ಅಮವಾಸ್ಯೆಯಂದು ಮತ್ತೊಂದು ಜಾತ್ರೆ ನೆನಪಿಸುವಷ್ಟು ಭಕ್ತಜನ

 ಸಂಸ್ಥಾನ ಶ್ರೀಗವಿಮಠದ ಜಾತ್ರೆ ಆರಂಭಗೊಂಡು  ೧೨ ದಿವಸಗಳು ಮುಗಿದರು ಭಕ್ತರಲ್ಲಿ ಹುರುಪು, ಹುಮ್ಮಸ್ಸು, ಉತ್ಸಾಹ ಕುಗ್ಗಿಲ್ಲ. ೧೩ ನೆಯ ದಿನದ ವಿಶೇಷತೆ ಅವರಾತ್ರಿ ಅಮವಾಸ್ಯೆ. ಈ  ದಿನದಂದು ಮತ್ತೊಂದು ಜಾತ್ರೆಯನ್ನು ನೆನಪಿಸುವಷ್ಟು ಲಕ್ಷಾಂತರ ಭಕ್ತ ಜನಸ್ತೋಮವು ಗವಿಮಠದಲ್ಲಿ ಸೇರಿದ್ದರು. ಬೆಳಿಗ್ಗೆಯಿಂದ ವಿವಿಧ ಗ್ರಾಮಗಳಿಂದ  ಹಾಗೂ ನಗರಗಳಿಂದ ಆಗಮಿಸಿದ ಭಕ್ತರು ಗವಿಮಠಕ್ಕೆ ಆಗಮಿಸಿ ಕರ್ತೃ ಗದ್ದೂಗೆಯ ದರ್ಶನ ಪಡೆದು ಕಾಯಿಕರ್ಪೂರ ಸಲ್ಲಿಸಿ ಭಕ್ತಿ ಭಾವ ಮೆರೆದು ಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ದರ್ಶನಾಶಿರ್ವಾದ ಪಡೆಯುತ್ತಿದ್ದ ದೃಶ್ಯ ಗವಿಮಠದಲ್ಲಿ ಕಂಡು ಬರುತ್ತಿತ್ತು.  ಶ್ರೀಗವಿಮಠ ಹಾಗೂ ಜಾತ್ರಾ ಆವರಣದ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಭಕ್ತರ ಮಹಾಪೂರವೇ ಕಂಡುಬಂದಿತು. 
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಜರುಗುತ್ತಿರುವ ಮಹಾದಾಸೋಹದಲ್ಲಿ ಎಂದಿನಂತೆಯೇ ಇಂದು ಕೂಡಾ ಬೆಳಿಗ್ಗೆಯಿಂದಲೂ ಮಹಾದಾಸೋಹ ಆರಂಭಗೊಂಡು ಲಕ್ಷಾಂತರ ಭಕ್ತರು ಪ್ರಸಾದ ಸವಿದರು. ಇಂದಿನ ದಾಸೋಹದಲ್ಲಿ ವಿಶೇಷವಾಗಿ ಗೋಧಿ ಹುಗ್ಗಿ,  ಬದನೆಪಲ್ಲೆ, ಹಿಟ್ಟಿನ ಜುನುಕಾ, ಅನ್ನ, ಸಾಂಬಾರ, ಉಪ್ಪಿನಕಾಯಿ ಚಟ್ನಿ, ಕಡ್ಲಿಚಟ್ನಿ, ನಿಂಬೆಕಾಯಿ ಚಟ್ನಿ, ಭಕ್ತಾಧಿಗಳಿಗೆ ದೊರೆತವು.  

ಇಂದಿನ ದಾಸೋಹದಲ್ಲಿ  ಒಂದೇ ದಿವಸ ೮೦ ಕ್ವಿಂಟಾಲ್‌ಗಿಂತಲೂ ಅಧಿಕ ಅಕ್ಕಿ , ೮೫ ಕ್ವಿಂಟಾಲ್ ಬೆಲ್ಲ , ೪೫ ಕ್ವಿಂಟಾಲ್‌ಗಿಂತಲೂ ಅಧಿಕ ಗೋಧಿ , ೪-೫ ಟ್ರ್ಯಾಕ್ಟರ್ಗಟ್ಟಲೇ ಬದನೆಕಾಯಿ ಹಾಗೂ ತರಕಾರಿ ಬಳಕೆಯಾದವು. ಕೊಪ್ಪಳ, ಮೈನಳ್ಳಿ, ಗುಡ್ಲಾನೂರ, ಹಾದರಮಗ್ಗಿ, ಕವಲೂರು, ಬೇಳುರ, ಮಂಗಳೂರು,ಕಾಟ್ರಳ್ಳಿ ಹಾಗೂ ವಿವಿಧ ಗ್ರಾಮಗಳ ಭಕ್ತರು ಪ್ರಸಾದವನ್ನು  ತಯಾರಿಸುವ ಕಾರ್ಯ ನಿರ್ವಹಿಸಿದರು. ಪ್ರಸಾದ ಬಡಿಸುವ ಕಾರ್ಯವನ್ನು ಶ್ರೀಗವಿಸಿದ್ಧೇಶ್ವರ ಪದವಿ ಹಾಗೂ ಪದವಿಪೂರ್ವ ಕಾಲೇಜು, ಶ್ರೀಗವಿಸಿದ್ಧೇಶ್ವರ ಬಿ.ಇಡಿ ಮತ್ತು ಡಿ.ಇಡಿ ಕಾಲೇಜು, ಶ್ರೀಮತಿ ಶಾರದಮ್ಮಾ ಕೊತಬಾಳ ಕಾಲೇಜುಗಳ ಶಿಕ್ಷಕ, ಶಿಕ್ಷಕೇತರ ವೃಂದ, ವಿದ್ಯಾರ್ಥಿಬಳಗ, ಕನ್ನಡಪರ ಸಂಘಟನೆಗಳು,ಮಹಿಳಾ ಸಂಘಟನೆಗಳು, ಹಾಗೂ ಸಂಘಟನೆಗಳು, ಸ್ವಯಂ ಸೇವಕರು ನೆರವೇರಿಸಿದರು.

Leave a Reply