ಸರ್ವ ಜನಾಂಗದ ಶಾಂತಿಯ ತೋಟದ ಹೂ ಕೋ.ಚೆ.

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಶ್ರೀರಂಗಪಟ್ಟಣದಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವುದಾಗಿ ಕೇಂದ್ರ ಸಚಿವ ರಹ್ಮಾನ್ ಖಾನ್ ಹೇಳಿಕೆ ನೀಡಿದ ನಂತರ ಕೆಲವೇ ಕೆಲವರಿಗೆ ಚೇಳು ಕಡಿದಂತಾಗಿದೆ. ಚೇಳು ಕಡಿಸಿಕೊಂಡವನು ಬಾಯಿ ಬಾಯಿ ಬಡಿದುಕೊಳ್ಳುವಂತೆ ಈ ಮನೋವಿಕಾರಿಗಳು ಅರಚಾಡುತ್ತಿದ್ದಾರೆ. ಸಾಹಿತಿಯೆಂದು ಕರೆಯಲ್ಪಡುವ ಎಸ್.ಎಲ್.ಭೈರಪ್ಪ, ಸಂಶೋಧನೆಗೆ ಎಂದೋ ಎಳ್ಳುನೀರು ಬಿಟ್ಟ ಚಿದಾನಂದ ಮೂರ್ತಿ ಸೇರಿದಂತೆ ಸಂಘಪರಿವಾರದ ಸ್ವಯಂ ಸೇವಕ ಪಡೆ ಬೊಬ್ಬೆ ಹಾಕತೊಡಗಿದೆ. ಆದರೆ ನಮ್ಮ ನಡುವಿನ ಸಾಕ್ಷಿಪ್ರಜ್ಞೆ ಡಾ.ಯು.ಆರ್.ಅನಂತಮೂರ್ತಿ ‘‘ಟಿಪ್ಪು ವಿ.ವಿ. ಸ್ಥಾಪನೆ ಆಗಲಿ’’ ಎಂದು ಹೇಳಿ ಕರ್ನಾಟಕದ ಸಾರಸ್ವತಲೋಕದ ಭಾವನೆಗಳಿಗೆ ಧ್ವನಿ ನೀಡಿದ್ದಾರೆ. ಟಿಪ್ಪು ವಿ.ವಿ.ಗೆ ಚಿ.ಮೂ. ಪಟಾಲಂ ಅಪಸ್ವರ ತೆಗೆದ ದಿನವೇ ಕನ್ನಡಿಗರ ಬಹುದೊಡ್ಡ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಬಿಜಾಪುರದಲ್ಲಿ ನಡೆಯಲಿರುವ 79ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಹಿರಿಯ ಚೇತನ ಪ್ರಗತಿಶೀಲ ಲೇಖಕ ಕೋ.ಚೆನ್ನಬಸಪ್ಪ ಅವರನ್ನು ಅಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಿ ನಾಡಿನ ಘನತೆ ಗೌರವಗಳನ್ನು ಎತ್ತಿ ಹಿಡಿದಿದೆ. ಕೋ.ಚೆನ್ನಬಸಪ್ಪ ನಮ್ಮ ನಾಡಿನ ಅತ್ಯಂತ ಹಿರಿಯ ಚಿಂತಕರು.
ಅವರ ಸಮಕಾಲೀನರಲ್ಲಿ ಪಾಟೀಲ ಪುಟ್ಟಪ್ಪನವರೊಬ್ಬ ವರನ್ನು ಬಿಟ್ಟರೆ ಬಹುಶಃ ಇನ್ಯಾರೂ ಬದುಕಿಲ್ಲ. ಕೋ.ಚೆ. ಒಡನಾಡಿಗಳಾಗಿದ್ದ ಬಸವರಾಜ ಕಟ್ಟಿಮನಿ, ಬೀಚಿ, ಅನಕೃ, ತರಾಸು ಮುಂತಾದವರು ಈಗ ನಮ್ಮ ನಡುವೆ ಇಲ್ಲ. ಕಥೆ, ಕಾದಂಬರಿ, ವಿಮರ್ಶೆ, ಅನುವಾದ ಹೀಗೆ ಎಲ್ಲ ಅಭಿವ್ಯಕ್ತಿ ಪ್ರಕಾರಗಳಲ್ಲೂ ಸಾಧನೆ ಮಾಡಿರುವ ಕೋ.ಚೆ. ರಾಷ್ಟ್ರಕವಿ ಕುವೆಂಪು ಅವರ ಅತ್ಯಂತ ನಿಕಟವರ್ತಿ. ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಳ್ಳಿಯೊಂದರಲ್ಲಿ ಜನಿಸಿದ ಚೆನ್ನಬಸಪ್ಪ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು.
