ಪಂಪ್‌ಸೆಟ್ ಹೊಂದಿದ ರೈತರಿಗೆ ಹೆಣ್ಣು ಕೊಡುತ್ತಿಲ್ಲ

 

ಮದುವೆಯಾದ ಹೊಸದರಲ್ಲಿ ರೈತರು ಹೆಂಡತಿ ಬಿಟ್ಟು ಹೊಲದಲ್ಲಿ ಪಂಪ್‌ಸೇಟ್ ಹತ್ತಿರ ಮಲಗುತ್ತಿದ್ದಾರೆ. ಹೀಗಾಗಿ ಪಂಪ್‌ಸೇಟ್ ಇರುವ ರೈತರ ಕುಟುಂಬಗಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದವೀರಪ್ಪ ಹೇಳಿದರು.

ಅವರು ಕೊಪ್ಪಳ ನಗರದ ಕೆಪಿಟಿಸಿಎಲ್(ಜೆ ಸ್ಕಾಂ) ಕಛೇರಿಯ ಮುಂದೆ ನಡೆಯುತ್ತಿದ್ದ ಸಾಂಕೇತಿಕ ಧರಣಿಯಲ್ಲಿ ಮಾತನಾಡುತ್ತಿದ್ದ ಅವರು ಮುಂದುವರೆದು ಸರ್ಕಾರ ಕೃಷಿ ಭಾಗ್ಯ, ಅನ್ನ ಭಾಗ್ಯ ಎನ್ನುವಂತ ಯೋಜನೆಗಳನ್ನು ತರುತ್ತಿದೆ. ಆದರೆ ಅದೇ ಸರ್ಕಾರಕ್ಕೆ ಹಗಲು-ರಾತ್ರಿ ಕಷ್ಟಪಟ್ಟು, ವಿದ್ಯುತ್ ತೊಂದರೆ ಅನುಭವಿಸಿ, ಸಾಲ ಮಾಡಿ ಆಹಾರ ಧಾನ್ಯ ನೀಡುತ್ತಿದ್ದಾರೆ. ಪಂಪ್‌ಸೇಟ್ ರೈತರೊಂದಿಗೆ ವಿದ್ಯುತ್ ಸಂಪರ್ಕ ನೀಡುವಾಗ ಮಾಡಿಕೊಂಡ ಒಪ್ಪಂದದಂತೆ ೨೪ ತಾಸು ವಿದ್ಯುತ್ ನೀಡಬೇಕು, ಅದನ್ನು ತಪ್ಪಿ ನಡೆಯುತ್ತಿರುವ ಸರ್ಕಾರದ ವಿರೋಧ ರಾಜ್ಯವ್ಯಾಪಿ ಹೋರಾಟ ಮಾಡಬೇಕು, ಹೇಳದೇ-ಕೇಳದೆ ವಿದ್ಯುತ್ ಕಡಿತ ಮಾಡಿದರೆ ಅಧಿಕಾರಿಗಳನ್ನು ಪ್ರಶ್ನಿಸಬೇಕು. ಅಧಿಕಾರಿಗಳು, ಸರ್ಕಾರಗಳು ನಮ್ಮ ವೈರಿಗಳಲ್ಲ. ಆದರೆ ವ್ಯವಸ್ಥೆಯಲ್ಲಿಯ ಬದಲಾವಣೆ ತರದಿದ್ದೆ ಮೂಲ ಸಮಸ್ಯೆಗೆ ಕಾರಣ. ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿಗಳು, ನ್ಯಾಯಾಧೀಶರನ್ನು ಹಳ್ಳಿಗಳಲ್ಲಿ ರಾತ್ರಿ ವಾಸಮಾಡಲು ರೈತ ಸಂಘ ೨೦೦೦ ವರ್ಷದಲ್ಲಿ ಕರೆ ಕೊಟ್ಟಿತ್ತು. ನಮ್ಮ ಹಳ್ಳಿಗೆ ನಿರಂತರ ಜ್ಯೋತಿ ಬೇಡ. ಕನಿಷ್ಟ ೭ ತಾಸು ೩ಫೇಸ್ ಮತ್ತು ೧೨ ತಾಸು ಸಿಂಗಲ್‌ಫೇಸ್ ವಿದ್ಯುತ್ ನೀಡಬೇಕೆಂದು ಹೇಳಿದರು.
ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎ.ಗಫಾರ್ ಮಾತನಾಡಿ, ವಿದ್ಯುತ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ ಆರಂಭದ ೧ ತಿಂಗಳ ತಡೆರಹಿತ ವಿದ್ಯುತ್ ಪೂರೈಸಿ. ನಂತರ ಆಯಾ ಕಾರ್ಖಾನೆಗಳೊಂದಿಗೆ ಆಂತರಿಕ ಒಪ್ಪಂದ ಮಾಡಿಕೊಂಡು ಪುನಃ ವಿದ್ಯುತ್ ಲೋಡ್‌ಶೇಡಿಂಗ್ ಪ್ರಾರಂಭಿಸಿ ತಮ್ಮ ನೈಜ ಚಿತ್ರಣ ಅನಾವರಣಗೊಳಿಸಿದರು. ವಿದ್ಯುತ್ ಉತ್ಪಾದನೆ ಮತ್ತು ಸಮರ್ಪಕ ನಿರ್ವಹಣೆಗಾಗಿ ಸರ್ಕಾರದ ವಿರುದ್ದ ರಾಜ್ಯವ್ಯಾಪಿ ರೈತರು ಯಾವದೇ ಸಂಘಟನೆಯಡಿ ಹೋರಾಟ ಮಾಡಬೇಕೆಂದು ಹೇಳಿದರು.
