fbpx

ಆಕಾಶವಾಣಿ ಫೋನ್-ಇನ್ ಮೂಲಕ ಮತದಾರರಿಗೆ ಜಾಗೃತಿ : ಉತ್ತಮ ಸ್ಪಂದನೆ

ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದಡಿ  ಮಂಗಳವಾರದಂದು ಹೊಸಪೇಟೆ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ’ಮತದಾನದ ಮಹತ್ವ’ ನೇರ ಫೋನ್-ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

  ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಹಾಗೂ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಹೊಸಪೇಟೆ ಎಫ್.ಎಮ್. ಕೇಂದ್ರದಿಂದ ಏರ್ಪಡಿಸಲಾದ ಮತದಾನದ ಮಹತ್ವ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಳುಗರಿಗೆ ಮತದಾನದ ಮಹತ್ವ ಹಾಗೂ ಮತದಾನಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.  ಈ ಕಾರ್ಯಕ್ರಮದಲ್ಲಿ  ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ, ಕೊಪ್ಪಳ, ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರು ದೂರವಾಣಿ ಕರೆ ಮೂಲಕ ಮತದಾನಕ್ಕೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡರು.  ಕೇವಲ ಕೊಪ್ಪಳ ಜಿಲ್ಲೆಯ ಶ್ರೋತೃಗಳಷ್ಟೇ ಅಲ್ಲದೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ರಾಮಸಾಗರ, ಕಂಪ್ಲಿ, ಕಡ್ಡಿರಾಂಪುರ, ಕುರುಗೋಡು ಮುಂತಾದೆಡೆಗಳಿಂದ ಕೇಳುಗರು, ಮತದಾನಕ್ಕೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡರು.  ಬಹುತೇಕ ಕೇಳುಗರು ಮತದಾನಕ್ಕೆ ಅಗತ್ಯವಿರುವ ದಾಖಲೆಗಳು, ಗುರುತಿನ ಚೀಟಿ, ಮತದಾನ ಪ್ರಕ್ರಿಯೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳಿ, ಸಮರ್ಪಕ ಮಾಹಿತಿ ಪಡೆದುಕೊಂಡರು.  ಕಾರ್ಯಕ್ರಮದ ಕೊನೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ತಮ್ಮ ಮತ ಚಲಾಯಿಸಬೇಕು. ಹಣ, ಹೆಂಡದ ಆಸೆಗೆ ತಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡದೆ, ಸೂಕ್ತ ಅಭ್ಯರ್ಥಿಗೆ ಯೋಚಿಸಿ ಮತ ನೀಡಿ, ಒಟ್ಟಾರೆ ಕೊಪ್ಪಳ ಲೋಕಸಭಾ ಕ್ಷೇತ್ರದ ಮತದಾನ ಪ್ರಮಾಣ ಅಧಿಕವಾಗುವ ರೀತಿಯಲ್ಲಿ ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮತದಾರರ ಜಾಗೃತಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರಗಳನ್ನು ನೀಡಿ, ಎಲ್ಲ ಮತದಾರರೂ ತಪ್ಪದೆ ಮತದಾನ ಮಾಡಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಮನವಿ ಮಾಡಿದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಮತದಾನದ ಮಹತ್ವದ ಬಗ್ಗೆ ವಿವರಗಳನ್ನು ನೀಡಿದರು.  ಹೊಸಪೇಟೆ ಆಕಾಶವಾಣಿ ಕೇಂದ್ರದ  ಮಂಜುನಾಥ ಡೊಳ್ಳಿನ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.  ಆಕಾಶವಾಣಿ ಕೇಂದ್ರದ ಮುಖ್ಯಸ್ಥ ವೆಂಕಟೇಶ್, ಸೇರಿದಂತೆ ಆಕಾಶವಾಣಿ ಕೇಂದ್ರದ ವಿವಿಧ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ೨೦ಕ್ಕೂ ಹೆಚ್ಚು ಕೇಳುಗರು ದೂರವಾಣಿ ಕರೆ ಮೂಲಕ ಮತದಾನದ ಮಹತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು.
Please follow and like us:
error

Leave a Reply

error: Content is protected !!