ಹೊಸ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ – ಶ್ರೀರಾಮುಲು

ಬೆಂಗಳೂರು:ಬಳ್ಳಾರಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಭರ್ಜರಿ ಜಯಭೇರಿ ಬಾರಿಸಿರುವುದನ್ನು ಕಂಡು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ನಗರದ ನಾರಾಯಣ ಆಯುರ್ವೇದ ಕೇಂದ್ರ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ದೇವೇ ಗೌಡರು ಬಳ್ಳಾರಿ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಶ್ರೀರಾಮುಲು ಅವರ ಜಯ ಜನತೆ ಅವರಿಗೆ ನೀಡಿದ ತೀರ್ಪು.ಕೊಪ್ಪಳ ಉಪ ಚುನಾವಣೆಯಲ್ಲಿ ಜೆಡಿ‌ಎಸ್ ಗೆ ಆದ ಕಹಿ ಅನುಭವದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ.
ಶ್ರೀರಾಮುಲು ಅವರಿಗೆ ಬೆಂಬಲ ನೀಡಿದ ವಿಷಯ ಅದು ಪಕ್ಷದ ರಾಜ್ಯಾಧ್ಯಕ್ಷ(ಎಚ್ ಡಿ ಕುಮಾರಸ್ವಾಮಿ) ಹಾಗೂ ಕಾರ್ಯಕರ್ತರ ನಿರ್ಣಯ. ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಜೆಡಿ‌ಎಸ್ ಪಕ್ಷ ರಾಜ್ಯಾದ್ಯಂತ ಹೋರಾಟ ಮುಂದುವರೆಸುತ್ತದೆ ಎಂದು ದೇವೇಗೌಡರು ಹೇಳಿದರು.
ಬಳ್ಳಾರಿ: `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ನಾನು ಎಲ್ಲ ವರ್ಗಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಪ್ರಾದೇಶಿಕ ಪಕ್ಷ ಹುಟ್ಟುಹಾಕುತ್ತೇನೆ` ಇದು ಬಳ್ಳಾರಿಯ ಉಪಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಪ್ರತಿಕ್ರಿಯೆ.
ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಈ ಗೆಲುವು ನನ್ನದಲ್ಲ, ಕರ್ನಾಟಕ ಹಾಗೂ ಬಳ್ಳಾರಿ ಜನರದ್ದು ಹಾಗೂ ಸ್ವಾಭಿಮಾನದ್ದು ಇದನ್ನು ಮತದಾರ ದೇವರುಗಳ ಪಾದಗಳಿಗೆ ಅರ್ಪಿಸುತ್ತೇನೆ` ಎಂದರು.
`ಸ್ವಾಭಿಮಾನಕ್ಕೆ ಧಕ್ಕೆ ಬಂದು ರಾಜಿನಾಮೆ ನೀಡಿ ಜನರ ಬಳಿಗೆ ಹೋದ ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ರಾಜ್ಯ ಸರ್ಕಾರದ ಇಡೀ ಸಚಿವ ಸಂಪುಟವೇ ಬಳ್ಳಾರಿಗೆ ಬಂದು ಬೀಡು ಬಿಟ್ಟು ಪ್ರಚಾರ ನಡೆಸಿತು. ಆದರೆ ಭಗವಂತ ಮಾತ್ರ ಸತ್ಯ ಮತ್ತು ಧರ್ಮಕ್ಕೆ ಗೆಲುವು ನೀಡಿದ` ಎಂದು ಹೇಳಿದರು.
`ನಾನು ಮತ್ತು ನನ್ನ ಸ್ನೇಹಿತ ಜನಾರ್ದನ ರೆಡ್ಡಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಳಿಲು ಸೇವೆ ಸಲ್ಲಿಸಿದ್ದೇವೆ. ಆದರೆ ಅಧಿಕಾರ ಬಂದ ನಂತರ ನಮ್ಮ ಬೆನ್ನಿಗೆ ಚೂರಿ ಹಾಕಲಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಜನರು ಬಿಜೆಪಿಯನ್ನು ಮರೆಯುವ ವಾತಾವರಣ ಮೂಡಲಿದೆ` ಎಂದರು.
