ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಸರ್ವಾಧಿಕಾರಿ ಪ್ರವೃತ್ತಿಗಳು

– ಸುರೇಶ್ ಭಟ್, ಬಾಕ್ರಬೈಲ್
ರೈತರ ಜಮೀನುಗಳನ್ನು ಕಿತ್ತು ಟಾಟಾನಂತಹ ಖಾಸಗಿ ಉದ್ಯಮಿಗಳಿಗೆ ಬೇಕಾಬಿಟ್ಟಿಯಾಗಿ ನೀಡುತ್ತ ವಿದೇಶಿ ಚಿಲ್ಲರೆ ವ್ಯಾಪಾರಕ್ಕೆ ಒಲವು ತೋರಿಸುತ್ತ ಒಂದು ವಿಧದ ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ ಪಶ್ಚಿಮ ಬಂಗಾಳದ ಎಡರಂಗದ ಸರಕಾರ ಜನಸಾಮಾನ್ಯರಿಂದ ಬಹುದೂರವಾಗಿತ್ತು. ಭ್ರಮನಿರಸನಗೊಂಡ ಬಂಗಾಳಿಗಳು ಕೊನೆಗೂ ಕಳೆದ ಚುನಾವಣೆಯಲ್ಲಿ ನಿರ್ಣಾಯಕವಾಗಿ ಮತ ಚಲಾಯಿಸಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ಗೆ ಒಂದು ಅವಕಾಶ ಕಲ್ಪಿಸಿಕೊಟ್ಟಿರುವುದು ಈಗ ಇತಿಹಾಸ. ಆದರೆ ಉತ್ತಮ ಆಡಳಿತ ನೀಡುವೆನೆಂದು ಆಶ್ವಾಸನೆ ಕೊಟ್ಟ ಮಮತಾ ದೀದಿಯ ಸರಕಾರದ ಇತ್ತೀಚಿನ ವರ್ತನೆಗಳು ಮಾತ್ರ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆಯುವಂತಿವೆ. ಮಮತಾ ದೀದಿಯ ಸರಕಾರ ಈಗ ಕೆಲವು ಪತ್ರಿಕೆಗಳಿಗೆ ಸೆನ್ಸಾರ್‌ಶಿಪ್ ವಿಧಿಸುವ ಒಂದು ಆಘಾತಕಾರಿ ಹೆಜ್ಜೆಯನ್ನಿಟ್ಟಿದೆ. ರಾಜ್ಯದಲ್ಲಿರುವ ಒಟ್ಟು 2482 ಗ್ರಂಥಾಲಯಗಳಿಗೆ ಕೆಲವು ನಿರ್ದಿಷ್ಟ ರಾಜಕೀಯ ಪಕ್ಷಗಳು ಪ್ರಕಟಿಸುವ ಮತ್ತು ಹಾಗೆ ಆರೋಪಿಸಲಾಗಿರುವ ಪತ್ರಿಕೆಗಳ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಮೊದಲು ಎಲ್ಲಾ ಇಂಗ್ಲಿಷ್ ಪತ್ರಿಕೆಗಳ ಪೂರೈಕೆಯನ್ನು ನಿಲ್ಲಿಸಿ ಕೇವಲ 8 ಪತ್ರಿಕೆಗಳ ಖರೀದಿಗೆ ಅನುಮತಿ ನೀಡಲಾಯಿತು.
ಇವುಗಳ ಪೈಕಿ ಹೆಚ್ಚಿನವು ತೃಣಮೂಲ ಕಾಂಗ್ರೆಸ್ ಜೊತೆ ನೇರ ಯಾ ಪರೋಕ್ಷ ಸಂಬಂಧವಿರುವಂಥವು. ಸರಕಾರದ ಕ್ರಮಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾದ ನಂತರ ಇಂಗ್ಲಿಷ್‌ನ ‘ಟೈಮ್ಸ್ ಆಫ್ ಇಂಡಿಯ’ ಒಳಗೊಂಡಂತೆ ಇನ್ನೂ 5 ಪತ್ರಿಕೆಗಳನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಯಿತು.‘‘ಇದನ್ನೆಲ್ಲ ಜನರಲ್ಲಿ ಮುಕ್ತ ಚಿಂತನೆ ಬೆಳೆಸುವ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಮಾಡಲಾಗುತ್ತಿದೆ’’ ಎಂದು ಸರಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಇದರೊಂದಿಗೆ ಇದನ್ನು ಸ್ಥಳೀಯ ಸಣ್ಣಪುಟ್ಟ ಪತ್ರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಮಾಡಲಾಗುತ್ತಿದೆ ಎಂಬ ಬಹಳ ಹಾಸ್ಯಾಸ್ಪದವಾದ ವಿವರಣೆ ಬೇರೆ. ವಾಸ್ತವದಲ್ಲಿ ಇದು ಪ್ರಜೆಗಳಿಗಿರುವ ಅರಿವಿನ ಹಕ್ಕಿಗೆ ಮಾಡಿದ ಅವಮಾನ ಮತ್ತು ಅಪಚಾರ.
