದರೂ, ಸಮುದಾಯದ ಸಹಭಾಗಿತ್ವದಿಂದ ಮಾತ್ರ ಜನಸಂಖ್ಯಾ
ಸ್ಫೋಟವನ್ನು ನಿಯಂತ್ರಿಸಲು ಸಾಧ್ಯ.
——————————————————— 
ಆಯ್.ಎಮ್.ಸಿ ಕೋಟಾದಡಿ ಐ.ಟಿ.ಐ ಪ್ರವೇಶ : ಅರ್ಜಿ ಆಹ್ವಾನ
ಕೊಪ್ಪಳ,
ಜು.೧೦ (ಕರ್ನಾಟಕ ವಾರ್ತೆ) :ಕೊಪ್ಪಳ ಜಿಲ್ಲೆ ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ
ಸಂಸ್ಥೆಯಲ್ಲಿ ಆಯ್.ಎಮ್.ಸಿ ಕೋಟಾದಡಿ ವಿವಿಧ ವೃತ್ತಿಗಳ ಐ.ಟಿ.ಐ ಪ್ರವೇಶಾತಿಗಾಗಿ
ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಸಂಸ್ಥೆಯಲ್ಲಿ ಆಯ್.ಎಮ್.ಸಿ ಕೋಟಾದಡಿ
ಎಲೆಕ್ಟ್ರಿಷಿಯನ್-೦೫, ಫಿಟ್ಟರ್-೦೫, ಎಲೆಕ್ಟ್ರಾನಿಕ್ ಮೆಕ್ಯಾನಿಕ್-೦೬ ಮತ್ತು
ಟರ್ನರ್-೦೪ ಸೀಟುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ
ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಆನೆಗೊಂದಿ ರಸ್ತೆ, ಗಂಗಾವತಿ,
ದೂರವಾಣಿ ಸಂಖ್ಯೆ: ೦೮೫೩೩-೨೦೦೮೪೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ
ತಿಳಿಸಿದೆ.
ಪ್ರವಾಸಿ ಟ್ಯಾಕ್ಸಿ ಯೋಜನೆ : ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಆಹ್ವಾನ
ಕೊಪ್ಪಳ,
ಜು.೧೦ (ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಿಂದುಳಿದ ಹಾಗೂ
ಅಲ್ಪಸಂಖ್ಯಾತ ವರ್ಗದ ಪ್ರವಾಸಿ ಟ್ಯಾಕ್ಸಿ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ
೨೦೧೩-೧೪ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ವಿತರಿಸುವ ಸಂಬಂಧ ಬಂದಿರುವ ಅರ್ಜಿಗಳನ್ನು
ಪರಿಶೀಲನೆ ಮಾಡಿ,  ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ.
     ತಾತ್ಕಾಲಿಕ
ಪಟ್ಟಿಗೆ ಸಂಬಂಧಿಸಿದಂತೆ ಬಾಧಿತರಾಗಬಹುದಾದಂತಹ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು,
ತಮ್ಮ ಆಕ್ಷೇಪಣೆ, ಸಲಹೆ, ಸೂಚನೆಗಳನ್ನು ಸಮರ್ಥಿಸುವಂತಹ ಮೂಲ ದಾಖಲೆಗಳೊಂದಿಗೆ
ಜಿಲ್ಲಾಧಿಕಾರಿಗಳು ಕೊಪ್ಪಳ, ಉಪವಿಭಾಗಾಧಿಕಾರಿಗಳು ಅಥವಾ ಸಹಾಯಕ ನಿರ್ದೇಶಕರು,
ಪ್ರವಾಸೋಧ್ಯಮ ಇಲಾಖೆ, ಕೊಪ್ಪಳ ಇವರಿಗೆ ಜು.೨೧ ರ ಒಳಗಾಗಿ ಸಲ್ಲಿಸಬಹುದಾಗಿದೆ. ಈ ಹಿಂದೆ
ಸಲ್ಲಿಸಿದ ದಾಖಲಾತಿಗಳ ನಕಲು ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ಅವಧಿ
ಮುಗಿದ ನಂತರ ಬಂದ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಚಾಲನಾ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ,
ಜು.೧೦ (ಕರ್ನಾಟಕ ವಾರ್ತೆ): ಸಾರಿಗೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಪರಿಶಿಷ್ಟ
ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ
ಪಂಗಡದವರಿಂದ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಆಟೋ ರಿಕ್ಷಾ
ಕ್ಯಾಬ್ ಚಾಲನಾ ತರಬೇತಿಗೆ ಪರಿಶಿಷ್ಟ ಜಾತಿಯ ೦೪ ಹಾಗೂ ಪರಿಶಿಷ್ಟ ಪಂಗಡದ ೦೩
ಅಭ್ಯರ್ಥಿಗಳಿಗೆ ಅವಕಾಶವಿದೆ. ಭಾರಿ ಸಾರಿಗೆ ವಾಹನ ಚಾಲನ ತರಬೇತಿಗೆ ಪ.ಜಾತಿ-೦೩,
ಪ.ಪಂಗಡ-೦೨ ಅಭ್ಯರ್ಥಿಗಳಿಗೆ ಅವಕಾಶವಿದೆ. ಈ ತರಬೇತಿಗಳಿಗೆ ಅರ್ಜಿ
ಸಲ್ಲಿಸಲಿಚ್ಛಿಸುವವರು ಲಘು ಮೋಟಾರು ವಾಹನ (ಸಾರಿಗೇತರ) ಚಾಲನಾ ಅನುಜ್ಞಾ ಪತ್ರ (೦೧
