You are here
Home > Koppal News > ವಾರ್ತಾಭಾರತಿ ಕನ್ನಡದ ಗಾರ್ಡಿಯನ್: ಯುಆರ್

ವಾರ್ತಾಭಾರತಿ ಕನ್ನಡದ ಗಾರ್ಡಿಯನ್: ಯುಆರ್

 ‘‘ರಂಗುರಂಗಿನ ಪತ್ರಿಕೆಗಳ ನಡುವೆ ಸತ್ಯವೇ ಸುದ್ದಿಮೂಲವಾಗಿರುವ ‘ವಾರ್ತಾಭಾರತಿ’ ಬ್ರಿಟನ್‌ನ ‘ಗಾರ್ಡಿಯನ್’ ಪತ್ರಿಕೆಯ ದಾರಿಯಲ್ಲಿ ಸಾಗುತ್ತಿದೆ ಎಂದು ಬಣ್ಣಿಸಿದವರು ದೇಶದ ಶ್ರೇಷ್ಠ ಚಿಂತಕ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ. ಲಂಡನ್‌ನ ‘ಗಾರ್ಡಿಯನ್’ ಪತ್ರಿಕೆಯ ಪ್ರಸಾರ ಸಂಖ್ಯೆಯಲ್ಲಿ ಇಳಿಮುಖವಾದಾಗ ಓದುಗರು ಅದಕ್ಕೆ ಜೀವ ತುಂಬಿದರು. ಯಾಕೆಂದರೆ, ಸತ್ಯವೇ ಆ ಪತ್ರಿಕೆಯ ಸುದ್ದಿಗಳ ಮೂಲವಾಗಿತ್ತು. ಹಾಗಾಗಿ ಕರ್ನಾಟಕದ ಮಟ್ಟಿಗೆ ‘ವಾರ್ತಾಭಾರತಿ’ಯು ‘ಗಾರ್ಡಿಯನ್’ ಆಗಲಿದೆ ಎಂದು ಅನಂತಮೂರ್ತಿ ಶುಭ ಹಾರೈಸಿದರು.ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಜನದನಿಯ ಸಾರಥಿ‘ ವಾರ್ತಾಭಾರತಿ’ ದೈನಿಕದ 10ನೆ ವರ್ಷದ ವಿಶೇಷಾಂಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಕೋಮುದ್ವೇಷ ಎನ್ನುವುದೇ ಅಪರಾಧ. ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ಚರ್ಚೆ ಅಥವಾ ಸಂವಾದದ ವಿಷಯವೇ ಅಲ್ಲ ಎಂದು ಅನಂತಮೂರ್ತಿ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
ನಾಗರಿಕ ವ್ಯವಸ್ಥೆಗೆ ಬದ್ಧರಾಗಬೇಕು: ದೇಶಕ್ಕೆ ಸ್ವಾತಂತ್ರ ಲಭಿಸಿದ ಬೆನ್ನಿಗೆ ನೆಹರೂ ಮತ್ತು ಗಾಂಧಿ ನಾಡಿನ ಅನಕ್ಷರಸ್ಥರಿಗೂ ಮತದಾನದ ಹಕ್ಕನ್ನು ನೀಡಿದರು. ಈ ವ್ಯವಸ್ಥೆಯಿಂದಾಗಿಯೇ ನಿಜವಾದ ಪ್ರಜಾಪ್ರಭುತ್ವ ಉಳಿದಿದೆ.ಆದರೆ, ಗಣಿಧಣಿಗಳಂತಹ ಕೆಲವು ರಾಜಕಾರಣಿಗಳು ಅದನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಮನುಷ್ಯ ನಾಗರಿಕ ವ್ಯವಸ್ಥೆಗೆ ಬದ್ಧನಾಗಿರಬೇಕು. ಆವಾಗಲೆ ಮಾನವ ಹಕ್ಕುಗಳು ಉಳಿಯುತ್ತದೆ ಮತ್ತು ದಲಿತರ, ಶೋಷಿತರ ಧ್ವನಿಯಾಗಲು ಸಾಧ್ಯವಾಗುತ್ತದೆ ಎದು ಅನಂತಮೂರ್ತಿ ನುಡಿದರು.