ವೃತ್ತಿಯಿಂದ ವಕೀಲ ರಾದರೂ ಸಾಹಿತ್ಯದಲ್ಲಿ ಅವರಿಗೆ ವಿಶೇಷ ಒಲವು. ಬಳ್ಳಾರಿ ಪಕ್ಕದ ಆಂಧ್ರದ ಅನಂತಪುರದಲ್ಲಿ ವ್ಯಾಸಂಗ ಮಾಡುವಾಗ ಹಿರಿಯ ಕಮ್ಯುನಿಸ್ಟ್ ನಾಯಕ ನೀಲಂ ರಾಜಶೇಖರ ರೆಡ್ಡಿ ಅವರ ಸಹಪಾಠಿಯಾಗಿದ್ದ ಕೋ.ಚೆ. ಆಗಿನಿಂದಲೂ ಪ್ರಖರ ಎಡಪಂಥೀಯ, ಪ್ರಗತಿಪರ ನಿಲುವನ್ನು ಹೊಂದಿದವರು.ಅರವಿಂದರ, ಮುಹಮದ್ ಇಕ್ಬಾಲರ ಸಾಹಿತ್ಯವನ್ನು ಕನ್ನಡಕ್ಕೆ ತಂದಿರುವ ಕೋ.ಚೆ. ಬರೆದ ‘ಬೇಡಿಕಳಚಿತು’ ಕಾದಂಬರಿ ಸ್ವಾತಂತ್ರ ಚಳವಳಿಯ ಸಮಗ್ರ ಇತಿಹಾಸವನ್ನು ಕಟ್ಟಿಕೊಡುತ್ತದೆ.
ಆ ದಿನಗಳನ್ನು ಕಣ್ಣೆದುರು ತಂದು ನಿಲ್ಲಿಸುತ್ತದೆ. ಆರೆಸ್ಸೆಸ್ ಸ್ವಾತಂತ್ರ ಚಳವಳಿಯಲ್ಲಿ ಹೇಗೆ ದೇಶಕ್ಕೆ ದ್ರೋಹ ಬಗೆಯಿತು ಎಂಬುದನ್ನು ತಿಳಿದುಕೊಳ್ಳಲು ಈ ಕಾದಂಬರಿ ಓದಬೇಕು. ಟಿಪ್ಪು ಸುಲ್ತಾನರ ವಿರುದ್ಧ ಚಿ.ಮೂ. ಗ್ಯಾಂಗು ಮಾಡುತ್ತಿರುವ ಕುಟಿಲ ಅಪಪ್ರಚಾರಕ್ಕೆ ಉತ್ತರವಾಗಿ ಪುಸ್ತಕವೊಂದನ್ನು ಬರೆದಿರುವ ಚೆನ್ನಬಸಪ್ಪ ಮೈಸೂರು ಹುಲಿಯ ಸೌಹಾರ್ದ ವ್ಯಕ್ತಿತ್ವಕ್ಕೆ ಸೂಕ್ತ ಆಧಾರಗಳನ್ನು ಒದಗಿಸಿದ್ದಾರೆ. ‘‘ಗಾಂಧಿ ಹತ್ಯೆ ಮತ್ತು ಗೋಡ್ಸೆ’’ ಎಂಬ ಪುಸ್ತಕದಲ್ಲಿ ರಾಷ್ಟ್ರಪಿತನ ಕೊಲೆಯಲ್ಲಿ ಆರೆಸ್ಸೆಸ್ ಕೈವಾಡವನ್ನು ದಾಖಲೆ ಸಹಿತ ಒದಗಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರಕಾರವಿರುವಾಗ ಇಂಥ ಕೋ.ಚೆನ್ನಬಸಪ್ಪನವರನ್ನು 79ನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಿದ್ದು ನಿಜಕ್ಕೂ ದೊಡ್ಡ ಸಾಧನೆಯೆಂದರೆ ತಪ್ಪಲ್ಲ. ಯಾಕೆಂದರೆ ಸರಕಾರದ ಅನುದಾನದಲ್ಲಿ ಉಸಿರಾಡುವ ಸಾಹಿತ್ಯ ಪರಿಷತ್ತು ಇಂಥ ದಿಟ್ಟ ಹೆಜ್ಜೆ ಇಟ್ಟ ಪ್ರಸಂಗಗಳು ತುಂಬ ಕಡಿಮೆ. ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಗೌರಿಲಂಕೇಶ್ ಮತ್ತು ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ವಿಚಾರಗೋಷ್ಠಿಗೆ ಆಹ್ವಾನಿಸಿದಾಗ ಸಂಘಪರಿವಾರ ಅಪಸ್ವರ ತೆಗೆದಿತ್ತು. ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪ ‘‘ಅವರಿಬ್ಬರನ್ನು ಕರೆಯಬೇಡಿ’’ ಎಂದು ಒತ್ತಡ ಹೇರಿದರು. ಆದರೆ ಆಗಿನ ಕಸಾಪ ಅಧ್ಯಕ್ಷರಾಗಿದ್ದ ಚಂಪಾ ಈ ಒತ್ತಡಕ್ಕೆ ಮಣಿಯಲಿಲ್ಲ.
ಈ ಬಾರಿ ಹಾಲಿ ಕಸಾಪ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಅಂಥದೇ ದಿಟ್ಟ ಹೆಜ್ಜೆ ಇರಿಸಿದ್ದಾರೆ. ಬಿಜಾಪುರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಇತ್ತೀಚೆಗೆ ಚೆಡ್ಡಿ ಧರಿಸಿದ ಚಿದಾನಂದ ಮೂರ್ತಿ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಸರಕಾರದ ಪರೋಕ್ಷ ಒಲವೂ ಆ ಕಡೆಗೆ ಇತ್ತು. ಆದರೆ ಹಾಲಂಬಿ ಮತ್ತು ಅವರ ಸಹೋದ್ಯೋಗಿಗಳು ಇಂಥ ಯಾವುದೇ ಅಸಹ್ಯಕ್ಕೆ ಅವಕಾಶ ನೀಡದೆ, ನಮ್ಮ ನಡುವಿನ ಪ್ರಖರ ಜಾತ್ಯತೀತವಾದಿ, ಪ್ರಗತಿಪರ ಚಿಂತಕ ಕೋ.ಚೆನ್ನಬಸಪ್ಪನವರನ್ನು ಅಧ್ಯಕ್ಷೆತೆಗೆ ಆಯ್ಕೆ ಮಾಡಿದರು.
ನ್ಯಾಯವಾಗಿ ಕಳೆದ ಬಾರಿ ಗಂಗಾವತಿ ಯಲ್ಲಿ ನಡೆದ 78ನೆ ಸಾಹಿತ್ಯ ಸಮ್ಮೇಳನದಲ್ಲೇ ಆ ಭಾಗದ ಕೋ.