ವಿವೇಕಾನಂದರ ಸಂದೇಶಗಳಲ್ಲಿ ಆತ್ಮವಿಶ್ವಾಸದ ಸ್ಫೂರ್ತಿಯ ಸೆಲೆಯಿದೆ- ಚೈತನ್ಯಾನಂದ ಸ್ವಾಮೀಜಿ

ಕೊಪ್ಪಳ ಜ. ೧೨ (ಕ ವಾ) ಸ್ವಾಮಿ ವಿವೇಕಾನಂದರ ಸಂದೇಶಗಳು ಆತ್ಮವಿಶ್ವಾಸದ ಚಿಲುಮೆಗಳಾಗಿವೆ ಎಂದು ಕೊಪ್ಪಳದ ರಾಮಕೃಷ್ಣ ವಿವೇಕಾನಂದ ಆಶ್ರಮದ ಚೈತನ್ಯಾನಂದ ಸ್ವಾಜೀಜಿಗಳು ಹೇಳಿದರು.
     ಜಿಲ್ಲಾಡಳಿತದ ವತಿಯಿಂದ ಸ್ವಾಮಿ ವಿವೇಕಾನಂದರ ೧೫೩ ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
       ಸ್ವಾಮಿ ವಿವೇಕಾನಂದರನ್ನು ನೆನಪಿಸುವ ಕಾರ್ಯ ಕೇವಲ ಜಯಂತಿ ಆಚರಣೆಗಷ್ಟೇ ಸೀಮಿತವಾಗಬಾರದು.  ಅವರ ಚಿಂತನೆಗಳು, ಬೋಧನೆಗಳನ್ನು ಅಧ್ಯಯನ ಮಾಡಿದಾಗ ಮಾತ್ರ ವಿವೇಕಾನಂದರ ಲೌಕಿಕ ಜ್ಞಾನದ ಅರಿವು ಪಡೆಯಲು ಸಾಧ್ಯವಾಗಲಿದೆ.  ಫ್ರೆಂಚ್ ತತ್ವಜ್ಞಾನಿಯೊಬ್ಬರು ಭಾರತದ ಬಗ್ಗೆ ಅರ್ಥಮಾಡಿಕೊಳ್ಳಲು ಯಾವ ಪುಸ್ತಕವನ್ನು ನಾನು ಅಧ್ಯಯನ ಮಾಡಬೇಕು ಎಂದು ರವೀಂದ್ರನಾಥ ಟ್ಯಾಗೋರ್ ಅವರನ್ನು ಕೇಳಿದಾಗ, ಸ್ವಾಮಿ ವಿವೇಕಾನಂದರ ಬಗ್ಗೆ ನೀವು ಅಧ್ಯಯನ ಮಾಡಿ ಸಾಕು ಎಂದು ಹೇಳಿದ್ದನ್ನು ಚೈತನ್ಯಾನಂದ ಸ್ವಾಮಿಗಳು ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.  ಸ್ವಾಮಿ ವಿವೇಕಾನಂದರ ಬೋಧನೆಗಳು ಆತ್ಮವಿಶ್ವಾಸ ಹೆಚ್ಚಿಸುವ ಚಿಲುಮೆಗಳಾಗಿವೆ.  ಈಗ ಆಚರಿಸಲಾಗುತ್ತಿರುವ ರಾಷ್ಟ್ರೀಯ ಯುವ ಸಪ್ತಾಹದಲ್ಲಿ ವಿದ್ಯಾರ್ಥಿಗಳು ವಿವೇಕಾನಂದರ ಕುರಿತು ಅಧ್ಯಯನ ನಡೆಸುವುದು, ಅವರನ್ನು ಗೌರವಿಸಿದಂತೆ.  ಇಚ್ಛಾಶಕ್ತಿ, ಕ್ರಿಯಾ ಶಕ್ತಿ ಹಾಗೂ ಜ್ಞಾನ ಶಕ್ತಿ ಪಡೆಯಬೇಕೆಂದರೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.  ಉತ್ತಮ ಆಲೋಚನೆಗಳು ನಮ್ಮಲ್ಲಿ ಧನಾತ್ಮಕ ಅಂಶಗಳನ್ನು ಸೃಷ್ಟಿಸುತ್ತವೆ ಎಂದು ಸ್ವಾಮಿ ವಿವೇಕಾನಂದರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಚೈತನ್ಯಾನಂದ ಸ್ವಾಮಿಗಳು ಹೇಳಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರ, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಯುವ ಜನತೆಯ ಮೇಲೆ ಸ್ಪೂರ್ತಿಯ ನೆಲೆಯಾಗುವಂತೆ ಮಾಡುವ ಸದುದ್ದೇಶದಿಂದ ಈ ಬಾರಿ ಜಿಲ್ಲಾಡಳಿತದ ವತಿಯಿಂದ ಸ್ವಾಮಿ ವಿವೇಕಾನಂದರ ೧೫೩ ನೇ ಜನ್ಮ ದಿನಾಚರಣೆಯನ್ನು ಯುವ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ.  ಈಗಿನ ಯುವಕರು, ಮೊಬೈಲ್ ಬಳಕೆಯಲ್ಲೆ ಸಮಯ ವ್ಯರ್ಥ ಮಾಡುವುದು ಕಂಡುಬರುತ್ತದೆ.  ವಿವೇಕಾನಂದರಂತಹ ಮಹನೀಯರ ಬೋಧನೆಗಳು, ಚಿಂತನೆಗಳನ್ನು ಅಧ್ಯಯನ ಮಾಡಿದಾಗ ಮಾತ್ರ, ಜ್ಞಾನ ವೃದ್ಧಿಯಾಗುವುದಲ್ಲದೆ, ಆತ್ಮವಿಶ್ವಾಸ ಮೂಡಲು ಸಾಧ್ಯ ಎಂದರು.
