ಬರ : ಡಿ. ೧೬ ರಂದು ಕೇಂದ್ರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ

ಕೊಪ್ಪಳ ಡಿ. : ಕೊಪ್ಪಳ ಜಿಲ್ಲೆಯಲ್ಲಿನ ಬರಪರಿಸ್ಥಿತಿ ಪರಿಶೀಲನೆಗಾಗಿ ಕೇಂದ್ರ ಅಧ್ಯಯನ ತಂಡ ಡಿ. ೧೬ ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಎರಡು ದಿನಗಳ ಕಾಲ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
  ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿದೆ.  ಅಲ್ಲದೆ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯ ಕ್ರಮ ಜರುಗಿಸಿದೆ.  ಇದೀಗ ಜಿಲ್ಲೆಯ ಬರಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಅಧ್ಯಯನ ತಂಡ ಡಿ. ೧೬ ರಂದು ಕೊಪ್ಪಳಕ್ಕೆ ಭೇಟಿ ನೀಡಲಿದೆ.  ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಪ್ರಾದೇಶಿಕ ನಿರ್ದೇಶಕ ಡಾ. ಸಿ. ಅನ್ಬಾಜ್‌ಗನ್, ಕೇಂದ್ರ ಜಲ ಆಯೋಗದ ಅಧೀಕ್ಷಕ ಅಭಿಯಂತರ ರಂಗಾರೆಡ್ಡಿ, ಯೋಜನಾ ಆಯೋಗದ ಡೆಪ್ಯುಟಿ ಅಡ್ವೈಸರ್ ರಾಜ್‌ಪಾಲ್ ಸಿಂಗ್ ಅವರು ಕೇಂದ್ರ ಅಧ್ಯಯನ ತಂಡದ ಸದಸ್ಯರಾಗಿದ್ದು  ಬೆಂಗಳೂರಿನ ಕೃಷಿ ಇಲಾಖೆ ಜಂಟಿನಿರ್ದೇಶಕ ನಾರಾಯಣ ರೆಡ್ಡಿ ಅವರು ತಂಡದ ಸದಸ್ಯರೊಂದಿಗೆ ಜಿಲ್ಲೆಗೆ ಆಗಮಿಸಲಿದ್ದಾರೆ.  ಕೇಂದ್ರ ಅಧ್ಯಯನ ತಂಡವು ಡಿ. ೧೬ ರಂದು ಮಧ್ಯಾಹ್ನ ಗದಗ ಜಿಲ್ಲೆ ಮುಂಡರಗಿಯಿಂದ ಹೊರಟು ಮಧ್ಯಾಹ್ನ ೨.೧೫ ಗಂಟೆಗೆ ಜಿಲ್ಲೆಯ ಯಲಬುರ್ಗಾ ತಾಲೂಕು ಬಾನಾಪುರಕ್ಕೆ ಆಗಮಿಸಿ, ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬರಪರಿಸ್ಥಿತಿಯ ಮಾಹಿತಿ ಪಡೆಯಲಿದೆ.  ಮಧ್ಯಾಹ್ನ ೩-೩೦ ಗಂಟೆಗೆ ಯಲಬುರ್ಗಾ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ.  ತಂಡವು ಅಂದು ಮುನಿರಾಬಾದ್‌ನ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಲಿದೆ.  ಡಿ. ೧೭ ರಂದು ಬೆಳಿಗ್ಗೆ ೮ ಗಂಟೆಗೆ ಕುಷ್ಟಗಿ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ.  ಮಧ್ಯಾಹ್ನ ಕುಷ್ಟಗಿ ಪ್ರವಾಸಿ ಮಂದಿರದಲ್ಲಿ ಊಟ ಪೂರೈಸಿಕೊಂಡು, ಗಂಗಾವತಿ ಮತ್ತು ಕೊಪ್ಪಳ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ.  ಅಂದು ಸಂಜೆ ೬ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸುವ ತಂಡವು ಅದೇ ದಿನ ರಾತ್ರಿ ೮ ಗಂಟೆಗೆ ಹಂಪಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.
Please follow and like us:
error