fbpx

ಶಾಲಾ-ಕಾಲೇಜು-ವಿಶ್ವವಿದ್ಯಾಲಯ ಬಂದ್ ಯಶಸ್ವಿ

 ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಲು ರಾಜ್ಯಾದ್ಯಂತ ೧೦ ಸೆಪ್ಟೆಂಬರ್ ೨೦೧೪ ರಂದು ಶಾಲಾ-ಕಾಲೇಜು-ವಿಶ್ವವಿದ್ಯಾಲಯ ಬಂದ್
********************
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ದೇಶದ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಬೆಳೆದು ಬಂದು ಸರ್ವರಿಗೂ ಶಿಕ್ಷಣ- ಸರ್ವರಿಗೂ ಉದ್ಯೋಗಕ್ಕಾಗಿ ಮತ್ತು ದೇಶದ ಸಮಗ್ರ ಅಭಿವೃದ್ದಿಗೆ ದುಡಿಯುತ್ತಿರುವ  ದೇಶದ ಅಗ್ರಗಣ್ಯ ವಿದ್ಯಾರ್ಥಿ ಸಂಘಟನೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ  ಶಾಲಾ-ಕಾಲೇಜು-ವಿಶ್ವವಿದ್ಯಾಲಯ ಬಂದ್ ಕರೆ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಅವರ ಮನವಿ ಪತ್ರ ಇಂತಿದೆ:         
ಜಗತ್ತನ್ನು ಬದಲಾಯಿಸಲು ಶಿಕ್ಷಣ ಒಂದು ಶಕ್ತಿಯುತ ಆಯುಧ ಎನ್ನುವ ನೆಲ್ಸನ್ ಮಂಡೇಲಾರವರ ವಾಣಿಯಂತೆ ಒಂದು ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಶಿಕ್ಷಣ ತಳಪಾಯವಾಗಿದೆ. ವಿದ್ಯಾರ್ಥಿ-ಯುವಜನರನ್ನು ದೇಶದ ಅಭಿವೃದ್ದಿಯಲ್ಲಿ ತೊಡಗಿಸಬೇಕಾದರೆ ಶಿಕ್ಷಣ ಕ್ಷೇತ್ರವನ್ನು ಆದ್ಯತೆಯಾಗಿ ಪರಿಗಣಿಸಿ ವೈಜ್ಞಾನಿಕ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಪ್ರತಿಯೊಂದು ಜವಾಬ್ದಾರಿಯುತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂವಿಧಾನ ಬದ್ಧ ಕರ್ತವ್ಯವಾಗಿದೆ. ಆದರೆ ನಮ್ಮನ್ನು ಆಳುತ್ತಿರುವ ಪ್ರಭುತ್ವಗಳು ಶಿಕ್ಷಣ ನೀಡುವ ಮೂಲ ಜವಾಬ್ದಾರಿಯಿಂದ ನುಣುಚಿಕೊಳ್ಳತ್ತಾ ಶಿಕ್ಷಣ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ರಾಜ್ಯದ ಶೈಕ್ಷಣಿಕ ಕ್ಷೇತ್ರ ಸಮಸ್ಯೆಗಳ ಗೂಡಾಗಿದೆ. ೬ ರಿಂದ ೧೪ ವರ್ಷದೂಳಗಿನ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಆರ್.ಟಿ.ಇ (ಶಿಕ್ಷಣ ಹಕ್ಕು ಕಾಯ್ದೆ)ಯನ್ನು ಸಮರ್ಪಕವಾಗಿ ಜಾರಿಗೂಳಿಸುತ್ತಿಲ್ಲಾ. ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣ ಕೇಂದ್ರಗಳನ್ನು ಸರ್ಕಾರ ಪ್ರಾರಂಭಿಸುವ ಬದಲಾಗಿ ಖಾಸಗಿಯವರಿಗೆ ಎಲ್.ಕೆ.ಜಿ, ಯು.ಕೆ.ಜಿ, ಬೇಬಿಸಿಟ್ಟಿಂಗ್ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣದ ಧಾಳಿ  ಈ ಹಂತದಿಂದಲೇ ವ್ಯಾಪಕವಾಗಿದೆ. ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಬಾಹಿರವಾಗಿ  ಡೊನೇಷನ್ ವಸೂಲಿಯಲ್ಲಿ ತೊಡಗಿವೆ ಮತ್ತು ಇವುಗಳೇ ಸರ್ಕಾರವನ್ನು ನಿಯಂತ್ರಿಸುತ್ತಿವೆ. ರಾಜ್ಯದಲ್ಲಿ ೧ ಲಕ್ಷ ೬೮ ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಕ್ಷರ ದಾಸೋಹ ಬಿಸಿಯೂಟ ಯೋಜನೆಯನ್ನು ಖಾಸಗಿಕರಣಗೂಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿಷ್ಠಿತ ನಗರಗಳು ಸೇರಿದಂತೆ ರಾಜ್ಯದಲ್ಲೆಡೆ ನಾಯಿ ಕೂಡೆಯಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ.
