ನವದೆಹಲಿಯಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಅನಾವರಣಗೊಳ್ಳಲು ವೇದಿಕೆ ಸಜ್ಜು

 ನವದೆಹಲಿಯಲ್ಲಿ ೨೦೧೩ರ ಜನವರಿ ೨೬ ರಂದು ನಡೆಯಲಿರುವ ಈ ಬಾರಿಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ಕರ್ನಾಟಕ ರಾಜ್ಯ ವಾರ್ತಾ ಇಲಾಖೆ ಮೂಲಕ ಅನಾವರಣಗೊಳ್ಳಲು ವೇದಿಕೆ ಸಜ್ಜುಗೊಂಡಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಈ ಬಾರಿ ಕಿನ್ನಾಳ ಕಲೆಯ ಸ್ತಬ್ಧಚಿತ್ರ ಆಯ್ಕೆಗೊಂಡಿದೆ.
     ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವದ ರಾಷ್ಟ್ರೀಯ ಮಟ್ಟದ ಸ್ತಬ್ಧಚಿತ್ರ ಆಯ್ಕೆ ಸಮಿತಿಯ ಅಂತಿಮ ಸಭೆಯಲ್ಲಿ ಕರ್ನಾಟಕ ರಾಜ್ಯದಿಂದ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ಆಯ್ಕೆಗೊಂಡಿರುವುದಾಗಿ ರಾಜ್ಯ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಹಾಗೂ ಉಪನಿರ್ದೇಶಕರಾದ ಲಕ್ಷ್ಮೀನಾರಾಯಣ ಅವರು ದೃಢಪಡಿಸಿದ್ದಾರೆ.
     ಕಳೆದ ವರ್ಷ ಈ ನಾಡಿನ ಕನ್ನಡ ಪ್ರೇಮಿಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಉಣಬಡಿಸಲು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಪಡೆಯುವುದರ ಮೂಲಕ ಇಡೀ ರಾಜ್ಯಕ್ಕೆ ಕೊಪ್ಪಳ ಜಿಲ್ಲೆಯ ಹಿರಿಮೆಯನ್ನು ಪರಿಚಯಿಸಿದ್ದರೆ, ಈ ಬಾರಿ ನಮ್ಮ ದೇಶದ ರಾಜಧಾನಿಯಾಗಿರುವ ನವದೆಹಲಿಯಲ್ಲಿ ಬರುವ ಜನವರಿ ೨೬ ರಂದು ಜರುಗಲಿರುವ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಿಂದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧ ಚಿತ್ರ ಅನಾವರಣಗೊಳ್ಳಲು ಆಯ್ಕೆಯಾಗುವ ಮೂಲಕ ಕೊಪ್ಪಳ ಜಿಲ್ಲೆಯ ಕೀರ್ತಿಗೆ ಮತ್ತೊಂದು ಗರಿ ಮೂಡಿದಂತಾಗಿದೆ.

     ಇತಿಹಾಸದ ಪುಟಗಳಲ್ಲಿ ಸುವರ್ಣಯುಗವೆಂದೇ ಬಣ್ಣಿಸಲಾಗಿರುವ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಹಿನ್ನೆಲೆಯೊಂದಿಗೆ ಸಾಂಪ್ರದಾಯಿಕ ಕಲೆಯನ್ನೊಳಗೊಂಡಿರುವ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ನವದೆಹಲಿಯಲ್ಲಿ ಅನಾವರಣಗೊಳ್ಳಲು ಈ ಬಾರಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಬಗ್ಗೆ ಕೊಪ್ಪಳ ಸಂಸದ ಶಿವರಾಮಗೌಡ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೇರಿದಂತೆ ಕಿನ್ನಾಳ ಗ್ರಾಮಸ್ಥರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.  ಅಲ್ಲದೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಈ ಮೂಲಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದು, ಕಿನ್ನಾಳ ಕಲೆಯ ಕೀರ್ತಿ ದೇಶ ವಿದೇಶಗಳಿಗೆ ಇನ್ನಷ್ಟು ವ್ಯಾಪಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