ಹಾಗೆ ನೋಡಿದರೆ ಒಂದು ಗ್ರಂಥಾಲಯದಲ್ಲಿ ಯಾವ್ಯಾವ ಪತ್ರಿಕೆ, ನಿಯತಕಾಲಿಕ, ಪ್ರಕಟಣೆ, ಪುಸ್ತಕಗಳಿರಬೇಕೆಂದು ನಿರ್ಧರಿಸುವ ಹಕ್ಕಿರುವುದು ಆಯಾ ಆಡಳಿತ ಮಂಡಲಿಗೆ ಹೊರತು ಸರಕಾರಕ್ಕಲ್ಲ.ತಾವೇನನ್ನು ಅಪೇಕ್ಷಿಸುತ್ತೇವೆಂದು ಆಡಳಿತ ಮಂಡಲಿಗೆ ಹೇಳುವ ಹಕ್ಕೂ ಜನರಿಗೆ ಇದೆ.ಮಮತಾ ಬ್ಯಾನರ್ಜಿಗೂ ಅಧಿಕಾರದ ಮದದಿಂದ ಕೊಬ್ಬಿರುವ ಓರ್ವ ದುರಹಂಕಾರಿ ನಾಯಕನಾದ ಬಾಳಾ ಠಾಕ್ರೆಗೂ ವಿಶೇಷ ವ್ಯತ್ಯಾಸಗಳಿರುವಂತಿಲ್ಲ.ಶಿವಸೇನಾ ಪ್ರಮುಖನೂ ಭಿನ್ನಾಭಿಪ್ರಾಯಗಳನ್ನು ಸಹಿಸುವವನಲ್ಲ.ಇತರರ ಬರಹಗಳಲ್ಲಿ ವ್ಯಕ್ತವಾಗುವ ಚಿಂತನೆಗಳು ತನ್ನ ಚಿಂತನೆಗಳ ಮೇಲೆ ಪ್ರಭಾವ ಬೀರಬಹುದು,ಆ ಮೂಲಕ ತನ್ನ ಧೋರಣೆಗಳು ಬದಲಾಗಬಹುದೆಂಬ ಅಭದ್ರತೆಯೊಂದು ಆತನನ್ನು ಸದಾ ಕಾಡುತ್ತಿರುತ್ತದೆ.ಹಾಗಾಗಿ ಭಿನ್ನಾಭಿಪ್ರಾಯಗಳ ಬಗೆಗೆ ಅಸಹನೆ ಮತ್ತು ಜನಸಾಮಾನ್ಯರನ್ನು ಓಲೈಸುವ ರಾಜಕಾರಣ ಇವೆರಡು ವಿಷಯಗಳಲ್ಲಿ ಇಬ್ಬರೂ ಒಂದೇ ಅಚ್ಚಿನಲ್ಲಿ ಎರಕ ಹೊಯ್ದಂತಿದ್ದಾರೆ.