`ಹಿಂದುಳಿದ ಜಾತಿಯಲ್ಲಿ ಹುಟ್ಟಿದ ನನ್ನನ್ನು ರಾಜಕೀಯವಾಗಿ ತುಳಿಯುವ ಷಡ್ಯಂತ್ರದಿಂದ ಘಟಾನುಘಟಿಗಳು ಬಳ್ಳಾರಿಗೆ ಬಂದು ಪ್ರಚಾರ ನಡೆಸಿದರು. ಆದರೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾದವು` ಎಂದು ಹೇಳಿದರು.
ತಮ್ಮ ಮುಂದಿನ ರಾಜಕೀಯ ನಡೆ ಏನು ಎನ್ನುವ ಪ್ರಶ್ನೆಗೆ `ಸ್ನೇಹಿತ ಜನಾರ್ದನ ರೆಡ್ಡಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಹಾಗೂ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಹೊಸ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ` ಎಂದರು.
ಇದೇ ವೇಳೆ ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ವಂದನೆ ಸಲ್ಲಿಸುತ್ತೇನೆ ಎಂದು ಅವರು ನುಡಿದರು.
ಶ್ರೀರಾಮುಲು ಅಬ್ಬರಕ್ಕೆ ಕೈ-ಬಿಜೆಪಿ ಧೂಳೀಪಟ
ಭಾರತೀಯ ಜನತಾ ಪಕ್ಷಕ್ಕೆ ಸೆಡ್ಡು ಹೊಡೆದು ಸ್ವಾಭಿಮಾನಿ ಹೆಸರಿನಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಉಪ ಚುನಾವಣಾ ಅಖಾಡಕ್ಕಿಳಿದಿದ್ದ ಶ್ರೀರಾಮುಲು 46,790ಮತಗಳ ಭರ್ಜರಿ ಅಂತರಿಂದ ಜಯಭೇರಿ ಬಾರಿಸಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಗಾದಿ ಲಿಂಗಪ್ಪ ಠೇವಣಿ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದರೆ,ಕಾಂಗ್ರೆಸ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದೆ.
ಬಿಜೆಪಿಗೆ ಸೆಡ್ಡು ಹೊಡೆದು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದ ಶ್ರೀರಾಮುಲುವನ್ನು ಮಣಿಸಲೇಬೇಕೆಂದು ಹಾಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ರಾಜ್ಯಸಭಾ ಸದಸ್ಯೆ ಹೇಮಾ ಮಾಲಿನಿ ಅಬ್ಬರದ ಪ್ರಚಾರ ಕೈಗೊಂಡು ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಅದೇ ರೀತಿ ಕಾಂಗ್ರೆಸ್‌ಗೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು,ಈ ಬಾರಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮತದಾರ ಬಿಜೆಪಿ ಹಾಗೂ ಶ್ರೀರಾಮುಲುವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.ಆದರೆ ಭಾನುವಾರ ಬೆಳಿಗ್ಗೆ ಆರಂಭಗೊಂಡಿದ್ದ ಮತ ಎಣಿಕೆಯ ಮೊದಲೇ ಸುತ್ತಿನಿಂದಲೇ ಶ್ರೀರಾಮುಲು ಮುನ್ನಡೆ ಕಾಯ್ದುಕೊಂಡು ಭಾರೀ ಮತಗಳ ಅಂತರದಿಂದ ವಿಜಯದ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ 1,23,369 ಮತ ಚಲಾವಣೆಯಾಗಿತ್ತು. ಇದರಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು 74,527ಮತ,ಕಾಂಗ್ರೆಸ್‌ನ ರಾಮ ಪ್ರಸಾದ್ 27,737 ಮತ ಹಾಗೂ ಬಿಜೆಪಿಯ ಗಾದಿ ಲಿಂಗಪ್ಪ 17,366 ಮತ ಪಡೆದಿದ್ದರು.