ಕನಿಷ್ಟ ಮೂಲಭೂತ ಸೌಲಭ್ಯಗಳೇ ಇಲ್ಲ: ಸರ್ಕಾರಿ ಶಾಲಾ-ಕಾಲೇಜುಗಳು ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ನರಳುತ್ತಿವೆ. ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಈಗಾಗಲೇ ೩೧೭೦ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಶೇ ೬೮ ರಷ್ಟು ಪ್ರೌಡಶಾಲೆಗಳಲ್ಲಿ ವಿದ್ಯಾರ್ಥಿನೀಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ ಎಂಬ ಅಂಕಿ ಅಂಶವನ್ನು ಸರ್ಕಾರವೇ ಹೇಳುತ್ತಿದೆ. ಮರದ ನೆರಳಲ್ಲಿ, ಬಿಸಿಲನಲ್ಲಿ, ಕೆಲವಡೆ ಪಾಠ ನಡೆಯುತ್ತಿವೆ. ಶುದ್ದ ಕುಡಿಯುವ  ನೀರು, ಸುಸಜ್ಜಿತ ಕಟ್ಟಡ, ಬೆಂಚುಗಳು, ಗ್ರಂಥಾಲಯ, ಕ್ರೀಡಾಂಗಣಗಳು ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯವಿಲ್ಲದೇ ಸರ್ಕಾರಿ ಶಿಕ್ಷಣ ಸಂಸ್ಥೆಗಳು ನರುಳುತ್ತಿವೆ.
ಉನ್ನತ ಶಿಕ್ಷಣದ ಮಟ್ಟ ಕುಸಿಯುತ್ತಿದೆ: ಪಿ.ಯು ಮತ್ತು ಪದವಿ ಶಿಕ್ಷಣ ರಾಜ್ಯದಲ್ಲಿ ಚಿಂತಾಜನಕವಾಗಿದೆ. ಉನ್ನತ ಶಿಕ್ಷಣವನ್ನು ಅಭಿವೃದ್ಧಿ ಪಡಿಸಲು ಸರಕಾರ ಆಸಕ್ತಿ ತೋರುತ್ತಿಲ್ಲ. ಪರಿಣಾಮ ರಾಜ್ಯದಲ್ಲಿ ಪದವಿ ಕಲಿಯುವವರ ಸಂಖ್ಯೆ ಕೇವಲ ೧೧% ರಷಿದೆ. ಸರಕಾರಿ ವಿ.ವಿಗಳನ್ನು ಬಲಪಡಿಸುವದರ ಬದಲಾಗಿ ಖಾಸಗಿ ವಿ.ವಿಗಳನ್ನು ಹೆಚ್ಚಾಗಿ ತೆರೆಯಲಾಗುತ್ತಿದೆ. ಉನ್ನತ ಶಿಕ್ಷಣವು ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿರುವುದರಿಂದ ಹಣ ಉಳ್ಳವರಿಗೆ ಮಾತ್ರ ಶಿಕ್ಷಣ ಎನ್ನುವಂತಾಗಿದೆ. ವೃತ್ತ ಶಿಕ್ಷಣ ಮಾರಾಟದ ಸರಕಾಗಿದೆ. ರಾಜ್ಯ ಸರಕಾರ ಸಿ.ಇ.ಟಿ ಗೊಂದಲವನ್ನು ಸರಿ ಪಡಿಸದ ಕಾರಣ ಕಾಮೆಡ್ ಕೆ ಈ ಬಾರಿ ಹೆಚ್ಚು ಲಾಭ ಮಾಡಿಕೊಡಲಾಗಿದೆ.  
