ತಾ.ಪಂ ಸಾಮಾನ್ಯ ಸಭೆ ಸೆ.೧೯ ಕ್ಕೆ ಮುಂದೂಡಿಕೆ.

ಕೊಪ್ಪಳ ಸೆ.೧೪ (ಕ ವಾ)
ಕೊಪ್ಪಳ ತಾಲೂಕಾ ಪಂಚಾಯತ್‌ನ ಸಾಮಾನ್ಯ ಸಭೆಯನ್ನು ಸೆ.೧೯ ರಂದು ಬೆಳಿಗ್ಗೆ ೧೦.೩೦
ಗಂಟೆಗೆ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
      ತಾ.ಪಂ.
ಸಾಮಾನ್ಯ ಸಭೆಯನ್ನು ಸೆ.೧೦ ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಅನಿವಾರ್ಯ
ಕಾರಣಗಳಿಂದಾಗಿ ಸಭೆಯನ್ನು ಮುಂದೂಡಲಾಗಿದ್ದು, ಸೆ.೧೯ ರಂದು ನಡೆಸಲು ದಿನಾಂಕ
ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಕೊಪ್ಪಳ ತಾಲೂಕಾ ಮಟ್ಟದ ಎಲ್ಲ ಅನುಷ್ಠಾನಾಧಿಕಾರಿಗಳು
ತಮ್ಮ ಇಲಾಖೆಯ ಪ್ರಗತಿ ಮಾಹಿತಿಯೊಂದಿಗೆ ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ಜರುಗುವ ಸಭೆಗೆ
ತಪ್ಪದೇ ಹಾಜರಾಗುವಂತೆ ಹಾಗೂ ತಮ್ಮ ಇಲಾಖೆಯ ಪ್ರಗತಿ ವರದಿಯ ೪೦ ಪ್ರತಿಗಳನ್ನು ಸೆ.೧೫
ರೊಳಗಾಗಿ ಕಾರ್ಯಾಲಯಕ್ಕೆ ಸಲ್ಲಿಸುವಂತೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ
ಟಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.    
ಸೆ.೧೭ ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ.
ಕೊಪ್ಪಳ,
ಸೆ.೧೪ (ಕ ವಾ) ಕೊಪ್ಪಳ ಜಿಲ್ಲಾ ಮಟ್ಟದ ಹೈದ್ರಾಬಾದ್ ಕರ್ನಾಟಕ ವಿಮೋಚನಾ
ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮ ಸೆ.೧೭ ರಂದು ಬೆಳಿಗ್ಗೆ ೦೯
ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
     ಕೊಪ್ಪಳ ಜಿಲ್ಲಾ
ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಧ್ವಜಾರೋಹಣ
ನೆರವೇರಿಸುವರು. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸಮಾರಂಭದ ಅಧ್ಯಕ್ಷತೆ
ವಹಿಸುವರು. ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ,
ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ, ಶರಣಪ್ಪ
ಮಟ್ಟೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ನಗರಾಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಟಿ.ಕೆ.ಅನಿಲ್‌ಕುಮಾರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ ಎಂ.ಮೇಲಿನಮನಿ,
ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ
ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
     ರಾಷ್ಟ್ರ ಧ್ವಜಾರೋಹಣದ ಬಳಿಕ ವಿವಿಧ
ಶಾಲಾ ಮಕ್ಕಳು ಹಾಗೂ ಪೊಲೀಸ್, ಎನ್.ಸಿ.ಸಿ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್,
ಗೃಹ ರಕ್ಷಕದಳಗಳಿಂದ ಪಥಸಂಚಲನ ಹಾಗೂ ಗೌರವ ರಕ್ಷೆ ಸ್ವೀಕಾರ ನಡೆಯಲಿದೆ. ನಂತರ
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹೈದ್ರಾಬಾದ್ ಕರ್ನಾಟಕ ಏಕೀಕರಣಕ್ಕಾಗಿ
ಹೋರಾಡಿದವರಿಗೆ ಗೌರವ ಸನ್ಮಾನ ನಡೆಯಲಿದೆ.
ಯಶಸ್ವಿನಿ ಯೋಜನೆ ಅವಧಿ ಸೆ. ೩೦ ರವರೆಗೆ ವಿಸ್ತರಣೆ.
ಕೊಪ್ಪಳ,
ಸೆ.೧೪ (ಕ ವಾ) ಸಹಕಾರ ಇಲಾಖೆ, ಕೊಪ್ಪಳ, ಇವರಿಂದ ಕರ್ನಾಟಕ ಸರ್ಕಾರದ
ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಸಕ್ತ ಸಾಲಿನ ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ
ಯೋಜನೆಯಡಿ ಸದಸ್ಯತ್ವ ನೊಂದಣಿ ಅಥವಾ ನವೀಕರಣಕ್ಕಾಗಿ ಅವಧಿಯನ್ನು ಸೆ.೩೦ ರವರೆಗೆ
ವಿಸ್ತರಿಸಲಾಗಿದೆ. 
     ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯು
ಸ್ವಯಂನಿಧಿ ಶಸ್ತ್ರ ಚಿಕಿತ್ಸಾ ಯೋಜನೆಯಾಗಿದ್ದು, ಈ ಯೋಜನೆಯಡಿ ಪ್ರಸಕ್ತ ಸಾಲಿಗೆ
ನೋಂದಾಯಿಸಲು ಸರ್ಕಾರವು ಆದೇಶ ಹೊರಡಿಸಿದ್ದು, ಅದರನ್ವಯ ಗ್ರಾಮೀಣ ಸಹಕಾರ ಸಂಘಗಳಲ್ಲಿನ
ಸದಸ್ಯರುಗಳು ವಾರ್ಷಿಕ ವಂತಿಗೆ ರೂ.೨೫೦/- ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ
ಪಂಗಡದ ಸದಸ್ಯರಾಗಿದ್ದಲ್ಲಿ ೫೦ ರೂ.ಗಳನ್ನು ಸಂಘಕ್ಕೆ ಪಾವತಿಸಿ ನೋಂದಾಯಿಸಬಹುದು ಹಾಗೂ
ನವೀಕರಿಸಿಕೊಳ್ಳಬಹುದು.  ನೋಂದಣಿ/ನವೀಕರಣಕ್ಕೆ ಆಗಸ್ಟ್ ೩೧ ಕೊನೆಯ ದಿನಾಂಕವಾಗಿತ್ತು. 
ಇದೀಗ ಸರ್ಕಾರ ನೋಂದಣಿ ಹಾಗೂ ನವೀಕರಣದ ಅವಧಿಯನ್ನು ಸೆ. ೩೦ ರವರೆಗೆ ವಿಸ್ತರಿಸಿದೆ.
    