ಬಿಜೆಪಿಯ ಗಾದಿ ಲಿಂಗಪ್ಪ ಠೇವಣಿ (ಠೇವಣಿ ಉಳಿಸಿಕೊಳ್ಳಲು 22,692ಮತ ಪಡೆಯಬೇಕು) ಕಳೆದುಕೊಳ್ಳುವ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.
ಶ್ರೀರಾಮುಲು ಬೆಂಬಲಿಗರ ವಿಜಯೋತ್ಸವ:
ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಜಯಭೇರಿ ಬಾರಿಸಿದ ಬೆನ್ನಲ್ಲೇ ಅವರ ನಿವಾಸದಲ್ಲಿ ಕುಟುಂಬಿಕರು,ಆಪ್ತರು ವಿಜಯೋತ್ಸವ ಸಂಭ್ರಮದಲ್ಲಿ ತೊಡಗಿಕೊಂಡಿದ್ದರೆ,ಮತ್ತೊಂದೆಡೆ ಶ್ರೀರಾಮುಲು ಬೆಂಬಲಿಗರು ಪಟಾಕಿ ಸಿಡಿಸಿ,ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.
ಶಿಳ್ಳೆ ಹಾಕಿ ಸಂಭ್ರಮಿಸಿದ ಶಾಂತಾ
ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ರೆಡ್ಡಿಯ ಬಂಟ,ತಮ್ಮ ನೆಚ್ಚಿನ ನಾಯಕ ಶ್ರೀರಾಮುಲು ಅವರು ಗೆಲುವಿನ ನಾಗಾಲೋಟ ಕಂಡು ಅವರ ಅಭಿಮಾನಿಗಳು ಸಂತದ ಅಲೆಯಲ್ಲಿ ತೇಲಾಡುತ್ತಿದ್ದಾರೆ.ಗಣಿ-ಗಡಿ ನಾಡಾದ ಬಳ್ಳಾರಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜನ ಗೆಲುವಿನ ಕೇಕೆ ಹಾಕುತ್ತಿದ್ದಾರೆ.
ಸಂಸದೆ ಶಾಂತಾ ಅವರು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕುತ್ತಾ,ಒಂದೇ ಸಮನೆ ಶಿಳ್ಳೆ ಹಾಕಿ ಸಂಭ್ರಮಿಸಿದರು.ಬಿಜೆಪಿಯ ಅಪಾರ ನಿರೀಕ್ಷೆಗೆ ತಣ್ಣೀರೆರೆಚಿರುವ ಬಳ್ಳಾರಿಯ ಮತದಾರ ಪ್ರಭುಗಳು ಬಳ್ಳಾರಿಯಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಿದ್ದಾರೆ.ಬಿಜೆಪಿಯ ಗಾದಿ ಲಿಂಗಪ್ಪಗೆ ಠೇವಣಿ ನಷ್ಟ ಕಟ್ಟಿ ಕೊಟ್ಟಿದ್ದಾರೆ.ಆಶ್ಚರ್ಯಕರವಾಗಿ ಕಾಂಗ್ರೆಸ್ ಅಭ್ಯರ್ಥಿ ರಾಮಪ್ರಸಾದ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಸಪ್ಪಳ ಬಳ್ಳಾರಿಗೇ ಸೀಮಿತವಾಗಿಲ್ಲ.ಉತ್ತರ ಕರ್ನಾಟಕ, ಗದಗ, ರಾಯಚೂರು, ಸಿಂಧನೂರು, ಕೊಪ್ಪಳದಲ್ಲೂ ಜೋರಾಗಿ ಕೇಳಿಬರುತ್ತಿದೆ.ಶ್ರೀರಾಮುಲು ಅಪ್ಪಟ ಜನನಾಯಕ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
