You are here
Home > Koppal News > ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ನಿರೀಕ್ಷಕರಿಗೆ ಹೆಚ್ಚಿನ ಅಧಿಕಾರ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ನಿರೀಕ್ಷಕರಿಗೆ ಹೆಚ್ಚಿನ ಅಧಿಕಾರ

  ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿಯಂತಹ ಸಾಮಾಜಿಕ ಪಿಡುಗನ್ನು ನಮ್ಮ ರಾಜ್ಯದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರ ಹಲವು ದಿಟ್ಟ ಹೆಜ್ಜೆಗಳನ್ನಿಟ್ಟಿದ್ದು, ಸುಮಾರು ೧೧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳನ್ನು ನಿರೀಕ್ಷಕರನ್ನಾಗಿ ನೇಮಿಸಿ, ಅವರಿಗೆ ಹೆಚ್ಚಿನ ಅಧಿಕಾರ ಹಾಗೂ ಜವಾಬ್ದಾರಿಯನ್ನು ನೀಡಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಸಿಯಪ್ಪ ಅವರು ಹೇಳಿದರು.
  ಜೀತಪದ್ಧತಿ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೊಳಿಸುವ ಕುರಿತು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ರ ಕಲಂ ೧೭ ರಡಿ ನೇಮಕಗೊಂಡ ನಿರೀಕ್ಷಕರುಗಳಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಸರ್ಕಾರ ರಾಜ್ಯವನ್ನು ೨೦೧೨ ರ ಅಂತ್ಯದೊಳಗೆ ಬಾಲಕಾರ್ಮಿಕ ಪದ್ಧತಿ ರಹಿತ ರಾಜ್ಯವನ್ನಾಗಿಸುವ ಗುರಿ ಹೊಂದಿದೆ.  ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯೇ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಕಷ್ಟಸಾಧ್ಯವಾಗಿರುವುದರಿಂದ, ಸರ್ಕಾರ ಈಗಾಗಲೆ ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ, ನಗರಾಭಿವೃದ್ಧಿ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ರೇಷ್ಮೆ, ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ, ಪೊಲೀಸ್ ಇಲಾಖೆ ಸೇರಿದಂತೆ ಒಟ್ಟು ೧೧ ಇಲಾಖೆಗಳ ಅಧಿಕಾರಿಗಳು,   ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡಂತೆ ಇತರೆ ಸಿಬ್ಬಂದಿಗಳನ್ನು ಬಾಲಕಾರ್ಮಿಕ ಕಾಯ್ದೆ ೧೭ ರ ಪ್ರಕಾರ ನಿರೀಕ್ಷಕರನ್ನಾಗಿ ನೇಮಿಸಿದೆ.  ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಕಾರ್ಯ ಯಶಸ್ವಿಗೊಳಿಸಲು ಬಾಲಕಾರ್ಮಿಕ ನಿರೀಕ್ಷಕರ ಸಾಮರ್ಥ್ಯ ಅಭಿವೃದ್ಧಿ ಪಡಿಸಬೇಕಾಗಿದೆ.  ಈ ನಿಟ್ಟಿನಲ್ಲಿ ನಿರೀಕ್ಷಕರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿದೆ.  ಯಾವುದೇ ಕ್ಷೇತ್ರದಲ್ಲಿ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು  ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಸಿಯಪ್ಪ ಅವರು ಹೇಳಿದರು.
  ಕಾರ್ಯಾಗಾರದ ಅಂಗವಾಗಿ ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ ಅವರು ಬಾಲಕಾರ್ಮಿಕ ಕಾಯ್ದೆ ಹಾಗೂ ಪುನರ್ ವಸತಿ ಮತ್ತು ಶಿಕ್ಷಣ ಕುರಿತು, ಜಿಲ್ಲಾ ಕಾರ್ಮಿಕ ಅಧಿಕಾರಿ ಮಸಿಯಪ್ಪ- ಬಾಲಕಾರ್ಮಿಕರ ಬಗ್ಗೆ ಸರ್ಕಾರದ ಯೋಜನೆಗಳು ಹಾಗೂ ಅವುಗಳ ಉಪಯೋಗ, ಪೊಲೀಸ್ ಇಲಾಖೆಯ ಪೊಲೀಸ್ ತರಬೇತುದಾರ ಸೋಮಶೇಖರ್- ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಿರುವ ಕಾಯ್ದೆಗಳು, ಕಾರ್ಮಿಕ ನಿರೀಕ್ಷಕ ಬಿ.ಜಿ. ಕೋಟಿಮಠ- ಬಾಲಕಾರ್ಮಿಕರು ದಾಳಿಯಲ್ಲಿ ಸಿಕ್ಕಾಗ ಮೊಕದ್ದಮೆ ಹೂಡುವುದು ಹೇಗೆ ಎಂಬುದರ ಬಗ್ಗೆ ಹಾಗೂ ಯುನಿಸೆಫ್‌ನ ಮಕ್ಕಳ ರಕ್ಷಣಾ ಯೋಜನೆಯ ತರಬೇತಿ ಸಂಯೋಜಕ ಹರೀಶ್ ಜೋಗಿ ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. 
  ಬಾಲಕಾರ್ಮಿಕ ಯೋಜನಾ ಸಂಘದ ಕ್ಷೇತ್ರಾಧಿಕಾರಿ ವೀರಣ್ಣ ವಿ. ಕುಂಬಾರ್ ಅವರು ಪ್ರಾರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Leave a Reply

Top