ಚೆನ್ನಬಸಪ್ಪ ನವರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ನಲ್ಲೂರು ಪ್ರಸಾದರು ಬಿಜೆಪಿ ಸರಕಾರವನ್ನು ಎದುರು ಹಾಕಿಕೊಳ್ಳುವ ತೊಂದರೆ ತಗೆದುಕೊಳ್ಳಲಿಲ್ಲ. ಆದರೆ ಹಾಲಂಬಿ ತಾನು ಪ್ರಗತಿಪರ ಎಂದು ಹೇಳಿಕೊಳ್ಳದಿದ್ದರೂ ಅವರು ಅಧಿಕಾರಕ್ಕೆ ಬಂದಾಗಿನಿಂದ ಪರಿಷತ್ತಿನಲ್ಲಿ ಎಲ್ಲ ಸಮುದಾಯಗಳಿಗೆ ಅವಕಾಶ ನೀಡಿದ್ದಾರೆ. ನೃಪತುಂಗ ಪ್ರಶಸ್ತಿಗೆ ಸಾರಾ ಅಬೂಬಕರ್ ಅವರ ಆಯ್ಕೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಕೋ.ಚೆನ್ನಬಸಪ್ಪ ಅವರ ಆಯ್ಕೆಗೆ ಎಲ್ಲೂ ಅಪಸ್ವರ ಕೇಳಿಬಂದಿಲ್ಲ. ತೊಂಬತ್ತರ ಈ ವಯಸ್ಸಿನಲ್ಲೂ ಅವರ ಕ್ರಿಯಾಶೀಲತೆ ನನ್ನಲ್ಲಿ ಅಚ್ಚರಿ ಮೂಡಿಸಿದೆ. ಆಗಾಗ ನವಕರ್ನಾಟಕ ಪ್ರಕಾಶನಕ್ಕೆ ತಪ್ಪದೇ ಬರುವ ಕೋ.ಚೆ. ಅವರನ್ನು ಅಲ್ಲಿ ಅನೇಕ ಬಾರಿ ಭೇಟಿ ಮಾಡಿದ್ದೇನೆ. ಅವರು ಹಂಚಿಕೊಳ್ಳುವ ಹಳೆ ನೆನಪುಗಳನ್ನು ಕೇಳಿದ್ದೇನೆ. ಟಿಪ್ಪು ಸುಲ್ತಾನ್ ವಿರುದ್ಧ ಅಪಪ್ರಚಾರ ನಡೆದಾಗ ಇಳಿವಯಸಿನಲ್ಲೂ ಕೋಪದಿಂದ ಕುದಿಯುತ್ತಿದ್ದ ಚೆನ್ನಬಸಪ್ಪ ಒಂದೇ ವಾದದಲ್ಲಿ ಆಧಾರ ಸಹಿತ ಪುಸ್ತಕವೊಂದನ್ನು ಬರೆದು ಹಸ್ತಪ್ರತಿಯನ್ನು ನವಕರ್ನಾಟಕದ ರಾಜಾರಾಂ ಕೈಲಿಟ್ಟಿದ್ದರು.
ಕೋ. ಚೆನ್ನಬಸಪ್ಪ ಕುವೆಂಪು ಪರಂಪರೆಯ ವಾರಸುದಾರ. ‘‘ಮನುಷ್ಯಕುಲಂ ತಾನೊಂದೆ ವಲಂ’’ ಎಂಬ ಸಂದೇಶ ನಾಡಿನ ಪಂಪರಿಂದ ಕುವೆಂಪುರವರೆಗೆ ಈ ನೆಲದ ಸಾಹಿತ್ಯ ಪರಂಪರೆ ಪಾಲಿಸಿಕೊಂಡು ಬಂದಿದೆ. ಬಸವಣ್ಣ, ಕನಕದಾಸ ಅಲ್ಲಮಪ್ರಭು, ಅಕ್ಕಮಹಾದೇವಿ, ಶಿಶುನಾಳ ಶರೀಫಸಾಹೇಬರು ಹೀಗೆ ಈ ನೆಲದ ಹೆಮ್ಮೆಯ ಸಂಕೇತ ಎಂದು ನಾವು ಯಾರನ್ನೂ ಕರೆಯು ತ್ತೇವೆಯೋ ಅವರೆಲ್ಲ ಮನುಷ್ಯನನ್ನು ಎಂದೂ ಜಾತಿ ಧರ್ಮದ ನೆಲೆಯಲ್ಲಿ ನೋಡಲಿಲ್ಲ. ಇಪ್ಪತ್ತನೆ ಶತಮಾನ ದಲ್ಲಂತೂ ರಾಷ್ಟ್ರಕವಿ ಕುವೆಂಪು ವಿಶ್ವಮಾನವತೆಯ ಸಂದೇಶ ನೀಡಿದರು.