ಚಂಚಲಗೂಡ ಜೈಲಿನಲ್ಲಿ ಮುಗುಳ್ನಕ್ಕ ಜನಾರ್ದನ ರೆಡ್ಡಿ
ಅಕ್ರಮ ಗಣಿ ಆರೋಪದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯ ಫಲಿತಾಂಶವನ್ನು ದೂರದ ಚಂಚಲಗೂಡ ಜೈಲಿನಲ್ಲಿ ಟಿವಿ ವೀಕ್ಷಿಸಿ, ಆನಂದಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಸಂಬಂಧ ನಿನ್ನೆ (ಶನಿವಾರ)ಸಿಬಿ‌ಐ ಅಧಿಕಾರಿಗಳು ಕೋರ್ಟಿನಲ್ಲಿ ಆರೋಪಪಟ್ಟಿ ದಾಖಲಿಸಿದಾಗ ಒಂದಷ್ಟು ಕಳೆಗುಂದಿದ್ದ ಜನಾ ರೆಡ್ಡಿ ಇಂದು ಬಳ್ಳಾರಿಯಲ್ಲಿ ತಮ್ಮ ರಾಜಕೀಯ ಶಿಷ್ಯ ಶ್ರೀರಾಮುಲು ಗೆಲುವಿನ ನಗೆ ಬೀರುತ್ತಿರುವುದು ಸಾಕಷ್ಟು ಸಮಾಧಾನ ತಂದಿದೆ.
ಇನ್ನು,ಆಂಧ್ರದ ಜೈಲಿನಲ್ಲಿದ್ದುಕೊಂಡೇ ಕರ್ನಾಟಕದ ರಾಜಕೀಯದಲ್ಲಿ ಹೇಗೆ ಹಿಡಿತ ಸಾಧಿಸಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಾಗೆ ನೋಡಿದರೆ ರೆಡ್ಡಿ ಜೈಲಿನಲ್ಲಿರುವುದೇ ಶ್ರೀರಾಮುಲು ಪರ ಕೆಲಸ ಮಾಡಿದ್ದು,ಮತದಾರರು ರೆಡ್ಡಿ ಅನುಕಂಪದ ಅಲೆಯಲ್ಲಿ ಶ್ರೀರಾಮುಲುಗೆ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದಾರೆ.
ಶ್ರೀರಾಮುಲುಗೆ ಪರೋಕ್ಷವಾಗಿ ಜಯ ತಂದುಕೊಟ್ಟ ಯಡ್ಡಿ
ಶ್ರೀರಾಮುಲು ಅವರ ಫ್ಯಾನ್ ಗಾಳಿ ಕೆಳಗೆ ಬಿಜೆಪಿ ತಣ್ಣನೆ ಮಲಗಿಕೊಂಡಿದ್ದು ಏಕೆ ಎಂಬ ನಿರೀಕ್ಷಿತ ಪ್ರಶ್ನೆಗೆ ಅನಿರೀಕ್ಷಿತ ಉತ್ತರ ಮತದಾರರಿಂದ ಸಿಕ್ಕಿದೆ.ಶ್ರೀರಾಮುಲು ಗೆಲುವಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ‌ಎಸ್ ಯಡಿಯೂರಪ್ಪ ಅವರು ಪರೋಕ್ಷವಾಗಿ ಕಾರಣ ಎನ್ನಲಾಗಿದೆ.
ಬಿಜೆಪಿ ಪರ ಅಭ್ಯರ್ಥಿ ಗಾದಿ ಲಿಂಗಪ್ಪ ಅವರ ಪರ ಪ್ರಚಾರಕ್ಕೆ ಬರಲು ಮೀನಾಮೇಷ ಎಣಿಸುತ್ತಿದ್ದ ಮಾಜಿ ಸಿ‌ಎಂ ಯಡಿಯೂರಪ್ಪ ಅವರು ಬಳ್ಳಾರಿಗೆ ಕಾಲಿಟ್ಟಿದ್ದೆ ತಡ ಬಿಜೆಪಿ ಗೆಲುವಿನ ಆಸೆ ಚಿಗುರೊಡೆದಿತ್ತು.
