You are here
Home > Koppal News > ತ್ಯಾಜ್ಯ ಮುಕ್ತ ಜಿಲ್ಲೆ ನಿರ್ಮಾಣ ಯೋಜನೆಗಳಿಗೆ ಕೊಪ್ಪಳ ಪ್ರಯೋಗ ಶಾಲೆ

ತ್ಯಾಜ್ಯ ಮುಕ್ತ ಜಿಲ್ಲೆ ನಿರ್ಮಾಣ ಯೋಜನೆಗಳಿಗೆ ಕೊಪ್ಪಳ ಪ್ರಯೋಗ ಶಾಲೆ

ಗ್ರಾಮೀಣ ಪ್ರದೇಶಗಳ ಬಹುಮುಖ್ಯ ಸಮಸ್ಯೆಯಾಗಿರುವ ತ್ಯಾಜ್ಯ ವಿಲೇವಾರಿ ಸೇರಿದಂತೆ ತ್ಯಾಜ್ಯ, ವ್ಯಾಜ್ಯ ಮತ್ತು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆ ನಿರ್ಮಾಣ ಮಾಡುವಂತಹ ಯೋಜನೆಗಳಿಗೆ ಕೊಪ್ಪಳ ಜಿಲ್ಲೆ ಪ್ರಯೋಗಶಾಲೆಯಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ರಾಜೀವ್‌ಗಾಂಧಿ ಚೈತನ್ಯ ಯೋಜನೆ ಅಭ್ಯರ್ಥಿಗಳಿಗೆ ಜಿಲ್ಲಾ ಮಟ್ಟದ ಉದ್ಯೋಗಮೇಳ, ಹುಲಿಗಿಯ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, ಘನತ್ಯಾಜ್ಯ ವಿಲೇವಾರಿ ಕೇಂದ್ರ ಪ್ರಾರಂಭ, ೭೫೦೦೧ ನೇ ಶೌಚಾಲಯ ಉದ್ಘಾಟನೆ, ೨೮ ಗ್ರಾಮಗಳ ಘನತ್ಯಾಜ್ಯದಿಂದ ಜೈವಿಕ ಗೊಬ್ಬರ ತಂತ್ರಜ್ಞಾನ ಬಳಕೆ ಹಾಗೂ ೨೦೧೩-೧೪ ನೇ ಸಾಲಿನಲ್ಲಿ ಅತಿಹೆಚ್ಚು ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸಿದವರಿಗೆ ಸನ್ಮಾನ ಸಮಾರಂಭದ ಉದ್ಘಾಟನ ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ಗ್ರಾಮಗಳ ಪ್ರವೇಶವಾದರೆ, ನಮ್ಮನ್ನು ಸ್ವಾಗತಿಸುವುದು ಹಾಗೂ ಹಳ್ಳಿಗಳಲ್ಲಿ ಪರಿಹಾರ ಇಲ್ಲದ ಸಮಸ್ಯೆಗಳೆಂದರೆ ತಿಪ್ಪೆಗುಂಡಿಗಳು, ಇದು ಹೆಚ್ಚಿನ ಸ್ಥಳವನ್ನು ಆಕ್ರಮಿಸುವುದಲ್ಲದೆ ದುರ್ವಾಸನೆ, ರೋಗ ರುಜಿನ ಹಾಗೂ ವ್ಯಾಜ್ಯಗಳಿಗೂ ಕಾರಣವಾಗುತ್ತವೆ.  ಅದೇ ರೀತಿ ಗ್ರಾಮೀಣ ಪ್ರದೇಶದ ಮಹಿಳೆಯರು ಶೌಚಕ್ಕೆ ಹೋಗಲು ಸಂಜೆಯಾಗುವವರೆಗೂ ಕಾಯ್ದು, ನಂತರ ರಸ್ತೆಯ ಅಕ್ಕಪಕ್ಕದಲ್ಲೇ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ.  ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸುವುದು ಗ್ರಾಮೀಣಾಭಿವೃದ್ಧಿ ಪರಿಕಲ್ಪನೆಯ ಮೊದಲ ಆದ್ಯತೆಯಾಗಿದೆ.  ವ್ಯಾಜ್ಯ, ತ್ಯಾಜ್ಯ, ವ್ಯಸನ ಮತ್ತು ಬಯಲು ಮಲವಿಸರ್ಜನೆ ಮುಕ್ತ ಗ್ರಾಮಗಳು ನಿರ್ಮಾಣವಾಗಬೇಕು ಎನ್ನುವುದು ಸರ್ಕಾರದ ಸಂಕಲ್ಪವಾಗಿದೆ.  