ಮೋದಿ ಪ್ರಧಾನಿಯಾಗುವುದು ನಾಚಿಕೆ ಸಂಗತಿ: ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೆ ಅದು ನಾಡಿನ ಪ್ರಜ್ಞಾವಂತ ನಾಗರಿಕರಿಗೆ ನಾಚಿಕೆಯ ಸಂಗತಿಯಾಗಿದೆ. ಯಾಕೆಂದರೆ, ಮೋದಿ ಕ್ರಿಮಿನಲ್ ವ್ಯಕ್ತಿತ್ವ ಹೊಂದಿದವರು. ಆ ವ್ಯಕ್ತಿಯನ್ನು ಮಾಧ್ಯಮಗಳು ವೈಭವೀಕರಿಸುತ್ತಿದೆ. ಪತ್ರಿಕೆಗಳಲ್ಲಿ ಆತನ ಫೋಟೋ ನೋಡಲು ಬೇಸರವಾಗುತ್ತದೆ. ಹಾಗಾಗಿ ಮಾಧ್ಯಮಗಳು ಆತನ ಫೋಟೊ ಪ್ರಕಟಿಸುವುದನ್ನು ಕೈ ಬಿಡಬೇಕು ಎಂದು ಅನಂತಮೂರ್ತಿ ಸಲಹೆ ನೀಡಿದರು.ದೇಶದಲ್ಲಿ ಭೂ, ಟೆಲಿಫೋನ್ ಹೀಗೆ ದಿನಕ್ಕೊಂದು ಹಗರಣ ಬೆಳಕಿಗೆ ಬರುತ್ತಿದೆ.ಎಲ್ಲ ಪಕ್ಷಗಳಿಗೂ ಇದರಲ್ಲಿ ಪಾಲುದಾರಿಕೆಯಿದೆ. ಹಾಗಾಗಿ ಮತದಾರ ಯಾರಿಗೆ ಮತದಾನ ಮಾಡಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾನೆ ಎಂದು ಪ್ರಸಕ್ತ ರಾಜಕೀಯ ಸನ್ನಿವೇಶದ ಬಗ್ಗೆ ವಿಶ್ಲೇಷಿಸಿದ ಡಾ.ಯು.ಆರ್.ಅನಂತಮೂರ್ತಿ, ಟಾಟಾ ಮತ್ತು ಬಿರ್ಲಾರಂತಹ ಉದ್ಯಮಿಗಳು ಕೂಡ ಮೋದಿಯ ಪರವಾಗಿ ನಿಂತಿರುವುದು ವ್ಯವಸ್ಥೆಯ ವ್ಯಂಗ್ಯವಾಗಿದೆ. ಇಂತಹ ಸಂದರ್ಭದಲ್ಲಿ ದ್ವೇಷ ಅಳಿಸಿ ಸತ್ಯವನ್ನು ಪ್ರತಿಪಾದಿಸುವ ಪತ್ರಿಕೆಗಳ ಅಗತ್ಯವಿದೆ ಎಂದರು.
ಮಾಧ್ಯಮಗಳನ್ನು ಅನುಮಾನದಿಂದ ನೋಡಿ:ಲಿಬಿಯಾದ ಸರ್ವಾಧಿಕಾರಿ ಮುಹಮ್ಮದ್ ಗಡಾಫಿಯನ್ನು ಅಮೇರಿಕ ಅತ್ಯಂತ ಅಸಹ್ಯವಾಗಿ ಕೊಲೆ ಮಾಡಿತ್ತು. ಅದನ್ನು ಪಾಶ್ಚಾತ್ಯ ಮಾಧ್ಯಮಗಳು ಅಶ್ಲೀಲವಾಗಿ ತೋರಿಸಿದೆ. ಭಾರತದಲ್ಲಿ ಅಂತಹವರನ್ನು ಕೊಲೆ ಮಾಡಿದರೂ ಅದಕ್ಕೊಂದು ಮರ್ಯಾದೆ ಇರುತ್ತದೆ. ಆದರೂ ಭಾರತದ ಕೆಲವು ಮಾಧ್ಯಮಗಳೂ ಪಾಶ್ಚಾತ್ಯ ಮಾಧ್ಯಮದ ದಾರಿಯನ್ನು ಹಿಡಿದಿದೆ.ಆದಾಗ್ಯೂ ಮಾಧ್ಯಮಗಳು ತೋರಿಸಿದ್ದೇ ದಾರಿ ಎಂಬಂತಾಗಬಾರದು. ಅದನ್ನು ಅನುಮಾನದಿಂದ ನೋಡಲು ಓದುಗರು ಕಲಿಯಬೇಕು ಎಂದರು.
ಕನ್ನಡಿಗರ ಪತ್ರಿಕೆ: ಸತ್ಯವನ್ನು ಎಲ್ಲೆಡೆಗೆ ಪಸರಿಸುವ ‘ವಾರ್ತಾಭಾರತಿ’ ಸಮಗ್ರ ಕನ್ನಡಿಗರ ಪತ್ರಿಕೆ ಎಂದ ಡಾ.ಯು.ಆರ್. ಅನಂತಮೂರ್ತಿ, ಒಬ್ಬ ಮುಸ್ಲಿಂ ಪತ್ರಿಕೆ ನಡೆಸಿದರೆ ಅದು ಮುಸ್ಲಿಮರ ಮತ್ತು ಒಬ್ಬ ಕ್ರಿಶ್ಚಿಯನ್ ಪತ್ರಿಕೆ ನಡೆಸಿದರೆ ಅದು ಕ್ರೈಸ್ತರ ಪತ್ರಿಕೆಯಾಗುತ್ತದೆ. ಆದರೆ, ಮೇಲ್ವರ್ಗದ ಒಬ್ಬ ಪತ್ರಿಕೆ ನಡೆಸಿದರೆ ಅದು ಎಲ್ಲರ ಪತ್ರಿಕೆಯಾಗುತ್ತದೆ ಎಂದು ವ್ಯಂಗ್ಯವಾಡುವ ಮೂಲಕ ಇಂದಿನ ಕೆಲವು ಜನರ ಮನಸ್ಥಿತಿಯನ್ನು ತೆರೆದಿಟ್ಟರು.

Leave a Reply

Top