ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ : ಅರ್ಜಿ ಸಲ್ಲಿಸಲು ಸೂಚನೆ

: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ-೨೦೧೨ ರಂತೆ ಈ ಅಧಿನಿಯಮ ೨೦೦೯ ಪ್ರಾರಂಭಕ್ಕೆ ಮುಂಚೆ ಅಸ್ತಿತ್ವದಲ್ಲಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹದೇವಸ್ವಾಮಿ ಅವರು ಸೂಚನೆ ನೀಡಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ-೨೦೦೯ ಜಾರಿಗೆ ಬರುವ ಮೊದಲು ಅಸ್ತಿತ್ವದಲ್ಲಿ ಇದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ-೨೦೧೦ ರಂತೆ ಕಡ್ಡಾಯ ನೋಂದಣಿ ಅವಧಿಯು ದಿನಾಂಕ: ೨೪-೧೦-೨೦೧೦ ಕ್ಕೆ ಕೊನೆಗೊಂಡಿರುತ್ತದೆ. ಆದರೆ   ಕಾರಣಾಂತರಗಳಿಂದ ಅಧಿನಿಯಮ ಜಾರಿಗೆ ಬರುವ ಮುನ್ನ ಅಸ್ತಿತ್ವದಲ್ಲಿದ್ದ ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು ಇನ್ನು ನೋಂದಣಿಯಾಗದೇ ಇರುವುದು ಇಲಾಖೆಯ ಗಮನಕ್ಕೆ ಬಂದಿದ್ದು ಇಲಾಖೆಯ ಕೋರಿಕೆಯಂತೆ ಸರಕಾರವು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಮ ೨೦೧೨ ದಿನಾಂಕ: ೦೮-೧೦-೨೦೧೨ ಅಧಿನಿಯಮವನ್ನು ಜಾರಿಗೆ ತಂದಿರುವುದರಿಂದ ಬಾಕಿ ಇದ್ದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಮಾನುಸಾರ ದಿನಾಂಕ: ೦೨-೦೩-೨೦೧೩ ರೊಳಗೆ ಕಡ್ಡಾಯವಾಗಿ ನೋಂದಣಿ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.  ಸದ್ಯ ಅಸ್ತಿತ್ವದಲ್ಲಿ ಇರುವ, ಆದರೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನೋಂದಣಿಗಾಗಿ ಅರ್ಜಿ ಸಲ್ಲಿಸದೇ ಇರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು ೨೦೧೩ ರ ಮಾರ್ಚ್ ೦೨ ರ ನಂತರ ಸಂಸ್ಥೆಯನ್ನು ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ.  ಆದ್ದರಿಂದ ಅಂತಹ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೂಡಲೆ ನೋಂದಣಿಗಾಗಿ ಅರ್ಜಿ ಸಲ್ಲಿಸುವಂತೆ, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕೊಪ್ಪಳ ಇವರನ್ನು ಸಂಪರ್ಕಿಸಿ ನಿಗದಿತ ಶುಲ್ಕ ಭರಿಸಿ ಅರ್ಜಿ ನಮೂನೆಗಳನ್ನು ಪಡೆಯಬಹುದಾಗಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹದೇವಸ್ವಾಮಿ ತಿಳಿಸಿದ್ದಾರೆ.
Please follow and like us:
error