ಒಂದೆಡೆ ಕೆಲವು ನಿರ್ದಿಷ್ಟ ಪತ್ರಿಕೆಗಳಿಗೆ ಸರಕಾರಿ ಜಾಹೀರಾತು ಹೆಚ್ಚಿಸಲಾಗಿದ್ದರೆ ಇನ್ನೊಂದೆಡೆ ವಿರೋಧಿಗಳ ಧ್ವನಿ ಅಡಗಿಸುವ ಪ್ರಯತ್ನದ ಭಾಗವಾಗಿ ಇನ್ನಿತರ ಕೆಲವು ಸಣ್ಣಪುಟ್ಟ ಪತ್ರಿಕೆಗಳಿಗೆ ಜಾಹೀರಾತು ನಿಲ್ಲಿಸಲಾಗಿದೆ. ಸಂವಿಧಾನದ ಪರಿಚ್ಛೇದ 294ರ ಪ್ರಕಾರ ದೇಶದ ಸಂಪತ್ತು ಸಾರ್ವಜನಿಕ ಆಸ್ತಿ. ಅದನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಬಳಸುವುದಷ್ಟೆ ಕೇಂದ್ರ ಅಥವಾ ರಾಜ್ಯ ಸರಕಾರಗಳ ಕೆಲಸ. ಸಾರ್ವಜನಿಕ ಸಂಪತ್ತನ್ನು ಮನಬಂದಂತೆ ವೆಚ್ಚ ಮಾಡುವಂತಿಲ್ಲ. ಹಾಗೆ ಮಾಡಿದರೆ ಅದು ಪರಿಚ್ಛೇದ 14ರಲ್ಲಿ ಹೇಳಲಾಗಿರುವ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ.‘‘ಖಾಸಗಿ ವ್ಯಕ್ತಿಯೊಬ್ಬ ತನ್ನಿಚ್ಛೆಯಂತೆ ತನಗಿಷ್ಟ ಬಂದವರಿಗೆ ಉದಾರ ಧನಸಹಾಯ ನೀಡಬಹುದು.ಆದರೆ ಪ್ರಜೆಗಳಿಂದ ಚುನಾಯಿತವಾದ ಸರಕಾರವೊಂದು ಕೆಲವು ನೀತಿನಿಯಮಗಳಿಗೆ ಅನುಗುಣವಾಗಿ ಕಾರ್ಯಾಚರಿಸಬೇಕಾಗುತ್ತದೆ.ಸರಕಾರ ಇಚ್ಛಾನುಸಾರಿಯಾಗಿ, ಅಸಂಬದ್ಧವಾಗಿ, ಅಪ್ರಸ್ತುತವಾಗಿ ಕಾರ್ಯಾಚರಿಸುವಂತಿಲ್ಲ’’ ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದು ಹೇಳುತ್ತದೆ. ಪಶ್ಚಿಮ ಬಂಗಾಳದ ಸಾಂಸ್ಕೃತಿಕ ವಲಯದಲ್ಲಿಯೂ ಇದೇ ತೆರನಾದ ಬೆಳವಣಿಗೆಗಳಾಗುತ್ತಿವೆ.
ಕಳೆದ ಚುನಾವಣೆ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ ಸಾಹಿತಿ, ಕವಿ, ಕಲಾಕಾರರಿಗೆ ಪದಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ವಿವಿಧೆಡೆಗಳಲ್ಲಿ ಗೂಂಡಾಗಿರಿ ನಡೆಸುತ್ತಿರುವ ಬಗ್ಗೆ ವರ್ತಮಾನಗಳ ಮೇಲೆ ವರ್ತಮಾನಗಳು ಬರುತ್ತಿವೆ.ಹೀಗೇ ಮುಂದುವರಿದರೆ ಮುಂದಿನ ವಿದ್ಯಮಾನಗಳು ಹೇಗಿರಬಹುದು? ಪ್ರಜೆಗಳು ಯಾವುದನ್ನು ಓದಬೇಕು ಯಾವುದನ್ನು ಓದಬಾರದೆಂದು ನಿರ್ಧರಿಸುವುದಕ್ಕೆ ಆರಂಭಿಸಿರುವ ಸರಕಾರ ಮುಂದೆ ತನಗೆ ಬೇಕಿರುವ ಮಾಧ್ಯಮಗಳನ್ನು ಉಳಿಸಿಕೊಳ್ಳುವುದು, ಅವುಗಳಿಗೆ ಸಂಪನ್ಮೂಲ ಒದಗಿಸುವುದು,ಸಂಪಾದಕರ ಆಯ್ಕೆ ಮಾಡುವುದು, ಸುದ್ದಿಗಳ ಮೇಲೆ ನಿಯಂತ್ರಣ ಹೇರುವುದು ಇತ್ಯಾದಿಗಳನ್ನೂ ಮಾಡಲಿದೆಯೇ? ನಿಧಾನಕ್ಕೆ ರೇಡಿಯೊ, ಟಿವಿ, ಶಿಕ್ಷಣ, ಸಿನಿಮಾ ರಂಗಗಳನ್ನೂ ಆವರಿಸಿ ಅಲ್ಲೆಲ್ಲಾ ಸರಕಾರದ ಪರ ವ್ಯವಸ್ಥಿತ ಪ್ರಚಾರ ನಡೆಯುವಂತೆ ನೋಡಿಕೊಳ್ಳಲಾಗುತ್ತದೆಯೇ? ಅಂತಿಮವಾಗಿ ಮಮತಾ ದೀದಿಯ ತೃಣಮೂಲ ಸರಕಾರ ಪಶ್ಚಿಮ ಬಂಗಾಳವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಲಿದೆ?
************
‘From Chief Minister to Chief Censor’
ಆಧಾರ: ಎ.ಜಿ. ನೂರಾನಿಯವರ ಕೃಪೆ: ದ ಹಿಂದೂ
Please follow and like us:
error