      ಕಳೆದ ೨೦೧೨ ರ ಜನವರಿ ೨೬ ರಂದು ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಮೆರವಣಿಗೆಗೆ ಕರ್ನಾಟಕ ರಾಜ್ಯದಿಂದ ಮಂಗಳೂರು ಜಿಲ್ಲೆಯ ಭೂತಾರಾಧನೆ, ೨೦೧೧ ರಲ್ಲಿ ಬೀದರ್ ಜಿಲ್ಲೆಯ ಬಿದರಿ ಕಲೆ ಕುರಿತ ಸ್ತಬ್ಧಚಿತ್ರಗಳು ಅನಾವರಣಗೊಂಡಿದ್ದವು.  ವಿಶೇಷವೆಂದರೆ ಕರ್ನಾಟಕ ರಾಜ್ಯದ ವಾರ್ತಾ ಇಲಾಖೆ ಮೂಲಕ ಮೂಡಿಬಂದ ಈ ಸ್ತಬ್ಧಚಿತ್ರಗಳು ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದವು.  ಈ ಬಾರಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ಧಚಿತ್ರ ಮೂಡಿಬರಲಿದ್ದು, ವೈಶಿಷ್ಟ್ಯ ಕಲಾಕೃತಿಗಳನ್ನೊಳಗೊಂಡ ಕಿನ್ನಾಳ ಕಲೆ ಈ ಬಾರಿಯ ಸ್ತಬ್ಧಚಿತ್ರದ ಆಕರ್ಷಣೆಯನ್ನು ಇಮ್ಮಡಿಗೊಳಿಸಲಿದೆ.