ಹೆಚ್ಚುತ್ತಿರುವ ಅತ್ಯಾಚಾರಿಗಳ ಅಟ್ಟಹಾಸ : ರಾಷ್ಟ್ರ ಮತ್ತು ರಾಜ್ಯದಲ್ಲಿ ದಿನೇ ದಿನೇ ಅತ್ಯಾಚಾರಿಗಳ ಅಟ್ಟಹಾಸ ಹೆಚ್ಚುತ್ತಿದೆ. ಮನೆಯಲ್ಲಿ, ಶಾಲೆಯಲ್ಲಿ, ಸರ್ಕಾರಿ-ಖಾಸಗಿ ಕಛೇರಿಗಳಲ್ಲಿ, ಬೀದಿಯಲ್ಲಿ ಎಲ್ಲಿ ನೋಡಿದರೂ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿವೆ. ೩ರಿಂದ೪ ವರ್ಷದ ಮಕ್ಕಳಿಂದ ಹಿಡಿದು ೬೦ ವರ್ಷದ ವಯೋವೃದ್ದೆಯವರೆಗೆ, ವಿದ್ಯಾರ್ಥಿನೀಯರಿಗೆ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಪ್ರತಿ ೨೦ ನಿಮಿಷಗಳಿಗೂಮ್ಮೆ ಒಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದ್ದು. ಒಟ್ಟು ೨೩,೫೮೨ ಅತ್ಯಾಚಾರ ಪ್ರಕರಣಗಳು ನಡೆದಿವೆ. ಅದರಲ್ಲಿ ಶಿಕ್ಷೆಯಾಗಿದ್ದು ಕೇವಲ ಶೇ ೨೫ ರಷ್ಟು ಪ್ರಕರಣಗಳಲ್ಲಿ ಮಾತ್ರ. ಇನ್ನುಳಿದ ಶೇ೭೫ ರಷ್ಟು ಪ್ರಕರಣಗಳು ಖುಲಾಸೆ ಆಗಿವೆ. ರಾಜ್ಯದಲ್ಲಿ ೨೦೦೮ ರಿಂದ ೨೦೧೨ರವರಗೆ ೨೭೪೧ ಅತ್ಯಾಚಾರ ಪ್ರಕರಣಗಳು, ೩೨ ಸಾಮೂಹಿಕ  ಅತ್ಯಾಚಾರಗಳು, ೧೨೩೫೨ ಲೈಂಗಿಕ ಕಿರುಕುಳಗಳು ದಾಖಲಾಗಿವೆ. ಸುಪ್ರಿಂ ಕೋರ್ಟ ನಿರ್ದೇಶನದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸಲು ಶಿಕ್ಷಣ ಇಲಾಖೆಗಳು ಮುತುವರ್ಜಿ ವಹಿಸದಿರುವುದು ವಿಷಾದನೀಯವಾಗಿದೆ. 
ಖಾಲಿ- ಖಾಲಿ ಹುದ್ದೆಗಳು : ನೇಮಕಾತಿ ನಿಂತು ಹೋಗಿದೆ. ಶಿಕ್ಷಕ-ಉಪನ್ಯಾಸಕ-ಭೋದಕೇತರ ಸಿಬ್ಬಂಧಿಗಳಿಲ್ಲದೆ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಪೂರಕ ವಾತವರಣವಿಲ್ಲದಂತಾಗಿದೆ. ಶಿಕ್ಷಕ-ಉಪನ್ಯಾಸಕರಿಗೆ ಹೆಚ್ಚುವರಿ ಕೆಲಸದ ಒತ್ತಡದಿಂದಾ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಡಕಾಗಿದೆ. ತರಬೇತಿ ಪಡೆದ ಲಕ್ಷಾಂತರ ಉದ್ಯೋಗಕಾಂಕ್ಷಿಗಳಿದ್ದರೂ ನೇಮಕಾತಿ ನಡೆಯುತ್ತಿಲ್ಲಾ. ೩೮ ಸಾವಿರ ಶಿಕ್ಷಕರ ಹುದ್ದೆಗಳು, ಶೇ.೨೭ ರಷ್ಟು ಕಾಲೇಜು ಹಾಗೂ ವಿ.ವಿಗಳಲ್ಲಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿವೆ. ಖಾಯಂ ನೇಮಾಕಾತಿಯ ಬದಲಾಗಿ ಅತಿಥಿ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ  ಮಾಡಿಕೊಳ್ಳುತ್ತಿರುವುದು ಉದ್ಯೋಗದ ಅಭದ್ರತೆಯನ್ನು ತೋರಿಸುತ್ತದೆ. ಸಾರ್ವಜನಿಕ ವಲಯದಲ್ಲಿ ಖಾಸಗಿಕರಣದ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುತ್ತಿರುವುದು ದುರಂತವಾಗಿದೆ.
