ವಿದ್ಯಾರ್ಥಿಗೆ ಥಳಿತ : ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

 ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನಲ್ಲಿ ಜರುಗಿದ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆಯೋಗದ ಸದಸ್ಯೆ ವನಿತಾ ಎನ್. ತೊರವಿ ಅವರು ನ. ೧೬ ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಿದ್ದಾರೆ.
      ಗಂಗಾವತಿಯ ವಿನಾಯಕ ವಿದ್ಯಾಸಂಸ್ಥೆಯ ೨ನೇ ತರಗತಿ ವಿದ್ಯಾರ್ಥಿ ಮುಸ್ಕಾನ್ ರಾಜಾ ಹುಸೇನ್ ಹೋಂ ವರ್ಕ್ ಮಾಡಿಕೊಂಡು  ಬಂದಿಲ್ಲವೆಂಬ ಕಾರಣಕ್ಕೆ ಶಿಕ್ಷಕಿ ಜ್ಯೋತಿ ಅವರು ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಬಗ್ಗೆ ಹಾಗೂ ವದಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭ ನೇ ತರಗತಿ ವಿದ್ಯಾರ್ಥಿ ಗದಿಗೆಪ್ಪ ಬಂಡಿಹಾಳ ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಕುರಿತಂತೆ ಮಾಧ್ಯಮಗಳಲ್ಲಿ ನವೆಂಬರ್ ೦೬ ಮತ್ತು ೧೦ ರಂದು ವರದಿ ಪ್ರಕಟಗೊಂಡಿತ್ತು.  ಈ ವರದಿಗಳನ್ನು ಆಧರಿಸಿ ಆಯೋಗವು ಸ್ವ-ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದು, ಈ ಎರಡೂ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಲು ಆಯೋಗದ ಸದಸ್ಯೆ ವನಿತಾ ಎನ್. ತೊರವಿ ಅವರು ನ. ೧೬ ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Please follow and like us:
error