ನಂತರ ಮಾತನಾಡಿದ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ರೈತ ಪರ ಎಂದ ಸಿದ್ದರಾಮಯ್ಯ ಅವರನ್ನು ರಾಜ್ಯದ ಜನತೆ ಬೆಂಬಲಿಸಿ ಮತ ಚಲಾಯಿಸಿದರು. ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ ನೀತಿಗಳನ್ನು ತರುತ್ತಿದೆ. ಸರಿಯಾದ ವಿದ್ಯುತ್ ಕೊಡಲಿಕ್ಕಾಗದ ಈ ಸರ್ಕಾರದ ವಿರುದ್ದ ರೈತರು ಪ್ರತಿಭಟನೆ ಮುಂದುವರೆಯಬೇಕು ಎಂದು ಹೇಳಿದರು.
ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ್ ಮಾತನಾಡಿ, ಯಡಿಯೂರಪ್ಪ ರೈತರ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿ ಅದೇ ರೈತರಿಗೆ ಗುಂಡು ಹಾರಿಸಿದರು. ರೈತರ ಪರ ಅಂತ ಹೇಳುವ ಸರ್ಕಾರಗಳು ರೈತರ ಬೆನ್ನಿಗೆ ಚೂರಿ ಹಾಕುತ್ತಾ ಬಂದಿವೆ. ರೈತರ ಒಕ್ಕಟಾಗಿ ಹೋರಾಡಿ ಸಮರ್ಪಕ ವಿದ್ಯುತ್ ಪಡೆಯಬೇಕೆಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಭೀಮಸೇನ್ ಕಲಕೇರಿ ಮಾತನಾಡಿ, ಚುನಾವಣೆಗಳಲ್ಲಿ ರೈತರ ಪರವಾಗಿ ಸ್ಪರ್ಧಿಸಿದ್ದೇವೆ, ೨೪ ತಾಸು ವಿದ್ಯುತ್ ಕೊಡುತ್ತೇವೆಂದು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಇಡೀ ರಾತ್ರಿ ರೈತರಿಗೆ ಕತ್ತಲಲ್ಲಿ ಇಟ್ಟು ಅನ್ಯಾಯ ಮಾಡಿದೆ. ಮಳೆಗಾಲದಲ್ಲಿಯೇ ವಿದ್ಯುತ್ ನೀಡಲಿಕ್ಕಾಗುತ್ತಿಲ್ಲ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಬೇಕು. ಕಂಪನಿಗಳಿಗೆ ನೀಡುವ ಆದ್ಯತೆ ರೈತರು ಪಂಪ್‌ಸೇಟ್‌ಗಳಿಗೂ ಮಹತ್ವ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ವಿರುದ್ದ ರೈತರ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆಂದು ಎಚ್ಚರಿಸಿದರು.
ಧರಣಿ ಸ್ಥಳಕ್ಕೆ ಬಂದ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್.ಪತ್ತಾರ ಮಾತನಾಡಿ ರಾತ್ರಿ ೩ಫೇಸ್ ವಿದ್ಯುತ್ ನೀಡುವ ವಿಷಯ ಸರ್ಕಾರದ ಮಟ್ಟದಲ್ಲಿದೆ. ಉನ್ನತ ಅಧಿಕಾರಿಗಳ ಜೊತೆ ರೈತ ಮುಖಂಡರೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆಂದು ಹೇಳಿದರು.
ಸಾಂಕೇತಿಕ ಧರಣಿಯಲ್ಲಿ ಕನಕಪ್ಪ ಪೂಜಾರ, ನಾರಾಯಣಪ್ಪ ಗುನ್ನಳ್ಳಿ, ನಾಗಪ್ಪ ಪೂಜಾರ, ತಿಮ್ಮಣ್ಣ ಕಲಕೇರಿ, ಬಸವರಾಜ ಹೂಗಾರ, ರಮೇಶ ಪಿ. ಚಿಕೇನಕೊಪ್ಪ, ಶಿವಪ್ಪ ಒಂಟೆತ್ತ ಕಲಕೇರಿ ಮತ್ತಿತರರು ಭಾಗವಹಿಸಿದ್ದರು.

Leave a Reply