ಕಿನ್ನಾಳ ಕಲೆಯ ಹಿನ್ನೆಲೆ : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಇನ್ನುವಂತೆ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಖ್ಯಾತಿ ಪ್ರಪಂಚದಾದ್ಯಂತ ಹಬ್ಬಿದೆ.  ವಿವಿಧ ಬಗೆಯ ಗೊಂಬೆಗಳ ಮೂಲಕ ಒಂದು ಹೊಸ ಬಣ್ಣದ ಲೋಕವನ್ನೇ ಸೃಷ್ಟಿಮಾಡುವ ಕಿನ್ನಾಳ ಗ್ರಾಮದ ಚಿತ್ರಗಾರರಿಗೆ ದೊಡ್ಡ ಇತಿಹಾಸ ಹಾಗೂ ಪರಂಪರೆ ಇದೆ.  ಕಿನ್ನಾಳ ಕಲೆಗೆ ವಿಜಯನಗರ ಸಾಮ್ರಾಜ್ಯವೇ ಮೂಲ ಕೇಂದ್ರವಾಗಿದ್ದು, ಇದರ ರಾಜಧಾನಿಯಾಗಿದ್ದ ಹಂಪಿಯ ಸಕಲ ಕಲಾ ವೈಭವಕ್ಕೆ ಈ ಕಲೆ ವಿಶೇಷ ಕಾಣಿಕೆ ನೀಡಿದೆ.  ಹಂಪಿಯ ವಿರೂಪಾಕ್ಷ ದೇವಾಲಯ, ಪಂಪಾಪತಿ  ದೇವಾಲಯಗಳ ಛತ್ತಿನ ಮೇಲೆ ಬಣ್ಣ ಬಣ್ಣಗಳ ವಿಶೇಷ ಚಿತ್ರಕಲೆ ಮೂಡಿರುವುದು, ಈ ಕಲೆಯ ವೈಶಿಷ್ಟ್ಯವನ್ನು ಬಿಂಬಿಸುತ್ತದೆ. ಈ ಸಾಮ್ರಾಜ್ಯದಲ್ಲಿ ರಾಜಾಶ್ರಯದೊಂದಿಗೆ ತಮ್ಮ ಕಲೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಚಿತ್ರಗಾರರ ಕುಟುಂಬಗಳು ವಿಜಯನಗರ ಸಾಮ್ರಾಜ್ಯದ ಪತನದ ನಂತರ ದಿಕ್ಕೆಟ್ಟು ಓಡುವಂತಾಯಿತು.  ತಮ್ಮ ಕಲೆಗಿಂತ, ಬದುಕು ರೂಪಿಸಿಕೊಳ್ಳುವ ಸಲುವಾಗಿ ವಿವಿಧ ಭಾಗಗಳಿಗೆ ವಲಸೆ ಹೋದರು.  ಹೀಗೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೂ ವಲಸೆ ಬಂದ ಕೆಲ ಚಿತ್ರಗಾರರ ಹಲವು ಕುಟುಂಬಗಳು ಇಂದಿಗೂ ಸಾಂಪ್ರದಾಯಕ ಕಿನ್ನಾಳ ಕಲೆಯನ್ನು ಮುಂದುವರೆಸಿಕೊಂಡು, ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.  ನಮ್ಮ ನಾಡಿನಲ್ಲಿ ಕರಕುಶಲ ಕಲೆಗಳಿಗೆ ಶತ ಶತಮಾನಗಳ ರೋಚಕ ಇತಿಹಾಸವಿದೆ.  ಇಂದಿನ ಆಧುನಿಕ ಯುಗದಲ್ಲಿಯೂ ಕಿನ್ನಾಳ ಕಲೆ ಜೀವಂತವಾಗಿದೆಯಲ್ಲದೆ, ಕಿನ್ನಾಳ ಕಲೆಯು ತನ್ನದೇ ಆದ ಮಹತ್ವದ ಸ್ಥಾನವನ್ನು ಹೊಂದಿದೆ.  ಅನೇಕ ಬಗೆಯ ಬಣ್ಣ ಬಣ್ಣದ ಗೊಂಬೆಗಳ ಕಲೆಗಳ ನಡುವೆಯೂ, ಕಿನ್ನಾಳ ಗೊಂಬೆಗಳ ಬೆಡಗು, ಬಿನ್ನಾಣ, ಗೊಂಬೆಗಳಲ್ಲಿನ ಸಮತೋಲಿತ ವಿನ್ಯಾಸ ಹಾಗೂ ಆಕಾರಗಳು, ಈ ಕಲೆಯ ವೈಶಿಷ್ಟ್ಯಕ್ಕೆ ಬೆರಗಾಗುವಂತೆ ಮಾಡುತ್ತದೆ.  ಕಿನ್ನಾಳದ ಪಾರಂಪರಿಕ ಕಲೆ, ಇದೀಗ ವಾಣಿಜ್ಯ ರೂಪ ಪಡೆದು, ವಿವಿಧ ಮಾದರಿಯ ಗೊಂಬೆಗಳ ತಯಾರಿಕೆಗೆ ಬದಲಾಗುತ್ತಿದೆ.  ಜನರ ಅಭಿರುಚಿಗಳಿಗೆ ತಕ್ಕಂತೆ, ಚಿಕ್ಕ, ಚಿಕ್ಕ ಗೊಂಬೆಗಳಿಂದ ಮೊದಲುಗೊಂಡು, ದೊಡ್ಡ ಪ್ರಮಾಣದ ಕಲಾ ಮಾದರಿಯ ಗೊಂಬೆಗಳ ತಯಾರಿಕೆಗೆ ಚಿತ್ರಗಾರರು ಹೊಂದಿಕೊಳ್ಳಲಾರಂಭಿಸಿದ್ದಾರೆ.

     ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ರಾಷ್ಟ್ರ ಮಟ್ಟದಲ್ಲಿ ಅನಾವರಣಗೊಂಡು, ಕಿನ್ನಾಳ ಕಲಾವಿದರ ಕಲಾತ್ಮಕತೆಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ದೊರೆಯಲಿ ಎಂಬುದು ನಮ್ಮ ಸದಾಶಯವಾಗಿದೆ.

                                                     –             ತುಕಾರಾಂ ರಾವ್ ಬಿ.ವಿ. ಜಿಲ್ಲಾ ವಾರ್ತಾಧಿಕಾರಿ,  ಕೊಪ್ಪಳ.

Leave a Reply