ವರ್ಷವಾಗಿರಬೇಕು), ೮ನೇ ತರಗತಿ ಉತ್ತೀರ್ಣತಾ ಪತ್ರ, ೨೦ ವರ್ಷಗಳ ವಯೋಮಿತಿ ದೃಢೀಕರಣ
ಪತ್ರ, ಜಾತಿ ಪ್ರಮಾಣ ಪತ್ರ ದಾಖಲೆಗಳನ್ನು ಲಗತ್ತಿಸಿ, ಬಿಳಿ ಹಾಳೆಯಲ್ಲಿ ವಿವರ ನಮೂದಿಸಿ
ಅರ್ಜಿ ಸಲ್ಲಿಸಬಹುದು. ಲಘು ಮೋಟಾರ ವಾಹನ (ಎಲ್.ಎಮ್.ವಿ) ಚಾಲನಾ ತರಬೇತಿಗೆ ಪರಿಶಿಷ್ಟ
ಜಾತಿಯ ೧೩ ಹಾಗೂ ಪರಿಶಿಷ್ಟ ಪಂಗಡದ ೦೭ ಜನ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ
ತರಬೇತಿಗೆ ಅರ್ಜಿ ಸಲ್ಲಿಸಲಿಚ್ಛಿಸುವವರು, ೧೮ ವರ್ಷ ವಯೋಮಿತಿಯ ದೃಢೀಕರಣ ಪ್ರಮಾಣ ಪತ್ರ,
ವಿಳಾಸ ಪುರಾವೆ, ಜನನ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ ದಾಖಲೆಗಳೊಂದಿಗೆ,
ಬಿಳಿ ಹಾಳೆಯಲ್ಲಿ ವಿವರ ನಮೂದಿಸಿ, ಅರ್ಜಿ ಸಲ್ಲಿಸಬಹುದು.
     ಚಾಲನಾ ತರಬೇತಿಗೆ
ಆಯ್ಕೆಯಾದ ಫಲಾನುಭವಿಗಳು ತರಬೇತಿಗೆ ತಗಲುವ ವೆಚ್ಚದ ವಾಹನದ ವರ್ಗಕ್ಕೆ ಅನುಗುಣವಾಗಿ ಶೇ.
೨೫ ರಷ್ಟು ಮೊತ್ತವನ್ನು ಅಂದರೆ, ಆಟೋರಿಕ್ಷಾ ತರಬೇತಿಗೆ ೭೫೦ ರೂ., ಎಲ್.ಎಂ.ವಿ-೧೦೦೦
ರೂ. ಹಾಗೂ ಭಾರಿ ಸರಕು ಸಾಗಣೆ ವಾಹನದ ಚಾಲನಾ ತರಬೇತಿಗೆ ೧೫೦೦ ರೂ. ಗಳನ್ನು
ಭರಿಸಬೇಕಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಡಿ.ತಹಶೀಲ್ದಾರ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಷ್ಯ ವೇತನ : ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನ
ಕೊಪ್ಪಳ,
ಜು.೧೦ (ಕರ್ನಾಟಕ ವಾರ್ತೆ): ಬಾಗಲಕೋಟೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ
ವತಿಯಿಂದ ಒಂದನೇ ತರಗತಿಯಿಂದ ಪದವಿ ಅಥವಾ ಡಿಪ್ಲೋಮಾ ವರೆಗೆ ವ್ಯಾಸಂಗ ಮಾಡುತ್ತಿರುವ
ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಂದ
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
       ಪಿಂಚಣಿ ಇಲ್ಲದ ಕರ್ನಾಟಕದ
ಮಾಜಿ ಸೈನಿಕರ ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದ ಮಾಜಿ ಸೈನಿಕರ ಮಕ್ಕಳಿಗೆ
ಒಂದನೇ ತರಗತಿಯಿಂದ ೨ನೇ ಪಿಯುಸಿವರೆಗೆ ಪುಸ್ತಕ ಧನ ಸಹಾಯ ಮತ್ತು ಡಿಗ್ರಿ ಡಿಪ್ಲೋಮಾ,
ಜೆ.ಓ.ಸಿ ಅಥವಾ ಪ್ರೋಫೆಷನ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕ ಮಕ್ಕಳ
ವಿಶೇಷ ನಿಧಿಯಿಂದ ಶೀಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು
ನವಂಬರ್.೩೦ ಕೊನೆ ದಿನಾಂಕವಾಗಿದ್ದು, ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ
ಮಾಹಿತಿಯನ್ನು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಸೆಕ್ಟರ್
ನಂಬರ್ ೨೨, ಪೊಲೀಸ್ ಪ್ಯಾಲೇಸ್ ಹತ್ತಿರ, ನವನಗರ, ಬಾಗಲಕೋಟೆ, ದೂರವಾಣಿ ಸಂಖ್ಯೆ:
೦೮೩೫೪-೨೩೫೪೩೪ ಇವರನ್ನು ಸಂಪರ್ಕಿಸಬಹುದಾಗಿದೆ. ಮಾಜಿ ಸೈನಿಕರು ಅಥವಾ ಅವಲಂಬಿತರು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವುದು ಕಡ್ಡಾಯವಾಗಿದ್ದು,
ಅರ್ಜಿಯೊಂದಿಗೆ ಬ್ಯಾಂಕ್ ಪುಸ್ತಕ ಹಾಗೂ ಮಕ್ಕಳ ಆಧಾರ ಕಾರ್ಡ್ ನೆರಳಚ್ಚು ಪ್ರತಿಯನ್ನು
ಲಗತ್ತಿಸಬೇಕು ಎಂದು ತಿಳಿಸಿದೆ.

Please follow and like us:

Leave a Reply