ಬಾಲ್ಯ ವಿವಾಹ ತಡೆಗೆ ವಯಸ್ಸಿನ ಪ್ರಮಾಣಪತ್ರ ನೀಡಲು ಕಡಿವಾಣ- ಜಿಲ್ಲಾಧಿಕಾರಿ

ಕೊಪ್ಪಳ ಫೆ. ೦೩ (ಕ.ವಾ): ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಮಾಣ ಹೆಚ್ಚಾಗಿದ್ದು, ಈ ಅನಿಷ್ಟ ಪಿಡುಗನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಧು, ವರರಿಗೆ ನೀಡಲಾಗುವ ವಯಸ್ಸಿನ ಪ್ರಮಾಣ ಪತ್ರವನ್ನು ಸೂಕ್ತ ಪ್ರಾಧಿಕಾರ ಮಾತ್ರ ನೀಡುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು  ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
  ಜಿಲ್ಲೆಯಲ್ಲಿ ಸಾಮೂಹಿಕ ವಿವಾಹಗಳು ಯಥೇಚ್ಚವಾಗಿ ನಡೆಯುತ್ತಿದ್ದು ಈ ಮದುವೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಬಾಲ್ಯವಿವಾಹ ನಿಷೇಧ ಕಾಯ್ದೆ  ೨೦೦೬ ರಂತೆ, ವರನಿಗೆ ೨೧ ವರ್ಷ ಮತ್ತು ವಧುವಿಗೆ ೧೮ ವರ್ಷ ತುಂಬಿದ ಬಳಿಕವಷ್ಟೆ ಮದುವೆಗೆ ಅರ್ಹರೆಂದು ಸೂಚಿಸಿದೆ.  ಸರಿಯಾದ ವಯಸ್ಸಿನ ಪ್ರಮಾಣ ಪತ್ರಗಳಿಂದ ಮಾತ್ರ ಬಾಲ್ಯವಿವಾಹಗಳನ್ನು ತಡೆಯಲು ಸಾಧ್ಯವಿದ್ದು,  ವಧು-ವರರು ವಿವಾಹ ಯೋಗ್ಯ ವಯಸ್ಸಿನವರೆಂದು ಸಾಬೀತುಪಡಿಸಲು ಮುಖ್ಯವಾಗಿ ಜನನ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರವಿಲ್ಲದಿದ್ದಲ್ಲಿ ಶಾಲಾ ದಾಖಲಾತಿ ಪರಿಶೀಲಿಸಿ ಪಡೆಯುವ ವಯಸ್ಸಿನ ಪ್ರಮಾಣ ಪತ್ರ/ ಶಾಲಾ ವರ್ಗಾವಣೆ ಪತ್ರ/ ದೃಢೀಕೃತ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಮಾತ್ರ ಅರ್ಹವಾಗಿರುತ್ತದೆ. ಜನನ ಪ್ರಮಾಣ ಪತ್ರ ಅಥವಾ ಶಾಲೆಯಲ್ಲಿ ದಾಖಲಾತಿ ಇಲ್ಲದವರು ಮದುವೆಗೆ ಒಂದು ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳು, ಕೊಪ್ಪಳ ಇವರಿಗೆ ತಮ್ಮ ಮಗ/ಮಗಳನ್ನು ಶಾಲೆಗೆ ದಾಖಲಿಸಿರುವುದಿಲ ಎಂಬ ಹೇಳಿಕೆಯೊಂದಿಗೆ ಅರ್ಜಿಯನ್ನು ಸಲ್ಲಿಸಿ ಅವರು ಸೂಚಿಸುವ ಸೂಕ್ತ ವೈದ್ಯಕೀಯ ಪ್ರಾಧಿಕಾರಿಯಿಂದ ಮಾತ್ರ ವಯಸ್ಸಿನ ಪ್ರಮಾಣ ಪತ್ರವನ್ನು ಪಡೆಯಬೇಕು.  ಜಿಲ್ಲೆಯ ಯಾವುದೇ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು/ಚುನಾಯಿತ ಪ್ರತಿನಿಧಿಗಳು, ಗ್ರಾಮ ಲೆಕ್ಕಿಗರು ಅಥವಾ ಇತರರು ವಯಸ್ಸಿನ ಪ್ರಮಾಣ ಪತ್ರಗಳನ್ನು ನೀಡುವಂತಿಲ್ಲ.  ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿ, ಬಾಲ್ಯ ವಿವಾಹಕ್ಕೆ ಕಾರಣಕರ್ತರಾಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಚ್ಚರಿಕೆ ನೀಡಿದ್ದಾರೆ.  
Please follow and like us:
error