You are here
Home > Koppal News > ಸುಳೇಕಲ್ ಗ್ರಾ.ಪಂ. ನಲ್ಲಿ ಅಕ್ರಮ : ಪಿಡಿಓ ಸಸ್ಪೆಂಡ್, ಮೂವರು ಗುತ್ತಿಗೆ ಸಿಬ್ಬಂದಿ ವಜಾ

ಸುಳೇಕಲ್ ಗ್ರಾ.ಪಂ. ನಲ್ಲಿ ಅಕ್ರಮ : ಪಿಡಿಓ ಸಸ್ಪೆಂಡ್, ಮೂವರು ಗುತ್ತಿಗೆ ಸಿಬ್ಬಂದಿ ವಜಾ

 ಗಂಗಾವತಿ ತಾಲೂಕು ಸುಳೇಕಲ್ ಗ್ರಾಮ ಪಂಚಾಯತಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಲ್ಲಿ ಅಕ್ರಮ, ಕರ್ತವ್ಯ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಂಗಪ್ಪ ಮುದುಕಪ್ಪ ಅವರನ್ನು ಅಮಾನತುಗೊಳಿಸಲಾಗಿದ್ದು, ಮೂವರು ಹೊರಗುತ್ತಿಗೆ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಆದೇಶ ಹೊರಡಿಸಿದ್ದಾರೆ.
  ಸುಳೇಕಲ್ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಉದ್ಯೋಗ ನೀಡಿ, ಕೆಲಸ ನಿರ್ವಹಿಸುವ ಬದಲು, ಗುತ್ತಿಗೆದಾರರಿಂದ ಕಾಮಗಾರಿ ಕೈಗೊಳ್ಳಲಾಗಿದೆ.  ಅಲ್ಲದೆ ಸಾಮಗ್ರಿಗಳ ಖರೀದಿಯಲ್ಲಿ ನಿಯಮ ಪಾಲನೆ ಮಾಡದಿರುವುದು ಕಂಡುಬಂದಿದ್ದು, ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.  ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಹಾಗೂ ಸರ್ಕಾರಿ ಕಾರ್ಯಕ್ರಮವನ್ನು ಜನರಿಗೆ ತಲುಪಿಸಲು ವಿಫಲರಾಗಿರುವ ಕಾರಣಕ್ಕೆ ಪಿಡಿಓ ಗಂಗಪ್ಪ ಮುದುಕಪ್ಪ ಅವರನ್ನು ನ. ೧೧ ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಅಲ್ಲದೆ ಗ್ರಾಮ ಪಂಚಾಯತಿಯ ಹೊರಗುತ್ತಿಗೆ ಸಿಬ್ಬಂದಿ ತಾಂತ್ರಿಕ ಸಹಾಯಕ ಸಂತೋಷ್‌ಕುಮಾರ್ ಪಾಟೀಲ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.  ಉದ್ಯೋಗಖಾತ್ರಿ ಯೋಜನೆಯಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ೧೦ ಕೋಟಿಗೂ ಹೆಚ್ಚು ಹಣ ಪಾವತಿಗೆ ಕಾರಣರಾಗಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ವಿಫಲರಾದ ಕಾರಣಕ್ಕೆ ಗಂಗಾವತಿ ತಾಲೂಕಾ ಪಂಚಾಯತಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಾಂತ್ರಿಕ ಸಂಯೋಜಕ ಇಜಾಜ್‌ಖಾನ್ ಅಲ್ಲದೆ ತಾಲೂಕಾ ಎಂಐಎಸ್ ಸಂಯೋಜಕ ಹಫೀಸ್ ಅಲಂ ಅವರನ್ನು ಸೇವೆಯಿಂದ ವಜಾಗೊಳಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಆದೇಶ ಹೊರಡಿಸಿದ್ದಾರೆ.

Leave a Reply

Top