‘ಹಿಂದೂಗಳೇ ಒಂದಾಗಿರಿ’ ಎಂಬ ಕೂಗನ್ನು ಕಳೆದ ಮೂರು ದಶಕಗಳಿಂದ ಸುತ್ತಲೂ ಕೇಳುತ್ತಿದ್ದೇವೆ. ಚಿದಾನಂದ ಮೂರ್ತಿ ಯಂಥವರು ಈ ಘೋಷಣೆಗೆ ಮಾರು ಹೋಗಿ ಪ್ರಚೋದನಕಾರಿ ಮಾತುಗಳ ನ್ನಾಡುವಲ್ಲಿ ಪ್ರಮೋದ ಮುತಾಲಿಕ್, ತೊಗಾಡಿಯಾ ಜೊತೆ ಪೈಪೋಟಿಗೆ ಇಳಿದಿ ದ್ದಾರೆ. ಆದರೆ ಎಲ್ಲ ಜಾತಿ ಮತಗಳನ್ನು ಬದಿಗೊತ್ತಿ ರಾಷ್ಟ್ರಗಳ ಗಡಿದಾಟಿ ‘‘ವಿಶ್ವಮಾನವರೇ ಒಂದಾಗಿ’’ ಎಂಬ ಸಂದೇಶ ನೀಡಿದವರು ಕುವೆಂಪು. ರಾಷ್ಟ್ರಕವಿಯ ಈ ಸಂದೇಶ ಹೊಸ ಪೀಳಿಗೆಯ ಲೇಖಕರಿಗೂ ಕೈದೀವಿಗೆ ಯಾಗಿದೆ. ಕೋ.ಚೆನ್ನಬಸಪ್ಪ ಈ ಪರಂಪರೆಗೆ ಸೇರಿದವರು.
ಕುವೆಂಪು ಹೇಳಿದಂತೆ ಕರ್ನಾಟಕ ಎಂಬುದು ಸರ್ವಜನಾಂಗದ ಶಾಂತಿಯ ತೋಟ. ಈ ತೋಟದಲ್ಲಿ ಜಿ.ಎಸ್.ಎಸ್., ಅನಂತ ಮೂರ್ತಿ, ಚಂಪಾ, ದೇವನೂರು ಮಹಾದೇವ, ನಿಸಾರ್ ಅಹ್ಮದ್, ಚೆನ್ನವೀರ ಕಣವಿ, ರಹಮತ್ ತರೀಕೆರೆ, ಆರೀಪ್ ರಾಜಾ ಅವರಂತ ನೂರಾರು ಹೂಗಳು ಇವೆ. ಅದೇ ರೀತಿ ಈ ತೋಟದಲ್ಲಿ ಭೈರಪ್ಪ, ಚಿದಾನಂದ ಮೂರ್ತಿಯಂಥ ಕಸ ಕಡ್ಡಿಗಳೂ ಇವೆ. ಈ ತೋಟದ ಸೌಂದರ್ಯ ಹಾಗೂ ಶುದ್ಧತೆ ಕಾಪಾಡಿಕೊಳ್ಳಬೇಕಾದರೆ ಈ ಕಸಕಡ್ಡಿಗಳನ್ನು ಗುಡಿಸಿ ಪಕ್ಕಕ್ಕೆ ಹಾಕಬೇಕಾಗಿದೆ.
ಟಿಪ್ಪು ವಿವಿ ಸ್ಥಾಪನೆಯಾದರೆ ಅಲ್ಲಿ ಮುಸ್ಲಿಂ ಭಯೋತ್ಪಾದಕರು ತಯಾರಾಗುತ್ತಾರೆ’ ಎಂದು ಹೇಳುವವರಿಗೆ ಈ ಭಾಷೆಯನ್ನು ಬಳಸುವುದು ಅನಿವಾರ್ಯವಾಗಿದೆ. ಬರಲಿರುವ ದಿನಗಳಲ್ಲಿ ಕರ್ನಾಟಕ ನಿರ್ಣಾಯಕ ಹೆಜ್ಜೆಗಳನ್ನು ಇಡಬೇಕಾದರೆ ಈ ನಿಟ್ಟಿನಲ್ಲಿ 79ನೆ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚೆನ್ನಬಸವಪ್ಪನವರ ಅಧ್ಯಕ್ಷ ಭಾಷಣ ಖಂಡಿತಾ ಬೆಳಕಿನ ದಾರಿಯನ್ನು ತೋರಿಸಲಿದೆ.
Please follow and like us:
error