You are here
Home > Koppal News > ಕೆ‌ಎಸ್‌ಎಸ್‌ಎಂ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದ ಬಂಟ್ಸ್ ದುಬೈ

ಕೆ‌ಎಸ್‌ಎಸ್‌ಎಂ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದ ಬಂಟ್ಸ್ ದುಬೈ

ದಿವಂಗತ ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಅಬುಧಾಬಿ ಕರ್ನಾಟಕ ಸಂಘ ಇದರ ಮುಂದಾಳತ್ವದಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಬಂಟ್ಸ್ ದುಬೈ ತನ್ನ ಪಾರಮ್ಯವನ್ನು ಮೆರೆಯುವ ಮೂಲಕ ಎರಡೂ ವಿಭಾಗಗಳ ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಡಿತು.

ಅಬುಧಾಬಿ ಇಂಡಿಯನ್ ಸ್ಕೂಲ್ ಆವರಣದಲ್ಲಿ ನಡೆದ ಈ ಪಂದ್ಯಾವಳಿಯನ್ನು ಖ್ಯಾತ ಉದ್ಯಮಿ, ಕನ್ನಡಪರ ಸಂಘಟನೆಗಳ ಮಹಾಪೋಷಕ ಪದ್ಮಶ್ರೀ ಡಾ. ಬಿ ಆರ್ ಶೆಟ್ಟಿ ಹಾಗೂ ಡಾ. ಶ್ರೀಮತಿ ಚಂದ್ರಕುಮಾರಿ ಬಿ ಆರ್ ಶೆಟ್ಟಿ ದಂಪತಿಗಳು ಉದ್ಘಾಟಿಸಿದರು. ಅಬುಧಾಬಿ ಕರ್ನಾಟಕ ಸಂಘ, ಕೆಸಿಒ ಅಬುಧಾಬಿ, ಬಂಟ್ಸ್ ದುಬೈ, ಕೊಂಕಣ್ಸ್ ದುಬೈ, ಮೊಗವೀರ್ಸ್ ಯುಎಯಿ, ಮ್ಯಾಂಗಲೋರ್ ಕೊಂಕಣ್ಸ್ ದುಬೈ, ಎಸ್‌ಎಂಎಂಕೆಸಿ ಶಾರ್ಜಾ ಹಾಗೂ ಕೆನರಾ ಕಥೋಲಿಕ್ಸ್ ಫುಜೈರಾ ಇದರ ಪುರುಷರ ಮತ್ತು ಮಹಿಳೆಯರ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಪ್ರತಿಷ್ಟಿತ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಟ್ರೋಫಿ ಬಂಟ್ಸ್ ದುಬೈ ಇದರ ಪಾಲಾಯಿತು. 
ರೋಚಕ ಹಣಾಹಣಿಯಲ್ಲಿ ಬಂಟ್ಸ್ ದುಬೈ ಹಾಗೂ ಕೊಂಕಣ್ಸ್ ದುಬೈ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ, ಸಮಬಲದ ಹೋರಾಟ ನೀಡಿತಾದರೂ ಅಂತಿಮವಾಗಿ ಬಂಟ್ಸ್ ದುಬೈ, ಕೊಂಕಣ್ಸ್ ದುಬೈ ಮೇಲೆ ತನ್ನ  ಹಿಡಿತವನ್ನು ಸಾಧಿಸಿ ಗೆಲುವಿನ ನಗೆ ಬೀರಿತು. ಮಹಿಳೆಯರ ವಿಭಾಗದಲ್ಲಿ ಬಂಟ್ಸ್ ದುಬೈ ಅಬುಧಾಬಿ ಕರ್ನಾಟಕ ಸಂಘವನ್ನು 2-0ಯ ಅಂತರದಲ್ಲಿ ಸೋಲಿಸುವ ಮೂಲಕ 24ನೇ ವರ್ಷದ ಕೆ‌ಎಸ್‌ಎಸ್‌ಎಂ ಟ್ರೋಫಿಯ ಗೌರವಕ್ಕೆ ಪಾತ್ರವಾಯಿತು.
ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಡಾ. ಬಿ ಆರ್ ಶೆಟ್ಟಿ ದಂಪತಿಗಳ ಸಹಿತ ಬಿನಯ್ ಬಿ ಆರ್ ಶೆಟ್ಟಿ, ಡ್ಯೂಕ್ ಆಂಡ್ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯ ಸದಸ್ಯೆ ನಂದಿನಿ ಟಂಡನ್, ಬಿ ಆರ್ ಸ್ಕೂಲ್ಸ್ ಇದರ ಆಡಳಿತಾಧಿಕಾರಿ ಡಾ. ವಿದ್ಯಾ ಶೆಟ್ಟಿ, ಬಿ ಆರ್ ಸ್ಕೂಲ್ ಇದರ ಪ್ರಾಂಶುಪಾಲೆ ಡಾ. ರಿಶಿ, ಎ‌ಐಡಿಎಸ್ ಇದರ ಮುಖ್ಯಸ್ಥ ವಿಜಯಚಂದ್ರ, ಎಡಿಐಎಸ್ ಇದರ ಸಲಹೆದಾರರಾದ ವಿ ಕೆ ಮಾತು, ಎಐಡಿಎಸ್ ಇದರ ಸಹಾಯಕ ಪ್ರಾಂಶುಪಾಲ ರವೀಂದ್ರನಾಥ್, ಕೆಸಿಒ ಸಂಘದ ಅಧ್ಯಕ್ಷ ವಲೇರಿಯನ್ ಡಿ ಅಲ್ಮೇಡಾ, ಯುಎಯಿ ಎಕ್ಸ್‌ಚೇಂಜ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಉದ್ಯಮಿ ರೊನಾಲ್ಡ್ ಪಿಂಟೊ, ಸೀಮಾ ನಿರ್ಮನ್ ಮುಂತಾದವರು ಹಾಜರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಡಾ. ಬಿ ಆರ್ ಶೆಟ್ಟಿ ಅವರು ವಿಜೇತ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಸಂಗೀತಾ ಶೆಟ್ಟಿ-ಅಬುಧಾಬಿ ಕರ್ನಾಟಕ ಸಂಘ, ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿ ನೀತು ಶೆಟ್ಟಿ ಬಂಟ್ಸ್ ದುಬೈ ತಂಡ ಹಾಗೂ ಉತ್ತಮ ಆಟಗಾರ ಪ್ರಶಸ್ತಿ ಬಂಟ್ಸ್ ದುಬೈ ತಂಡದ ಸಂಗೀತಾ ಶೆಟ್ಟಿ ಪಾಲಾದರೆ ಪುರುಷರ ವಿಭಾಗದಲ್ಲಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಜೋನ್‌ಸನ್ -ಕೊಂಕಣ್ಸ್ ದುಬೈ, ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿ ಕಿಶೋರ್ ಶೆಟ್ಟಿ ಬಂಟ್ಸ್ ದುಬೈ ತಂಡ ಹಾಗೂ ಉತ್ತಮ ಆಟಗಾರ ಪ್ರಶಸ್ತಿ ಬಂಟ್ಸ್ ದುಬೈ ತಂಡದ ರಂಜಿತ್ ಶೆಟ್ಟಿ ಸ್ವೀಕರಿಸಿದರು.
ಇದರ ಜೊತೆಗೆ ಕಳೆದ ಹಲವಾರು ವರ್ಷಗಳಿಂದ ಯುಎಯಿಯ ವಿವಿಧ ಸಂಘಟನೆಗಳ ಸದಸ್ಯರಾಗಿ, ಹಲವಾರು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವೇ ಮುಡಿಪಾಗಿಸಿ ಇದೀಗ ತಮ್ಮ ನಿವ್ರತ್ತಿ ಜೀವನದ ಪ್ರಯುಕ್ತ ಸ್ವದೇಶಕ್ಕೆ ಮರಳುತ್ತಿರುವ ಓಜ್ವಾಲ್ಡ್ ದಂಪತಿಗಳನ್ನು ಹಾಗೂ ಅಲ್ಫೋನ್ಸ್ ಅವರನ್ನು ಅಬುಧಾಬಿ ಕರ್ನಾಟಕ ಸಂಘದ ಪರವಾಗಿ ಗೌರವಿಸಲಾಯಿತು. ಪಂದ್ಯಾವಳಿಯ ತೀರ್ಪುಗಾರರಾಗಿದ್ದ ಸತೀಶ್ ಶೆಟ್ಟಿ, ಜಯಪಾಲ್ ರಾಜ್, ಡಾ. ಡೇ, ಶ್ರೀಮತಿ ಆನೆಟ್ ಹಾಗೂ ಶ್ರೀಮತಿ ಜೆಸಿಂತಾ ಅವರನ್ನು ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.
 ಶ್ರೀಮತಿ ಚಂದ್ರಕುಮಾರಿ ಬಿ ಆರ್ ಶೆಟ್ಟಿ, ಅರಬ್ ಉಡುಪಿ ಸಂಸ್ಥೆಯ ನಿರ್ದೇಶಕ ಶೇಖರ್ ಶೆಟ್ಟಿ, ರೊನಾಲ್ಡ್ ಪಿಂಟೊ, ಇನ್‌ಲ್ಯಾಂಡ್ ಸಮೂಹ ಸಂಸ್ಥೆಗಳ ನಿರ್ದೇಶಕ ಸಿರಾಜ್ ಅಹ್ಮದ್, ಸುಧೀರ್ ಕುಮಾರ್ ಶೆಟ್ಟಿ, ಸುಜತ್ ಶೆಟ್ಟಿ ಸಹಿತ ಹಲವಾರು ಗಣ್ಯರು ಹಾಗೂ ನೂರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು, ವಿಜೇತರನ್ನು ಅಭಿನಂದಿಸಿದರು.
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸರ್ವೋತ್ತಮ ಶೆಟ್ಟಿ ಅವರ ಸಾರಥ್ಯದಲ್ಲಿ ಸಂಘದ ಸದಸ್ಯರು ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದರು

Leave a Reply

Top