ಯೋಜನೆಗಳ ಯಶಸ್ಸು ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿದೆ- ಡಿ.ಕೆ. ರವಿ

 ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು ಯಶಸ್ಸು, ಆಯಾ ಕ್ಷೇತ್ರದಲ್ಲಿನ   ಅಂಕಿ-ಸಂಖ್ಯೆಗಳ ನಿಖರತೆಯನ್ನು ಅವಲಂಬಿಸಿರುವುದರಿಂದ ಅಂಕಿ-ಅಂಶಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಅಭಿಪ್ರಾಯಪಟ್ಟರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ರವರ ೧೨೧ನೇ ಜನ್ಮ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸಾಮಾನ್ಯ ಜನರ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸುವ ಯಾವುದೇ ಯೋಜನೆಗಳ ಆಯಾ ವ್ಯಾಪ್ತಿಯ ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿರುತ್ತದೆ.  ಅಂಕಿ-ಅಂಶಗಳ ನಿಖರತೆಯಲ್ಲಿ ವ್ಯತ್ಯಾಸವಾದಲ್ಲಿ ಅಂತಹ ಯೋಜನೆಗಳು ವಿಫಲವಾಗುತ್ತವೆ.  ಜಿಲ್ಲಾ ಮಟ್ಟದಲ್ಲಿ ಗ್ರಾಮಗಳು, ಜನಸಂಖ್ಯೆ ಸೇರಿದಂತೆ ಇನ್ನಿತರೆ ಮಹತ್ವದ ವಿಷಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.  ಈ ಅಂಕಿ-ಅಂಶಗಳು ಇಲಾಖೆಯಿಂದ ಇಲಾಖೆಗೆ ಬೇರೆ, ಬೇರೆಯಾಗಿರುತ್ತವೆ.  ಇದರಿಂದ ಯೋಜನೆಗಳ ಅನುಷ್ಠಾನಕ್ಕೆ ತೊಡಕುಂಟಾಗುವುದು ಸಹಜವಾಗಿ ಪರಿಣಮಿಸಿದೆ.  ಸದ್ಯ ನಮ್ಮ ಜಿಲ್ಲೆಯಲ್ಲಿನ ಕೃಷಿ ಜಮೀನು, ಕೃಷಿಯೇತರ ಪ್ರದೇಶ, ಬೀಳು ಬಿದ್ದಿರುವ ಪ್ರದೇಶ ಇಂತಹ ವಿಷಯಗಳಲ್ಲಿ ನಿಖರವಾದ ಅಂಕಿ-ಸಂಖ್ಯೆ ಇಲ್ಲದಿದ್ದಲ್ಲಿ, ಬಿತ್ತನೆ ಪ್ರಮಾಣ, ಆಹಾರ ಧಾನ್ಯಗಳ ಉತ್ಪಾದನೆ ಮುಂತಾದ ವಿಷಯಗಳ ಮಾಹಿತಿ ನಿಖರವಾಗಿ ದೊರೆಯುವುದಿಲ್ಲ.  ಇನ್ನಾದರೂ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಷಯಗಳ ಬಗ್ಗೆ ನಿಖರವಾದ ಅಂಕಿ-ಸಂಖ್ಯೆಗಳ ಮಾಹಿತಿಯನ್ನು ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮನವಿ ಮಾಡಿದರು.
  ಸಮಾರಂಭದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಸುರೇಶ್ ಕುಮಾರ್ ಅವರು ಮಾತನಾಡಿ, ಪ್ರಶಾಂತಚಂದ್ರ ಮಹಾಲನೋಬಿಸ್ ಅವರು, ಅಂಕಿ-ಸಂಖ್ಯೆಗಳ ಬಗ್ಗೆ ಹೊಂದಿದ್ದ ಅಪಾರವಾದ ಜ್ಞಾನ ಮತ್ತು ಪ್ರಬುದ್ಧತೆಯಿಂದಾಗಿಯೇ ಖ್ಯಾತ ಸಂಖ್ಯಾ ಶಾಸ್ತ್ರಜ್ಞರೆನಿಸಿಕೊಂಡಿದ್ದಾರೆ.  ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ಪಂಚವಾರ್ಷಿಕ ಯೋಜನೆಗಳ ಯಶಸ್ವಿಗೆ ಇವರ ಕೊಡುಗೆ ಅಪಾರವಾಗಿದೆ ಎಂದು ನುಡಿದರು.
  ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.  ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು, ವನಿತಾ ಪ್ರಾರ್ಥಿಸಿದರು, ಬಿ. ಬಸವನಗೌಡ ಕಾರ್ಯಕ್ರಮ ನಿರೂಪಿಸಿದರು.  ಇದೇ ಸಂದರ್ಭದಲ್ಲಿ ಸಾಂಖ್ಯಿಕ ದಿನಾಚರಣೆ ಅಂಗವಾಗಿ ಯಾವುದೇ ಯೋಜನಾ ವರದಿಗೆ, ನಿಖರವಾದ ಅಂಕಿ-ಅಂಶಗಳ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸುತ್ತೇವೆ ಎಂಬುದಾಗಿ ಎಲ್ಲ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.  ಸಾಂಖ್ಯಿಕ ದಿನಾಚರಣೆ ಅಂಗವಾಗಿ ಜೂ. ೨೭ ರಂದು ಕೊಪ್ಪಳದಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನರೇಂದ್ರಕುಮಾರ ಮೇಟಿ, ದ್ವಿತೀಯ- ಸೋಮಪ್ಪ ಚನ್ನಬಸಪ್ಪ ಕೊಳಜಿ ಹಾಗೂ ತೃತೀಯ- ಪರಶುರಾಮ ರಾಥೋಡ ಅವರಿಗೆ ಕ್ರಮವಾಗಿ ರೂ. ೧೦೦೦, ೫೦೦ ಮತ್ತು ೨೫೦ ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
Please follow and like us:
error