fbpx

ಪಪ್ಪಾಯ ಬೆಳೆ : ರೈತರಿಗೆ ತರಬೇತಿ ಕಾರ್ಯಕ್ರಮ ಯಶಸ್ವಿ

  ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಸ್ತರಣಾ ಘಟಕ ಕೊಪ್ಪಳದಿಂದ  ಯಲಬುರ್ಗಾ, ಕುಷ್ಟಗಿ ಮತ್ತು ಕೊಪ್ಪಳ ತಾಲೂಕುಗಳಲ್ಲಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೈತರ ಪಪ್ಪಾಯ ಬೆಳೆಯ ಬಗ್ಗೆ ಬೀರಲದಿನ್ನಿ ಗ್ರಾಮದಲ್ಲಿ ಇತ್ತೀಚಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಲಾಯಿತು.
ಕೊಪ್ಪಳ ಜಿಲ್ಲೆಯಲ್ಲಿ ಪಪ್ಪಾಯ ಬೆಳೆ ಸುಮಾರು ೧೦೦೦ ಹೆಕ್ಟರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ. ರೈತರು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿಯಲ್ಲಿ ಪಪ್ಪಾಯ ಬೆಳೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಬೆಳೆಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿಯಲ್ಲಿ ಹನಿ ನೀರಾವರಿ ಅಲ್ಲದೇ ಸುಧಾರಿತ ಬೇಸಾಯ ಕ್ರಮಗಳಿಗೆಂದು ತೋಟಗಾರಿಕೆ ಇಲಾಖೆ ಅನುದಾನ ನೀಡುತ್ತಿರುವುದರಿಂದ ರೈತರು ೨ ಎಕರೆಯಿಂದ ೨೦ ಎಕರೆಯವರೆಗೆ ಪಪ್ಪಾಯ ಬೆಳೆದಿದ್ದಾರೆ. ಈಗ ಬೆಳೆಯು ವಿವಿಧ ಹಂತದಲ್ಲಿದೆ. ಆದರೆ ಹವಾಮಾನದ ವೈಪರೀತ್ಯದಿಂದಾಗಿ ಬಹುತೇಕ ಬೆಳೆಯು ನಂಜಾಣು ರೋಗಕ್ಕೆ ತುತ್ತಾಗಿದೆ. ರೋಗ ವಿವಿಧ ಹಂತದಲ್ಲಿದ್ದು ಕೆಲವೊಂದು ತಾಕುಗಳಲ್ಲಿ ಹತೋಟಿಗೆ ಮೀರಿ ಬೆಳೆದಿದೆ. ಇಲಾಖೆಯಿಂದ ರೈತರಿಗೆ ಕಾಲಕಾಲಕ್ಕೆ ಮಾಧ್ಯಮಗಳ ಮೂಲಕ ಸಲಹೆ ನೀಡುತ್ತಾ ಬಂದಿದೆಯಾದರೂ ಶುಷ್ಕ ವಾತಾವರಣದಿಂದಾಗಿ ರೋಗ ಹತೋಟಿಗೆ ಬರುತ್ತಿಲ್ಲ ಎಂದರು. 
 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞ ವಾಮನಮೂರ್ತಿ ಅವರು ಮಾತನಾಡಿ, ಪಪ್ಪಾಯ ಒಂದು ಲಾಭದಾಯಕವಾದ ಅಲ್ಪಾವಧಿ ಹಣ್ಣಿನ ಬೆಳೆಯಾಗಿದ್ದು, ರೈತರು ಖಂಡಿತವಾಗಿಯೂ ನಿಖರ ಆದಾಯಗಳಿಸಬಹುದಾದ್ದರಿಂದ ಎದೆಗುಂದುವ ಅಗತ್ಯವಿಲ್ಲ  ಎಂದರು.
ಕೃಷಿ ವಿಸ್ತರಣಾ ಘಟಕದ ಸಹಾಯಕ ಪ್ರಾಧ್ಯಾಪಕ ರಾಹುಲಪಾಠಕ ಅವರು ಮಾತನಾಡಿ, ಪಪ್ಪಾಯ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ವಿವರಿಸಿದರು. ಕೃಷಿ ವಿಸ್ತರಣಾ ಘಟಕದ ಸಸ್ಯರೋಗ ಶಾಸ್ತ್ರ ತಜ್ಞರಾದ ಡಾ: ಮಲ್ಲಿಕಾರ್ಜುನ ಕೆಂಗನಾಳ ಅವರು ಮಾತನಾಡಿ, ಪಪ್ಪಾಯ ಬೆಳೆಯಲ್ಲಿ ಬರುವ ನಂಜಾಣು ನಿಯಂತ್ರಣದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಸಿಗಳು ಆಯ್ಕೆ ಹಂತದಿಂದ ಹಿಡಿದು ಬೆಳೆ ಕಟಾವಿನವರೆಗೂ ಸಮಗ್ರ ಹತೋಟಿ ಕ್ರಮಗಳಾದ ಸಾವಯವ ಪರಿಕರಗಳ ಬಳಕೆ ಹಳದಿ, ನೀಲಿಬಣ್ಣದ ಅಂಟು ಹಾಳೆಗಳ ಬಳಕೆ, ಕೀಟಾಕರ್ಶಕ ಬಲೆಗಳ ಬಳಕೆ ವಾರಕ್ಕೊಮ್ಮೆ ಸಾಮೂಹಿಕವಾಗಿ ಶಿಫಾರಸ್ಸು ಮಾಡಿದ ಪೀಡೆನಾಶಕಗಳ ಸಿಂಪರಣಾ ವಿಧಾನದ ಮೂಲಕ ನಂಜಾಣುರೋಗವನ್ನು ಹೇಗೆ ನಿಯಂತ್ರಿಸಬಹುದು ಎಂದರು. ಯಲಬುರ್ಗಾ ಸಹಾಯಕ ತೋಟಗಾರಿಕೆ ಅಧಿಕಾರಿ ರವಿ ಅವರು ಸ್ವಾಗತಿಸಿ ವಂದಿಸಿದರು.  ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನ ೪೦ ಕ್ಕೂ ಹೆಚ್ಚು ಪಪ್ಪಾಯ ಬೆಳೆಗಾರರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!