ಕಳೆದ ವರ್ಷ ೧ ಲಕ್ಷ ಶೌಚಾಲಯ ನಿರ್ಮಾಣ ಮಾಡಬೇಕು ಎನ್ನುವ ಗುರಿಯನ್ನು ಹಾಕಿಕೊಂಡು, ಈಗಾಗಲೆ ೭೫೦೦೧ ನೇ ಶೌಚಾಲಯವನ್ನು ಹುಲಿಗಿಯಲ್ಲಿಯೇ ಉದ್ಘಾಟನೆ ಮಾಡಲಾಗಿದೆ.  ಶೌಚಾಲಯ ನಿರ್ಮಾಣದಲ್ಲಿ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ ಇಡೀ ದೇಶಕ್ಕೆ ಕೊಪ್ಪಳ ಜಿಲ್ಲೆ ಮೊದಲ ಸ್ಥಾನದಲ್ಲಿದೆ.  ೧ ಲಕ್ಷದ ೧ ನೇ ಶೌಚಾಲಯವನ್ನು ರಾಜ್ಯದ ಮುಖ್ಯಮಂತ್ರಿಗಳಿಂದಲೇ ಜಿಲ್ಲೆಯಲ್ಲಿ ಉದ್ಘಾಟಿಸಲಾಗುವುದು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿನ ತಿಪ್ಪೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಮೂಲಕ ಅತ್ಯಲ್ಪ ಅವಧಿಯಲ್ಲಿ ಜೈವಿಕ ಗೊಬ್ಬರ ತಯಾರಿಸಿ, ತಿಪ್ಪೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ಪ್ರಯೋಗ ಮಾಡಲಾಗಿದೆ.  ಇದರಿಂದಾಗಿ ವ್ಯಾಜ್ಯ, ತ್ಯಾಜ್ಯ ಮತ್ತು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆ ನಿರ್ಮಾಣ ಮಾಡುವ ಯೋಜನೆಗಳಿಗೆ ಕೊಪ್ಪಳ ಜಿಲ್ಲೆ ಪ್ರಯೋಗಶಾಲೆಯಾಗಿದೆ.  ಜೈವಿಕ ಗೊಬ್ಬರದ ಯಶಸ್ಸನ್ನು ಆಧರಿಸಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಅಷ್ಟೇ ಅಲ್ಲ ರಾಜ್ಯದ ಎಲ್ಲ ಗ್ರಾಮಗಳಿಗೂ ವಿಸ್ತರಿಸಲು ಯೋಜನೆ ರೂಪಿಸಲಾಗುವುದು.  ಅಲ್ಲದೆ ಇದನ್ನು ಹಿಟ್ನಾಳ್ ಮಾದರಿಯೆಂದೇ ಕರೆಯಲಾಗುವುದು.  ಗ್ರಾಮ ಪಂಚಾಯತಿ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಈ ವರ್ಷ ಕೊಪ್ಪಳ ಜಿಲ್ಲೆಯ ೫೦ ಗ್ರಾ.ಪಂ. ಗಳಿಗೆ ಟ್ರ್ಯಾಕ್ಟರ್ ಮಂಜೂರು ಮಾಡಲಾಗುವುದು.  ಉಳಿದ ಗ್ರಾಮಗಳಿಗೆ ಹಂತ ಹಂತವಾಗಿ ಮಂಜೂರು ಮಾಡಲಾಗುವುದು.  ಹಳ್ಳಿಗಳಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿರುವ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭಿನಂದನೆಗೆ ಅರ್ಹರು ಎಂದು ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.
