ನವೆಂಬರ್ ೧೬ ರಂದು ಕೊಪ್ಪಳದಲ್ಲಿ ಮೀಡಿಯಾ ಕ್ಲಬ್ ಪತ್ರಕರ್ತರಿಂದ ಸಂಪತ್ತಿಗೆ ಸವಾಲ್

  ಕೊಪ್ಪಳ : ನವೆಂಬರ್ ೧೬ ರಂದು ಸಂಜೆ ೬ ಗಂಟೆಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸೌರಭದಡಿ ದಿ.ಪಿ.ಬಿ.ಧುತ್ತರಗಿ ವಿರಚಿತ ಜನಪ್ರಿಯ ನಾಟಕ ಸಂಪತ್ತಿಗೆ ಸವಾಲ್ ನಾಟಕದ ಉಚಿತ ಪ್ರದರ್ಶನ ಹಾಗೂ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮದಡಿ ರಂಗಗೀತೆಗಳ ಗಾಯನ ಕಾರ್ಯಕ್ರಮವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಗಮಿಸಬೇಕೆಂದು ಹಿರಿಯ ರಂಗಕರ್ಮಿ ಹಾಗೂ ರಂಗಗೀತೆಗಳ  ಗಾಯಕಿ ಸರೋಜಮ್ಮ ಧುತ್ತರಗಿ ಹೇಳಿದರು.

          ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ನಾಟಕದಲ್ಲಿ ನಟಿಸಲು ಅಭಿನಯ ಗೊತ್ತಿರಲೇಬೇಕು ಎಂಬ ನಿಯಮವೇನೂ ಇಲ್ಲ. ಗಟ್ಟಿಯಾದ ಮಾತುಗಳೇ ನಾಟಕವನ್ನು ನೋಡಿಸಿಕೊಂಡು ಹೋಗುತ್ತವೆ. ಸಂಭಾಷಣೆ ಒಪ್ಪಿಸುವ ಶೈಲಿ ಚೆನ್ನಾಗಿದ್ದರೆ ಸಾಕು ನಾಟಕ ಎಲ್ಲರಿಗೂ ರುಚಿಸುತ್ತದೆ. ಈ ಸಲದ ಪ್ರದರ್ಶನದ ವಿಶೇಷವೆನೆಂದರೆ ಮಹಿಳಾ ಪಾತ್ರಗಳನ್ನು ಹೊರತುಪಡಿಸಿ ಕೊಪ್ಪಳ ಮೀಡಿಯಾ ಕ್ಲಬ್‌ನ ಪತ್ರಕರ್ತರೇ ಕಲಾವಿದರಾಗಿ ಅಭಿನಯಿಸುವ ಮೂಲಕ ದಾಖಲೆ ಬರೆಯಲು ಹೊರಟಿರುವುದು. ಖಂಡಿತವಾಗಿ ನಾಟಕ ಯಶಸ್ವಿಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
           ನಾಟಕದ ಕಥಾನಾಯಕ ಭದ್ರಿಯ ಪಾತ್ರದಲ್ಲಿ ಉದಯವಾಣಿಯ ವರದಿಗಾರ ಬಸವರಾಜ ಕರುಗಲ್, ಸಾಹುಕಾರ ಮರಿಯಪ್ಪ ಪಾತ್ರದಲ್ಲಿ ಈಟಿವಿ ವರದಿಗಾರ ಶರಣಪ್ಪ ಬಾಚಲಾಪುರ, ಕುಲಕರ್ಣಿ ವೆಂಕಪ್ಪನ ಪಾತ್ರದಲ್ಲಿ ಸಂಯುಕ್ತ ಕರ್ನಾಟಕದ ಬಸವರಾಜ ಬಿನ್ನಾಳ, ಸಿದ್ದಣ್ಣನ ಪಾತ್ರದಲ್ಲಿ ನಾಗರಿಕ ಪತ್ರಿಕೆಯ ಸಂತೋಷ ದೇಶಪಾಂಡೆ, ಫೌಜದಾರ ಪಾತ್ರದಲ್ಲಿ ಕನ್ನಡಪ್ರಭದ ದತ್ತು ಕಮ್ಮಾರ, ಪೋಲೀಸ್ ಪಾತ್ರದಲ್ಲಿ ಪಬ್ಲಿಕ್ ಟಿವಿಯ ಮುಕ್ಕಣ್ಣ ಕತ್ತಿ, ಸಂಯುಕ್ತ ಕರ್ನಾಟಕದ ಪರಮೇಶರಡ್ಡಿ, ಗುಂಡಣ್ಣನ ಪಾತ್ರದಲ್ಲಿ ಜನಶ್ರೀ ವಾಹಿನಿಯ ವರದಿಗಾರ ಮೌನೇಶ ಬಡಿಗೇರ, ಕೆಂಚಪ್ಪನ ಪಾತ್ರದಲ್ಲಿ ಕನ್ನಡಮ್ಮ ಪತ್ರಿಕೆಯ ಶಿವರಾಜ ನುಗಡೋಣಿ, ಭೃರನ ಪಾತ್ರದಲ್ಲಿ ವಿಜಯ ಕರ್ನಾಟಕದ ಮಹೇಶಗೌಡ ಭಾನಾಪೂರ ಅಭಿನಯಿಸುತ್ತಿದ್ದಾರೆ ಎಂದು ವಿವರಿಸಿದರು.
         ಕಳೆದ ೨ ತಿಂಗಳಿಂದ ರಿಹರ್ಸಲ್ ನಡೆದಿದ್ದು ಪತ್ರಕರ್ತರೆಲ್ಲ ಅಷ್ಟೆಲ್ಲ ಕೆಲಸಗಳ ಒತ್ತಡದ ಮಧ್ಯೆಯೂ ಭಾಗವಹಿಸಿ ರಂಗಭೂಮಿಯ ಬಗ್ಗೆ ತಮಗಿರುವ ಗೌರವ, ಅಭಿಮಾನವನ್ನು ತೋರ್ಪಡಿಸಿದ ರೀತಿ ನಿಜಕ್ಕೂ ಸ್ಮರಣಾರ್ಹ. ಸಂಪತ್ತಿಗೆ ಸವಾಲ್ ಎಂದ ತಕ್ಷಣ ಡಾ.ರಾಜ್‌ಕುಮಾರ ಎಂಬ ಭಾವನೆ ಎಲ್ಲರ ಮನದಲ್ಲಿ ಮೂಡುವುದು ಸಹಜ. ರಾಜ್‌ಕುಮಾರ ಸಿನಿಮಾದಲ್ಲಿ ಅಭಿನಯಿಸಿದ ಮೇಲೆ ಜನಪ್ರಿಯವಾಗಿದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ರಾಜ್‌ಕುಮಾರ್ ಅವರನ್ನೇ ಮನದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಅದು ಸಿನಿಮಾ, ಇದು ನಾಟಕ ಎಂದು ಅವರು ತಿಳಿಸಿದರು.
          ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿರೂಪಾಕ್ಷಪ್ಪ ಧುತ್ತರಗಿ, ವರದಿಗಾರರಾದ ಶರಣಪ್ಪ ಬಾಚಲಾಪೂರ, ಸೋಮರಡ್ಡಿ ಅಳವಂಡಿ ಇದ್ದರು.
Please follow and like us:
error