ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳಿಗೆ ತಾಲೂಕ ಮಟ್ಟದ ಕಾರ್ಯಾಗಾರ

ಕೊಪ್ಪಳ ತಾಲೂಕಿನ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಮಹಾತ್ಮಾಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಕುರಿತಂತೆ ಕೊಪ್ಪಳ ತಾಲೂಕಿನ ಭಾಗ್ಯನಗರದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ತಾಲೂಕ ಮಟ್ಟದ ಕಾರ್ಯಾಗಾರಕ್ಕೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಉದ್ಯೋಗಖಾತ್ರಿ ಯೋಜನೆಯಡಿ 2015-16ನೇ ಸಾಲಿನ ಕಾಮಗಾರಿ ಗುಚ್ಚಗಳನ್ನು ತಯಾರಿಸಲು ವಾರ್ಡಸಭೆ, ಗ್ರಾಮಸಭೆ, ಸಾಮಾನ್ಯ ಸಭೆಗಳನ್ನು ಜರುಗಿಸಿ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಗ್ರಾ.ಪಂ. ಸದಸ್ಯರಿಗೆ ಕಿವಿ ಮಾತು ಹೇಳಿದರು. ಕೂಲಿ ಆಧಾರಿತ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡಿಕೊಂಡು ಸರ್ಕಾರದ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ವಯ ಕಾಮಗಾರಿಗಳನ್ನು ಆರಂಭಿಸಬೇಕಾಗುತ್ತದೆ. ಎಸ್.ಸಿ./ಎಸ್.ಟಿ. ಹಾಗೂ ಸಣ್ಣ/ಅತೀ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಅರಣ್ಯೀಕರಣ/ತೋಟಗಾರಿಕೆ ಸಸಿಗಳನ್ನು ನೆಡುವ ಕಾಮಗಾರಿಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ಗುಚ್ಚದಲ್ಲಿ ಅಳವಡಿಸುವಂತೆ ತಿಳಿಸಿದರು. 
 ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ವಿಷ್ಣುತೀರ್ಥಾಚಾರ್ ಮಾತನಾಡಿ, ವಾರ್ಡಸಭೆ ಆ. 15 ರಿಂದ 31 ರವರೆಗೆ, ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಯನ್ನು ಸೆ. 01 ರಿಂದ 10 ರವರೆಗೆ ಜರುಗಿಸುವ ಕುರಿತು ಗ್ರಾಮೀಣಾಭಿವೃದ್ದಿ ಆಯುಕ್ತರು ಹೊರಡಿಸಿರುವ ಸುತ್ತೋಲೆ ಕುರಿತು ಮಾಹಿತಿ ನೀಡಿದರು. 
  ಭಾಗ್ಯನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಹೊನ್ನೂರುಸಾಬ ಭೈರಾಪುರ ಅವರು ಮಾತನಾಡಿ, ಯೋಜನೆಯ ವಿವಿಧ ಕಾಮಗಾರಿಗಳ ಅನುಷ್ಠಾನ ಕುರಿತು ಸಭೆಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ವಿವಿಧ ಗ್ರಾ.ಪಂ. ಅಧ್ಯಕ್ಷರು ಹಾಜರಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾ.ಪಂ. ಸದಸ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು/ಕಾರ್ಯದರ್ಶಿಗಳು ಹಾಜರಿದ್ದರು. 
  ಕಾರ್ಯಕ್ರಮದಲ್ಲಿ ತಾಲೂಕ ಎಂಐಎಸ್ ಸಂಯೋಜಕ ಮಂಜುನಾಥ ಜವಳಿ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕು ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ತಾಲೂಕ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಮಹಶ ಗೋರಂಟ್ಲಿ, ಸಹಾಯಕ ಮಹಮದ ಇಬ್ರಾಹಿಂ ಹಾಜರಿದ್ದರು.

Leave a Reply