ಆದರೆ, ಆದದ್ದೇ ಬೇರೆ. ಪಕ್ಷದ ಶಿಸ್ತಿನ ಸಿಪಾಯಿ ಯಡಿಯೂರಪ್ಪ ಅವರು ಪ್ರಚಾರಕ್ಕೆ ಹೋದ ಕಡೆ ಎಲ್ಲಾ ಗಾಲಿ ಲಿಂಗಪ್ಪ ಅವರಿಗೆ ನೇರ ಮತ ಹಾಕಿ ಎಂದು ಹೇಳದೆ ತಮ್ಮ ಅಧಿಕಾರ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯದ ಬಗ್ಗೆ ಸ್ವಯಂ ಪ್ರಶಂಸೆ ಮಾಡಿಕೊಳ್ಳತೊಡಗಿದರು.
“ಅಣ್ಣ ತಮ್ಮಂದಿರೇ ಅಕ್ಕ ತಂಗಿಯರೇ ನನ್ನ ತಾಯಂದಿರೇ ದಯವಿಟ್ಟು ಬಳ್ಳಾರಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ ನೀಡಿ” ಎಂದು ಹೇಳಿದ ಯಡಿಯೂರಪ್ಪ ಅವರ ಮಾತನ್ನು ನಂಬಿದ ಮತದಾರ ಯಡಿಯೂರಪ್ಪ ಅವರು ಹೇಳಿದಂತೆ ನಡೆದುಕೊಂಡರು.
ಯಡಿಯೂರಪ್ಪ ಅವರು ಸಿ‌ಎಂ ಆಗಿದ್ದ ಕಾಲದಲ್ಲಿ ರಿಪಬ್ಲಿಕ್ ಆಫ್ ಬಳ್ಳಾರಿ ನೋಡಿಕೊಂಡ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಮಾಡಿರುವ ಅಲ್ಪಸ್ವಲ್ಪ ಅಭಿವೃದ್ಧಿಯನ್ನೇ ಮೆಚ್ಚಿ ಮತದಾರ ವೋಟ್ ಮಾಡಿದ್ದಾನೆ.
ಮತ ವಿಭಜನೆ ಮಾಡಲು ಹೋದ ಬಿಜೆಪಿ ತಕ್ಕ ಪಾಠ ಕಲಿತಿದೆ.ಕನ್ ಫ್ಯೂಸ್ ಆಗಿದ್ದ ಮತದಾರನಿಗೆ ಯಡಿಯೂರಪ್ಪ ಅವರ ಪ್ರಚಾರ ವೈಖರಿಯಿಂದ ಬಂದ ಜ್ಞಾನ ಶ್ರೀರಾಮುಲು ಫ್ಯಾನ್ ಕಡೆಗೆ ತಿರುಗಿದೆ.
ಶ್ರೀರಾಮುಲುಗೆ ಗೆಲುವು ತಂದು ಕೊಟ್ಟ ಜಮೀರ ಅಹ್ಮದ್ :ಈ ಗೆಲುವು ನನ್ನದಲ್ಲ. ರಾಜ್ಯದ ಜನರ ಗೆಲುವಾಗಿದೆ ಎನ್ನುತ್ತಾ ಬಂದಿರುವ ಶ್ರೀರಾಮುಲು ಮತ್ತೆ ಜನನಾಯಕನಾಗಿ ಮೆರೆದಿದ್ದಾರೆ. ಬಿಸಿಲಲ್ಲಿ ಬೆಂದಿರುವ ಬಳ್ಳಾರಿ ಜನತೆ ಕಮಲ, ಕೈ ನೆರವಿಗಿಂತ ಫ್ಯಾನ್ ಗಾಳಿಗೆ ಬೇಕು ಎಂದಿರುವುದರಲ್ಲಿ ಅಚ್ಚರಿಯೇನಿಲ್ಲ.