೧೫೧೦ ಜನರಿಗೆ ಉದ್ಯೋಗ : ಗ್ರಾಮೀಣ ಯುವಕರು ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಜಾರಿಗೆ ತರಲಾಗಿರುವ ರಾಜೀವ್ ಗಾಂಧಿ ಚೈತನ್ಯ ಯೋಜನೆ ಯೋಜನೆಯಡಿ ಹುಲಿಗಿಯಲ್ಲಿ ಬೃಹತ್ ಉದ್ಯೋಗ ಮೇಳ ಈ ಬಾರಿ ಆಯೋಜಿಸಿದ್ದು, ಇದರಲ್ಲಿ ಜಿಲ್ಲೆಯ ೨೦೭೬ ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಈ ಪೈಕಿ ಮೇಳದಲ್ಲಿ ೧೫೧೦ ಜನರಿಗೆ ವಿವಿಧ ಕಂಪನಿಗಳಿಂದ ಉದ್ಯೋಗ ಪತ್ರ ನೀಡಲಾಗುತ್ತಿದೆ.  ಕುಷ್ಟಗಿ ತಾಲೂಕಿನ ೪೭೨, ಯಲಬುರ್ಗಾ- ೩೯೮, ಕೊಪ್ಪಳ-೩೫೬, ಗಂಗಾವತಿ-೨೮೪ ಯುವಕ, ಯುವತಿಯರಿಗೆ ಉದ್ಯೋಗ ಪತ್ರ ನೀಡಲಾಗಿದೆ.  ಉದ್ಯೋಗಮೇಳದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗ ಪತ್ರ ನೀಡುತ್ತಿರುವುದು ರಾಜೀವ್‌ಗಾಂಧಿ ಚೈತನ್ಯ ಯೋಜನೆಯ ಹೆಗ್ಗಳಿಕೆಯಾಗಿದೆ.  ಗ್ರಾಮಗಳು ಕೇವಲ ರಸ್ತೆ, ಚರಂಡಿ ನಿಮಾಣ ಆದರೆ ಅಭಿವೃದ್ಧಿ ಆದಂತೆ ಅಲ್ಲ.  ಅಲ್ಲಿನ ಯುವಕರಿಗೆ ಉದ್ಯೋಗ ದೊರೆತು ಸ್ವಾವಲಂಬಿಗಳಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಆದಂತೆ.  ಯೋಜನೆಯಡಿ ರಾಜ್ಯದಲ್ಲಿ ೨ ಲಕ್ಷಕ್ಕೂ ಹೆಚ್ಚು ಯುವಕರನ್ನು ನೋಂದಣಿ ಮಾಡಿಸಲಾಗಿದ್ದು, ಎಲ್ಲರಿಗೂ ಉದ್ಯೋಗ ದೊರಕಿಸುವ ಗುರಿ ಹೊಂದಲಾಗಿದೆ ಎಂದರು.
೩೦೦೦ ಶುದ್ಧ ನೀರಿನ ಘಟಕ : ಈ ಮೊದಲು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಪರಿಕಲ್ಪನೆ ಇರಲಿಲ್ಲ.  ಕೇವಲ ಶ್ರೀಮಂತರು ಅಷ್ಟೇ ಶುದ್ಧ ಕುಡಿಯುವ ನೀರು ಬಳಸುವ ಸ್ಥಿತಿ ಇತ್ತು.  ನಮ್ಮ ದೇಶದಲ್ಲಿ ಅಶುದ್ಧ ನೀರಿನಿಂದ ಪ್ರತಿ ೨೦ ಸೆಕೆಂಡಿಗೆ ಒಂದು ಮಗು ಮರಣ ಹೊಂದುತ್ತಿದೆ.  ಆದರೆ ನಮ್ಮ ಸರ್ಕಾರ ಅಶುದ್ಧ ನೀರು ಲಭ್ಯವಾಗುತ್ತಿರುವ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸಿ, ಬಡ ಜನರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ, ರಾಜ್ಯದಲ್ಲಿ ಈ ಬಾರಿ ೩೦೦೦ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿದೆ ಎಂದು ಸಚಿವರು ಹೇಳಿದರು.