ಅದೇ ರೀತಿ ಸರ್ಕಾರವು ಪ್ರಸಕ್ತ ಸಾಲಿಗೂ ಯಶಸ್ವಿನಿ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ
ಯೋಜನೆಯನ್ನು ನಗರ ಸಹಕಾರಿಗಳಿಗೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಸದಸ್ಯತ್ವ ಪಡೆಯಲು
ನೊಂದಣಿ ಸಮಯದಲ್ಲಿ ಯಾವುದೇ ಕಾರ್ಯನಿರತ ನಗರ ಪ್ರದೇಶದಲ್ಲಿ ಬರುವ ಸಹಕಾರ ಸಂಘಗಳಲ್ಲಿ
ಸದಸ್ಯತ್ವ ಪಡೆದು ೦೩ ತಿಂಗಳಾಗಿರಬೇಕು. ಹಾಗೂ ವಾರ್ಷಿಕ ವಂತಿಗೆ ೭೧೦ ರೂ.ನಂತೆ ಪ್ರಧಾನ
ಅರ್ಜಿದಾರರು ಮತ್ತು ಅವರ ಕುಟುಂಬದ ಉದ್ದೇಶಿಸಿದ ಪ್ರತಿಯೊಬ್ಬ ಸದಸ್ಯರಿಗೆ ಕಡ್ಡಾಯವಾಗಿ
ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ೧೧೦ ರೂ.ಗಳನ್ನು
ವಂತಿಗೆಯಾಗಿ ಸಂಘಕ್ಕೆ ಪಾವತಿಸಬೇಕು. ಯೋಜನೆಯಡಿ ನವಜಾತ ಶಿಶುವಿನಿಂದ ಹಿಡಿದು ವ್ಯಕ್ತಿಯ
ಜೀವಿತಾವಧಿಯವರೆಗೂ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಒಂದೇ
ಕುಟಂಬದಲ್ಲಿ ಐವರು ಅಥವಾ ಅದಕ್ಕಿಂತ ಹೆಚ್ಚಿಗೆ ಕುಟಂಬ ಸದಸ್ಯರನ್ನು ಯಶಸ್ವಿನಿ
ಸದಸ್ಯರನ್ನಾಗಿ ನೊಂದಾಯಿಸಿದಲ್ಲಿ ಅವರು ಪಾವತಿಸಬೇಕಾದ ವಂತಿಗೆ ಹಣದಲ್ಲಿ ಶೇ. ೧೫ ರಷ್ಟು
ರಿಯಾಯಿತಿ ಪಡೆಯಬಹುದಾಗಿದೆ.
     ಈ ಯೋಜನೆಯಡಿ ಪ್ರಸಕ್ತ ಸಾಲಿಗೆ ಯಶಸ್ವಿನಿ
ಸದಸ್ಯರುಗಳನ್ನು ನೊಂದಾಯಿಸುವ ಅಥವಾ ನವೀಕರಿಸುವ ಕೊನೆಯ ದಿನಾಂಕವನ್ನು ಸೆ.೩೦ ರವರೆಗೆ
ವಿಸ್ತರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ಸಹಕಾರ ಸಂಘಗಳು ಹಾಗೂ ಸಹಕಾರ
ಇಲಾಖಾ ಕಛೇರಿಗಳನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: ೦೮೫೩೯-೨೨೧೧೦೯, ೨೨೧೬೦೧
ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ
ಡಾ.ಉಮೇಶ.ಜಿ ತಿಳಿಸಿದ್ದಾರೆ.

Please follow and like us:
error