    ಜಿಲ್ಲಾ ಪಂಚಾಯತಿ ಮುಖ್ಯ ಕಾಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಮ್ಮ ವಿದ್ಯಾರ್ಥಿ ದೆಸೆಯನ್ನು ಮೆಲುಕು ಹಾಕುತ್ತಾ, ತಾವು ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ವಿವೇಕಾನಂದರು ನೀಡಿರುವ, ಏಳಿ ಎದ್ದೇಳಿ, ಗುರಿ ತಲುಪುವ ತನಕ ನಿಲ್ಲದಿರಿ ಎನ್ನುವ ಸಂದೇಶ ತಮಗೆ ಸ್ಫೂರ್ತಿಯನ್ನು ನೀಡಿತು.  ಸೋಲಿನಿಂದ ಹತಾಶರಾಗದೆ, ಗೆಲುವು ಸಾಧಿಸುವ ತನಕ ವಿರಮಿಸಬಾರದು.  ಕೊಪ್ಪಳ ಜಿಲ್ಲೆಯನ್ನು ರೆಡ್ ಕೊಪ್ಪಳ ಮತ್ತು ಗ್ರೀನ್ ಕೊಪ್ಪಳ ಮಾಡುವ ಕನಸನ್ನು ಹೊಂದಿದ್ದೇನೆ.  ರಕ್ತದಾನದಲ್ಲಿ ಕೊಪ್ಪಳ ಜಿಲ್ಲೆ ಮೂರನೆ
ಸ್ಥಾನದಲ್ಲಿದ್ದು, ಇಂದಿನ ದಿನಮಾನಗಳಲ್ಲಿ ರಕ್ತ ದಾನ ಶ್ರೇಷ್ಠ ದಾನವಾಗಿದೆ.  ಕೊಪ್ಪಳ
ಜಿಲ್ಲೆಯನ್ನು ಮೊದಲನೆ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ನನ್ನ ಗುರಿಯಾಗಿದೆ.  ಅದೇ
ರೀತಿ ಕೊಪ್ಪಳ ಜಿಲ್ಲೆಯನ್ನು ಹಸಿರಾಗಿಸಲು, ಎಲ್ಲ ಶಾಲೆ, ಕಾಲೇಜು, ಹಾಸ್ಟೆಲ್‌ಗಳು ಹಾಗೂ
ಸರ್ಕಾರಿ ಕಟ್ಟಡಗಳ ಸುತ್ತ ಉತ್ತಮ ಗಿಡಗಳನ್ನು ನೆಟ್ಟು, ಪರಿಸರ ಸ್ನೇಹಿಯಾಗಿಸುವ
ಕನಸನ್ನು ಹೊಂದಿದ್ದೇನೆ.  ಇದರ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಟಿ., ಗಣ್ಯರಾದ ಶಿವಾನಂದ ಹೊದ್ಲೂರ ಉಪಸ್ಥಿತರಿದ್ದರು.  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಸ್ವಾಗತಿಸಿದರು.  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಶಾರದಾ ನಿಂಬರಗಿ ವಂದಿಸಿದರು.  ಪ್ರಕಾಶಗೌಡ ಕಾರ್ಯಕ್ರಮ ನಿರೂಪಿಸಿದರು.  ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಹೊಂದಿರುವ ಬ್ಯಾಂಡ್‌ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

Please follow and like us:
error