ಸ್ನಾನಗೃಹ ಸಹಿತ ಶೌಚಾಲಯ : ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಮಹಿಳೆಯರು ಇಂದಿಗೂ ಸ್ನಾನಕ್ಕೆ ತೊಂದರೆ ಅನುಭವಿಸುವ ಸ್ಥಿತಿ ಇದೆ.  ಇದನ್ನು ಮನಗಂಡಿರುವ ಸರ್ಕಾರ ರಾಜ್ಯದಲ್ಲಿ ಈ ವರ್ಷ ೧. ೫೦ ಲಕ್ಷ ಸ್ನಾನಗೃಹ ಸಹಿತ ಶೌಚಾಲಯ ನಿರ್ಮಾಣದ ಯೋಜನೆ ರೂಪಿಸಿದ್ದು, ಪ್ರತಿ ಘಟಕಕ್ಕೆ ೨೦ ಸಾವಿರ ರೂ. ವೆಚ್ಚವಾಗಲಿದೆ ಎಂದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸ್ವಾಗತಿಸಿದರು.  ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಜಿ.ಪಂ. ಸದಸ್ಯರುಗಳಾದ ಜನಾರ್ಧನ ಹುಲಿಗಿ, ಅಶೋಕ್ ತೋಟದ, ಈರಪ್ಪ ಕುಡಗುಂಟಿ, ಗಂಗಣ್ಣ ಸಮಗಂಡಿ, ರಮೇಶ್ ಹಿಟ್ನಾಳ್, ವಿಜಯಲಕ್ಷ್ಮಿ ರಾಮಕೃಷ್ಣ, ವನಿತಾ ಗಡಾದ, ಅರವಿಂದಗೌಡ ಪಾಟೀಲ, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ತಾ.ಪಂ. ಗಳ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು.
  ೨೦೧೩-೧೪ ನೇ ಸಾಲಿನಲ್ಲಿ ಅತಿ ಹೆಚ್ಚು ಶೌಚಾಲಯ ನಿರ್ಮಿಸಲು ಪ್ರೋತ್ಸಾಹಿಸಿದ ೨೯ ಜನ ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಗಳಿಗೆ ಸಚಿವರು ಸನ್ಮಾನಿಸಿದರು.  ಅಲ್ಲದೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ವಿವಿಧ ಕಂಪನಿಗಳಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವರು ಉದ್ಯೋಗ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.  ಸಮಾರಂಭಕ್ಕೂ ಪೂರ್ವದಲ್ಲಿ ಹಿಟ್ನಾಳ್ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಹೆಚ್.ಕೆ. ಪಾಟೀಲ್ ಅವರು, ತಿಪ್ಪೆ ಗೊಬ್ಬರಗಳನ್ನು ಮಾಧ್ಯಮ ಪುಡಿಯಿಂದ ಜೈವಿಕ ಗೊಬ್ಬರವನ್ನಾಗಿಸುವ ಕುರಿತು ಪ್ರಾತ್ಯಕ್ಷಿಕೆ ವೀಕ್ಷಿಸಿದರು.  ಅಲ್ಲದೆ ಹೊಸಳ್ಳಿ ಗ್ರಾಮದ ಹೊರವಲಯದಲ್ಲಿ ಗ್ರಾಮೀಣ ತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆ ನೆರವೇರಿಸಿದರು.

Leave a Reply

Top