ಸಮಸ್ಯೆಗಳ ಕೂಪವಾಗಿರುವ ಎಸ್.ಸಿ/ಎಸ್.ಟಿ ಮತ್ತು ಬಿ.ಸಿ.ಎಂ ಹಾಸ್ಟೆಲ್‌ಗಳು: ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಕಾರಣಕ್ಕಾಗಿ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯದಂತೆ ಪ್ರಾರಂಭವಾಗಿರುವ ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ನಡೆಸುತ್ತಿರುವ ಬಿ.ಸಿ.ಎಂ ಮತ್ತು ಎಸ್.ಸಿ/ಎಸ್.ಟಿ ಹಾಸ್ಟೆಲ್‌ಗಳು ಮೂಲ ಗುರಿಯನ್ನು ತಲುಪುತ್ತಿಲ್ಲ. ಮೂಲಸೌಲಭ್ಯಗಳಿಲ್ಲದ ಕಾರಣ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಿದೆ. ವಿದ್ಯಾರ್ಥಿ ನಿಲಯಗಳು ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿಲ್ಲ. ದೇಶದೆಲ್ಲೆಡೆ ಪ್ರತಿನಿತ್ಯ ಆಹಾರ ಪದಾರ್ಥಗಳ ಬೆಲೆ ಗಗನೆಕ್ಕೇರುತ್ತಿದೆ. ಕೊಲೆ, ಭ್ರಷ್ಠಾಚಾರ, ದರೋಡೆ, ಅತ್ಯಾಚಾರ, ಹಗರಣ, ದೇಶದ ಕನಿಜ ಸಂಪತ್ತನ್ನು ಲೂಟಿ ಮಾಡಿ ಜೈಲಿನಲ್ಲಿರುವ ಖೈದಿಗಳಿಗೆ ದಿನಕ್ಕೆ ಸುಮಾರು ೧೨೦ ರೂಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳ ದಿನದ ಊಟಕ್ಕೆ ಕೇವಲ ಸುಮಾರು ೩೦ರೂಗಳನ್ನು ನೀಡುತ್ತಿದೆ. ದೈಹಿಕವಾಗಿ-ಮಾನಸಿಕವಾಗಿ ಬೆಳವಣಿಗೆ ಹೊಂದಬೇಕಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಈ ಹಣದಿಂದ ಸಾಧ್ಯವೇ..? ಬಹುತೇಕ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಕನಿಷ್ಠ ಶೌಚಾಲಯಗಳಿಲ್ಲ ಬಾಡಿಗೆ ಕಟ್ಟಡಗಳಲ್ಲಿ ನಡೆಸುತ್ತಿರುವ ಕೆಲವು ಹಾಸ್ಟೆಲ್‌ಗಳಂತೂ ಹಂದಿಗೂಡಿಗಿಂತಲೂ ಕೀಳಾಗಿವೆ. ಪ್ರತಿ ಹಾಸ್ಟೆಲ್‌ಗಳಿಗೂ ಗ್ರಂಥಾಲಯಗಳಿರಬೇಕೆಂದು ನಿಯಮವಿದೆ. ಆದರೆ ಎಲ್ಲಿಯೂ ಜಾರಿಯಲ್ಲಿಲ್ಲ. ಸ್ಪರ್ಧಾತ್ಮಕ ಪುಸ್ತಕಗಳು, ವಿವಿಧ ಭಾಷೆಗಳ ಹತ್ತಾರು ದಿನಪತ್ರಿಕೆಗಳು, ಮಾಸ ಪತ್ರಿಕೆಗಳು ಹಾಸ್ಟೆಲ್‌ನ ಗ್ರಂಥಾಲಯಗಳಲ್ಲಿ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಗುಣಮಟ್ಟದ ಆಹಾರ, ಶುದ್ದ ಕುಡಿಯುವ ನೀರು, ಸೂಕ್ತ ಕಟ್ಟಡ, ಹಾಸಿಗೆ, ಹೊದಿಕೆಗಳಿಲ್ಲದೆ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕ್ರೀಡೋಪಕರಣಗಳೂ ಕೂಡ ಸಿಗುತ್ತಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಟಿ.ವಿ, ಕಂಪ್ಯೂಟರ‍್ಸ್, ಇಂಟರ್‌ನೆಟ್ ಇಲ್ಲದೆ ಹೊಸ ಆವಿಷ್ಕಾರಗಳ ಮತ್ತು ಬದಲಾವಣೆಗಳ ಅರಿವೇ ಇಲ್ಲದಂತಾಗಿದೆ. ಒಬ್ಬ ವಾರ್ಡನ್ ೨ಕ್ಕಿಂತ ಹೆಚ್ಚು ಹಾಸ್ಟೆಲ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹಾಸ್ಟೆಲ್ ಮತ್ತು ಶೌಚಾಲಯಗಳನ್ನು ಶುಚಿಗೊಳಿಸುವವರಿಗೆ ತಿಂಗಳಿಗೆ ಕೇವಲ ೬೦೦ರೂಗಳನ್ನು ನೀಡಿ ಸರ್ಕಾರ ಅವರನ್ನು ಅವಮಾನಿಸಲಾಗುತ್ತಿದೆ. ಹಾಸ್ಟೆಲ್‌ಗಳಲ್ಲಿ ಖಾಯಂ ಅಡುಗೆ ಸಿಬ್ಬಂದಿ ನೇಮಕಾತಿ ನಿಂತುಹೋಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದರೂ ಅವರಿಗೆ ಸರಿಯಾದ ಸಮಯಕ್ಕೆ ಸೂಕ್ತ ಸಂಬಳ ನೀಡುತ್ತಿಲ್ಲ.