ಆದರೆ,ಶ್ರೀರಾಮುಲು ಅವರಿಗೆ ಭಾರಿ ಅಂತರದ ಗೆಲುವು ದೊರಕಿಸಿಕೊಡುವಲ್ಲಿ ಜೆಡಿ‌ಎಸ್ ಶಾಸಕ ಜಮೀರ್ ಅಹಮದ್ ಮಹತ್ವದ ಪಾತ್ರ ವಹಿಸಿದ್ದಾರೆ.ಬಳ್ಳಾರಿ ಮತ ಸಮರದಲ್ಲಿ ಕೊನೆ ಗಳಿಗೆಯಲ್ಲಿ ಕಾಣಿಸಿಕೊಂಡ ಜಮೀರ್,ಶ್ರೀರಾಮುಲು ಅವರಿಗೆ ಹೆಚ್ಚಿನ ಮುಸ್ಲಿಮ್ ಮತಗಳು ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಮುಸ್ಲಿಂ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡದೆ ಕಡೆಗಾಣಿಸಿದ ಬಿಜೆಪಿ ಸರ್ಕಾರ ತಕ್ಕ ಬೆಲೆ ತೆತ್ತಿದೆ.
ಫ್ಯಾನ್ ಕೈ ಹಿಡಿದ ಮತದಾರ: ಬಳ್ಳಾರಿಯಲ್ಲಿ ಹಿಂದುಳಿದ ವರ್ಗದ ಮತಗಳೇ ನಿರ್ಣಯಕ ಎಂಬ ಸತ್ಯ ಗೊತ್ತಿದ್ದ ಬಿಜೆಪಿ,ಕಾಂಗ್ರೆಸ್ ಪಕ್ಷಗಳು,ಶ್ರೀರಾಮುಲುಗೆ ಬೀಳಬಹುದಾದ ಮತಗಳನ್ನು ವಿಭಜನೆ ಮಾಡುವ ತಂತ್ರ ಮಾಡಲು ಹೋಗಿ ಸೋಲು ಕಾಣಬೇಕಾಯಿತು.
ಲಿಂಗಾಯತ, ಬಲಿಜ, ಬಂಜಾರ, ಬೇಡ, ಮುಸ್ಲೀಮ್ ಮತ ಸೆಳೆಯಲು ಬಿಜೆಪಿ ಹವಣಿಸಿತು, ಯಡಿಯೂರಪ್ಪ ಅವರನ್ನು ಕರೆತಂದು ಲಿಂಗಾಯತ ಮತಗಳನ್ನು ಪಕ್ಕದಲ್ಲಿ ಈಶ್ವರಪ್ಪ ಅವರನ್ನು ನಿಲ್ಲಿಸಿ ಕುಂಬಾರರ ಮತಗಳನ್ನು ಪಡೆಗಳನ್ನು ಹಾಗೂ ಉಳಿದ ಹಿಂದುಳಿದ ವರ್ಗದ ಮತಗಳನ್ನು ಸೆಳೆಯಲು ಬಿಜೆಪಿ ಯತ್ನಿಸಿತ್ತು.ಆದರೆ,ಮುಸ್ಲಿಂ ಮತಗಳನ್ನು ಸೆಳೆಯಲು ಬಿಜೆಪಿ ಬಳಿ ನಾಯಕರೇ ಇರಲಿಲ್ಲ.