ಒಬಿಸಿ ವಿದ್ಯಾರ್ಥಿಗಳ ಗೋಳು ಸರ್ಕಾರಕ್ಕೆ ಕೇಳಿಸುತ್ತಿಲ್ಲಾ: ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಭೋಧನಾಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾಶುಲ್ಕ, ಗ್ರಂಥಾಲಯ ಶುಲ್ಕಗಳು ವಿನಾಯಿತಿಗೆ ಅರ್ಹವಾಗಿರುವ ಶುಲ್ಕಗಳಾಗಿವೆ. ಈ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳು ನೀಡುವ ಶುಲ್ಕಗಳಿಗೆ ವಿನಾಯಿತಿ ನೀಡಲು ಸರಕಾರ ಅಳವಡಿಸಿರುವ ನಿಯಮ ಸಂವಿಧಾನ ಬಾಹೀರವಾಗಿದೆ. ವಿದ್ಯಾರ್ಥಿಯು ಕಾಲೇಜು ಪ್ರವೇಶ ಸಂದರ್ಭದಲ್ಲಿಯೇ ಎಲ್ಲ ಶುಲ್ಕಗಳನ್ನು ನೀಡಬೇಕು. ನಂತರ ವಿನಾಯಿತಿ ಪಡೆಯುವುದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಹಾಕಲು ತಿಳಿಸಲಾಗಿದೆ. ಈ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಯು ವಾರ್ಷಿಕ ಪರೀಕ್ಷೆಯಲ್ಲಿ ಪ್ರವರ್ಗ ೧ ಶೇ.೪೦, ಪ್ರವರ್ಗ ೨ಎ, ೩ಎ, ೩ಬಿ – ಶೇ.೫೦% ಅಂಕಗಳನ್ನು ಪಡೆದಿರಬೇಕು, ನವೀಕರಣ ವಿದ್ಯಾರ್ಥಿಗಳು ಶೇ.೬೦% ರಿಂದ ಶೇ.೭೦% ಅಂಕಗಳನ್ನು ಪಡೆದಿರಬೇಕು ಎಂಬ ನಿಯಮಗಳನ್ನು ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಶುಲ್ಕ ವಿನಾಯಿತಿ ಕೋರಿ ವಿದ್ಯಾರ್ಥಿಗಳು ಅರ್ಜಿ ಹಾಕಿರುತ್ತಾರೆ. ಅಂಕಗಳ ಆಧಾರದ ಮೇಲೆ ಜಾರಿ ಮಾಡಿದರೆ ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಬಡ ವಿದ್ಯಾರ್ಥಿಳಿಗೆ ಸೌಲಭ್ಯ ನೀಡುವಾಗ ಅಂಕದ ಮಾನದಂಡ ಸರಿಯಾದ ಕ್ರಮವಲ್ಲ.
ಜಿಲ್ಲೆಯಲ್ಲಿ ನಿಷ್ಕೃಯಗೊಂಡ ಖಾಸಗಿ ಶಾಲೆಗಳ ನಿಯಂತ್ರಣಾ ಸಮಿತಿ : ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಸಂಧರ್ಭದಲ್ಲಿ ಸರಕಾರದ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘನೆಮಾಡಿ ಸರ್ಕಾರಕ್ಕೂ ಸಾರ್ವಜನಿಕ ಪಾಲಕರಿಗೂ ಮೋಸ ಮಾಡಿದ್ದರೂ ನಿಯಂತ್ರಿಸಬೇಕಾದ ಡಿಸ್ಟಿಕ್ ಲೆವೆಲ್ ಎಜುಕೇಶನ್ ರೆಗ್ಯೂಲೇಟರ್ ಅಥಾರಿಟಿ ಸಮಿತಿಯು ಜಿಲ್ಲೆಯಲ್ಲಿ ನಿಷ್ಕೃಯಗೊಂಡಿದೆ. ಉದಾಹರಣೆಗೆ ೨೮ ಆಗಷ್ಟ್ ೨೦೧೩ ರಂದು ನಗರದ ಟ್ರಿನಿಟಿ ಪಬ್ಲಿಕ್ ಸ್ಕೂಲ್ ಆರ್.ಟಿ.ಇ. ನಿಯಮಗಳನ್ನು ಊಲ್ಲಂಘನೆ ಮಾಡಿ ಚಿಕ್ಕಚಿಕ್ಕ ಮಕ್ಕಳಿಗೂ ಪ್ರವೇಶ ಪರೀಕ್ಷೆ ನಡೆಸಿದ್ದು ಮತ್ತು ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವುದನ್ನು ಎಸ್.ಎಫ್.ಐ ಕಾರ್ಯಕರ್ತರು ಹಾಗೂ ಪಾಲಕರು ಪತ್ತೆ ಹಚ್ಚಿತ್ತು ಮತ್ತು ಈ ಬಗ್ಗೆ ಎಲ್ಲಾ ಮಾದ್ಯಮಗಳಲ್ಲೂ ಹಾಗೂ ದೃಷ್ಯಮಾದ್ಯಮದಲ್ಲೂ ಸುದ್ದಿ ಬಿತ್ತರವಾಗಿತ್ತು. ಈ ಬಗ್ಗೆ ಲಿಖಿತವಾಗಿ ದಾಖಲೆಗಳ ಸಹಿತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ಕೊಟ್ಟು ೦೧ ವರ್ಷಕಳೆದರೂ ಮೌನ ವಹಿಸಿರುವುದೇಕೆ? ಈಲ್ಲೆಯ ಕೊಪ್ಪಳ ಗಂಗಾವತಿ ತಾಲ್ಲೂಕಿನಲ್ಲಿ ಬೇಬಿ ಕ್ಲಾಸ್ ಎಲ್.ಕೆಜಿ , ಯು.ಕೆಜಿ ಮಕ್ಕಳಿಗೂ ೩೦,೦೦೦ ರೂಗಳಿಂದ ಸುಮಾರು ೭೦,೦೦೦ ಸಾವಿರ ರೂಗಳವರೆಗೂ ಹಗಲು ದರೋಡೆ ಮಾಡಿದರೂ ಜಿಲ್ಲಾಧಿಕಾರಿಗಳ  ಅಧ್ಯಕ್ಷತೆಯಲ್ಲಿರುವ ಖಾಸಗಿ ಶಾಲೆಗಳ ಡೋನೇಷನ್ ಹಾವಳಿ ನಿಯಂತ್ರಣ ಸಮಿತಿ ಸಭೆ ಸೇರಲಾರದೆ ಪರೋಕ್ಷವಾಗಿ ಖಾಸಗಿ ಶಾಲೆಗಳ ಪರವಾಗಿದೆಯೇ?
ಜಿಲ್ಲೆಯಲ್ಲಿರುವ ಪದವಿ ಪೂರ್ವ ಮತ್ತು ಪದವಿ ಹಾಗೂ ವೃತ್ತಿಪರ ಕಾಲೇಜುಗಳು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ನಿಗಧಿಪಡಿಸಿದ ಶುಲ್ಕಕ್ಕಿಂತ ೦೩ ಪಟ್ಟು ಶುಲ್ಕ ವಸೂಲಿ ಮಾಡಿದರೂ ಸಂಭಂದಿಸದ ಅಧಿಕಾರಿಗಳು ಪರೋಕ್ಷವಾಗಿ ಸಹಕಾರ ಮಾಡುವುದರ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟು ಶಿಕ್ಷಣವನ್ನು ಖಾಸಗೀಕರಣಗೊಳಿಸಿ ವ್ಯಾಪಾರೀಕರಣ ಮಾಡುತಿದ್ದಾರೆ. ಈಗಲಾದರೂ ಶಿಕ್ಷಣ ಸಚಿವರು ಎಚ್ಚೆತ್ತು ಜಿಲ್ಲೆಯತ್ತ ಧಾವಿಸುವರೇ? 