ಈ ಅಂಶವನ್ನು ಗಮನಿಸಿದ ಜೆಡಿ‌ಎಸ್ ನ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಕೊನೆ ಗಳಿಗೆಯಲ್ಲಿ ಅಪ್ತ ಜಮೀರ್ ಅವರನ್ನು ಕಳುಹಿಸಿ,ಕೌಲ್ ಬಜಾರ್ ಕ್ಷೇತ್ರದಲ್ಲಿ ಹರಕು ಮುರುಕು ಕನ್ನಡದಲ್ಲಿ ಜಮೀರ್ ಕೈಲಿ ಭಾಷಣ ಮಾಡಿಸಿ,ಶ್ರೀರಾಮುಲುಗೆ ಬೆಂಬಲ ವ್ಯಕ್ತ ಪಡಿಸಿದ್ದು ನಿರ್ಣಾಯಕವಾಗಿಬಿಟ್ಟಿತು. ಶ್ರೀರಾಮುಲುಗೆ ಮುಸ್ಲಿಂ ಮತಗಳು ಭರ್ಜರಿ ಜಯ ತಂದು ಕೊಟ್ಟಿದೆ
ಭಾರತೀಯ ಜನತಾ ಪಕ್ಷಕ್ಕೆ ಸೆಡ್ಡು ಹೊಡೆದು ಸ್ವಾಭಿಮಾನಿ ಹೆಸರಿನಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಉಪ ಚುನಾವಣಾ ಅಖಾಡಕ್ಕಿಳಿದಿದ್ದ ಶ್ರೀರಾಮುಲು 46,790ಮತಗಳ ಭರ್ಜರಿ ಅಂತರಿಂದ ಜಯಭೇರಿ ಬಾರಿಸಿದ್ದಾರೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಗಾದಿ ಲಿಂಗಪ್ಪ ಠೇವಣಿ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದರೆ,ಕಾಂಗ್ರೆಸ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದೆ.
ಬಿಜೆಪಿಗೆ ಸೆಡ್ಡು ಹೊಡೆದು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದ ಶ್ರೀರಾಮುಲುವನ್ನು ಮಣಿಸಲೇಬೇಕೆಂದು ಹಾಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ರಾಜ್ಯಸಭಾ ಸದಸ್ಯೆ ಹೇಮಾ ಮಾಲಿನಿ ಅಬ್ಬರದ ಪ್ರಚಾರ ಕೈಗೊಂಡು ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಅದೇ ರೀತಿ ಕಾಂಗ್ರೆಸ್‌ಗೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು,ಈ ಬಾರಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮತದಾರ ಬಿಜೆಪಿ ಹಾಗೂ ಶ್ರೀರಾಮುಲುವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.ಆದರೆ ಭಾನುವಾರ ಬೆಳಿಗ್ಗೆ ಆರಂಭಗೊಂಡಿದ್ದ ಮತ ಎಣಿಕೆಯ ಮೊದಲೇ ಸುತ್ತಿನಿಂದಲೇ ಶ್ರೀರಾಮುಲು ಮುನ್ನಡೆ ಕಾಯ್ದುಕೊಂಡು ಭಾರೀ ಮತಗಳ ಅಂತರದಿಂದ ವಿಜಯದ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ 1,23,369 ಮತ ಚಲಾವಣೆಯಾಗಿತ್ತು. ಇದರಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು 74,527ಮತ,ಕಾಂಗ್ರೆಸ್‌ನ ರಾಮ ಪ್ರಸಾದ್ 27,737 ಮತ ಹಾಗೂ ಬಿಜೆಪಿಯ ಗಾದಿ ಲಿಂಗಪ್ಪ 17,366 ಮತ ಪಡೆದಿದ್ದರು.
ಬಿಜೆಪಿಯ ಗಾದಿ ಲಿಂಗಪ್ಪ ಠೇವಣಿ (ಠೇವಣಿ ಉಳಿಸಿಕೊಳ್ಳಲು 22,692ಮತ ಪಡೆಯಬೇಕು) ಕಳೆದುಕೊಳ್ಳುವ ಮೂಲಕ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.
ಶ್ರೀರಾಮುಲು ಬೆಂಬಲಿಗರ ವಿಜಯೋತ್ಸವ:
ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಜಯಭೇರಿ ಬಾರಿಸಿದ ಬೆನ್ನಲ್ಲೇ ಅವರ ನಿವಾಸದಲ್ಲಿ ಕುಟುಂಬಿಕರು,ಆಪ್ತರು ವಿಜಯೋತ್ಸವ ಸಂಭ್ರಮದಲ್ಲಿ ತೊಡಗಿಕೊಂಡಿದ್ದರೆ,ಮತ್ತೊಂದೆಡೆ ಶ್ರೀರಾಮುಲು ಬೆಂಬಲಿಗರು ಪಟಾಕಿ ಸಿಡಿಸಿ,ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.
Please follow and like us:
error