ಪಠ್ಯಪುಸ್ತಕ ಕಳಪೆ ಮುದ್ರಣ : ರಾಜ್ಯ ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನೀಡಿರುವ ಉಚಿತ ಪುಸ್ತಕಗಳು ಕಳಪೆ ಮುದ್ರಣದಿಂದ ಕೂಡಿದ್ದು ಪುಸ್ತಕದಲ್ಲಿ ನಮೂದಾದ ಅಕ್ಷರಗಳನ್ನು ವಿದ್ಯಾರ್ಥಿಗಳು ರಬ್ಬರನಿಂದ ಅಳಿಸಿದಲ್ಲಿ ಅಳಿಸುವಷ್ಟು ತೀರಾ ಕಳಪೆ ಗುಣಮಟ್ಟದ ಮುದ್ರಣಗೊಂಡಿದ್ದು ಪೇಪರ್ ಕೂಡಾ ಹಾಳೆಯನ್ನು ತಿರಿವಿ ಹಾಕುವಲ್ಲೇ ಹರಿದು ಹೋಗುತ್ತಿವೆ. ಇದು ವಿದ್ಯಾರ್ಥಿಗಳಿಗೆ ಸರ್ಕಾರ ಪರೋಕ್ಷವಾಗಿ ಅನ್ಯಾವೆಸಗಿದಂತಿದೆ. ಸರ್ಕಾರ ಮುದ್ರಣಕ್ಕಾಗಿ ಖಾಸಗಿ ಕಂಪನಿಯೊಂದಕ್ಕೆ ಟೆಂಡರ್ ನೀಡಿರುವುದು ಮತ್ತು ಈ ಕಳಪೆ ಮುದ್ರಣದ ಬಗ್ಗೆ ಮೌನವಹಿಸಿರುವುದು ಸೂಕ್ಷ್ಮವಾಗಿ ಗಮನಿಸಿದಲ್ಲಿ ಶಿಕ್ಷಣ ಸಚಿವರು ಹಾಗೂ ಸರ್ಕಾರವು ಇದರಲ್ಲಿ ಶಾಮೀಲಾಗಿರಬಹುದೇನೊ ಎಂಬಂತಿದೆ ಈ ಕೂಡಲೆ ಸರ್ಕಾರ ಈ ಖಾಸಗಿ ಮುದ್ರಣ ಕಂಪನಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.  
ವಿದ್ಯಾರ್ಥಿ ಚಳುವಳಿಯೇ ಉತ್ತರ : ಹೀಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇವಾ ಕ್ಷೇತ್ರವಾದ ಶಿಕ್ಷಣವನ್ನು ಕಡೆಗಣಿಸಿ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದೀಕರಣ ಮಾಡಲು ಹೊರಟಿರುವ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ನಾವೆಲ್ಲರೂ ಶಿಕ್ಷಣ ವಿರೋಧಿ ನೀತಿಗಳ ವಿರುದ್ದ ಎಚ್ಚೆತ್ತು ಪ್ರತಿಭಟಿಸಬೇಕಿದೆ. ಆದ್ದರಿಂದ  ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕರ್ನಾಟಕ ರಾಜ್ಯ ಸಮಿತಿ ಹಾಗೂ ಕೊಪ್ಪಳ ಜಿಲ್ಲಾ ಸಮಿತಿಯು ೧೦ ಸೆಪ್ಟೆಂಬರ ೨೦೧೪ ರಂದು ಜಿಲ್ಲಾ ಹಾಗೂ ರಾಜ್ಯದ್ಯಂತ ಶಾಲಾ ಕಾಲೇಜು ವಿಶ್ವವಿದ್ಯಾಲಯ ತರಗತಿಗಳನ್ನು  ಬಹಿಷ್ಕರಿಸಿ ಬಂದ್ ಮಾಡುವುದರ  ಮುಖಾಂತರ ಮನವಿ ಪತ್ರ ಸಲ್ಲಿಸುತಿದ್ದೇವೆ. 
ಬೇಡಿಕೆಗಳು 
೧. ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ೩೦% ಮತ್ತು ಕೇಂದ್ರ ಸರ್ಕಾರ ೧೦% ಮತ್ತು ಜಿಡಿಪಿಯಲ್ಲಿ ೦೬% ಮೀಸಲಿಡಲು ಒತ್ತಾಯಿಸಿ.
೨. ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಕ್ಕಾಗಿ ಹಾಗೂ ಖಾಲಿ ಇರುವ ಶಿಕ್ಷಕ ಉಪನ್ಯಾಸಕರ ಭೋಧಕೇತರ ಹುದ್ದೆಗಳ ನೇಮಕಾತಿಗಾಗಿ 
೩. ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ೩೫೦೦ ಕ್ಕೆ ಹೆಚ್ಚಿಸಿ ಸ್ವಂತ ಕಟ್ಟಡ,ಗ್ರಂಥಾಲಯ,ಹಾಸಿಗೆ ಹೊದಿಕೆ, ಆಟದ ಸಾಮಾಗ್ರಿಗಳು ಹಾಗೂ ಮಹಿಳಾ ಹಾಸ್ಟೆಲ್‌ಗಳಿಗೆ ಮಹಿಳಾ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ ಸೂಕ್ತ ಭದ್ರತಾ ಸಿಬ್ಬಂದಿ, ಸ್ಟಾಫ್ ನರ್ಸ ಒದಗಿಸಲು 
೪. ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಾಲಾ ಕಾಲೇಜುಗಳಲ್ಲಿ ಎ.ಬಿ.ಸಿ. ಸೆಕ್ಷನ್ ಮಾಡಿ ಉಪ್ನಯಾಸಕರನ್ನು ನೇಮಕ ಮಾಡಿ ಅಗತ್ಯ ಹಾಸ್ಟೆಲ್‌ಗಳನ್ನು ಪ್ರಾರಂಭಿಸಿ 
೫. ಫ್ರೌಡಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡಿದ ಪಠ್ಯಪುಸ್ತಕಗಳು ಕಳಪೆ ಮುದ್ರಣದಿಂದ ಕೂಡಿದ್ದು ಮುದ್ರಣ ಕಂಪನಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಆಗ್ರಹಿಸಿ, 
೬. ಒ.ಬಿ.ಸಿ ವಿದ್ಯಾರ್ಥಿಗಳು ಕಟ್ಟಿರುವ ಶುಲ್ಕ ವಿನಾಯ್ತಿ ಹಣ ವಾಪಾಸಾತಿಗೆ ಆಗ್ರಹಿಸಿ 
೭. ಬಾಕಿ ಇರುವ ವಿದ್ಯಾರ್ಥಿ ವೇತನ ಬಿಡುಗಡೆಗಾಗಿ ಶೈಕ್ಷಣ ಅವಧಿ ಮುಗಿಯುವುದರೊಳಗೆ ವಿದ್ಯಾರ್ಥಿವೇತನ ಬಿಡುಗಡೆಗೆ ಒತ್ತಾಯಿಸಿ,
೮. ಖಾಸಗಿ ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸಿ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಕರ‍್ಯಗಳನ್ನು ಒದಗಿಸಿ ಹಣ ಬಿಡುಗಡೆ ಮಾಡಿ 
೯. ಹದಿನೈದು ಸಂಖ್ಯೆಗಳಿಗಿಂತ ಕಡಿಮೆ ಇರುವ ಪದವಿ ಕೋರ್ಸುಗಳ ವಿದ್ಯಾರ್ಥಿಗಳನ್ನು ಇನ್ನೊಂದು ಪದವಿ ಕಾಲೇಜಿಗೆ ವಿಲೀನಗೊಳಿಸುವ ಆದೇಶವನ್ನು ಈ ಕೂಡಲೆ ಹಿಂದೆಗೆದುಕೊಳ್ಳಬೇಕು.
(ಅಮರೇಶ ಕಡಗದ) (ಬಾಳಪ್ಪ ಹುಲಿಹೈದರ್)
   ಜಿಲ್ಲಾಧ್ಯಕ್ಷರು  ಜಿಲ್ಲಾ ಕಾರ್ಯದರ್ಶಿ

 ದುರುಗೇಶ್ ಡಗ್ಗಿ ವಿರೇಶ್ ಕುದುರಿ ಮೋತಿ      ಮೇಘನಾ              ಉಮೇಶ್ ರಾಠೋಡ್ 
ಜಿಲ್ಲಾ ಉಪಾದ್ಯಕ್ಷರು       ತಾಲ್ಲೂಕು ಕಾರ್ಯದರ್ಶಿ   ತಾಲ್ಲೂಕು ಉಪಾದ್ಯಕ್ಷರು     ತಾಲ್ಲೂಕು ಸಹಕಾರ್ಯದರ್ಶಿ 
Please follow and like us:
error

Leave a Reply

error: Content is protected !!