ನದಿಯನ್ನು ದಾಟಲು ಸಾರ್ವಜನಿಕರಿಗೆ ಯಾಂತ್ರಿಕ ಬೋಟ್ ವ್ಯವಸ್ಥೆ

 ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ, ತಳವಾರಘಟ್ಟ, ವಿರುಪಾಪೂರಗಡ್ಡಿ, ನವವೃಂದಾವನ ಗಡ್ಡೆ ಹಾಗೂ ಕೊಪ್ಪಳ ಜಿಲ್ಲೆಯ ಇತರೆ ಸ್ಥಳಗಳಲ್ಲಿ ಸಾರ್ವಜನಿಕರಿಗೆ ದಿನನಿತ್ಯದ ಕೆಲಸಗಳಿಗೆ ತುಂಗಭದ್ರಾ ನದಿಯನ್ನು ದಾಟಲು ನಿಯಮಾನುಸಾರವಾಗಿ ಯಾಂತ್ರಿಕ ಬೋಟ್ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಆನೆಗೊಂದಿ, ತಳವಾರಘಟ್ಟ, ವಿರುಪಾಪುರಗಡ್ಡಿ, ನವವೃಂದಾವನ ಕಡೆಗೆ ನದಿ ದಾಟಲು ನಿಯಮಾನುಸಾರವಾಗಿ ಯಾಂತ್ರಿಕ ಬೋಟ್ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಆನೆಗೊಂದಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.  ಯಾಂತ್ರಿಕ ಬೋಟ್‌ಗಾಗಿ ಹರಾಜು ಪ್ರಕ್ರಿಯೆಯಲ್ಲಿ ಅತೀ ಕಡಿಮೆ (ಪ್ರಯಾಣ ದರ) ದರ ನಮೂದಿಸಿರುವ ಬಿಡ್‌ದಾರರಿಗೆ ಮಾತ್ರ ಪಾರದರ್ಶಕವಾಗಿ ಮಂಜೂರಾತಿಯನ್ನು ನೀಡಬೇಕು. ಹರಾಜು ಪ್ರಕ್ರಿಯೆ ಹಂತದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ ಸಂಘ ಸಂಸ್ಥೆ ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕು. ವಿಶೇಷ ದಿನಗಳಲ್ಲಿ ಅಂದರೆ ಗ್ರಾಮದಲ್ಲಿ ಸಂತೆ-ಜಾತ್ರೆ ಹಾಗೂ ಇತರೆ ಧಾರ್ಮಿಕ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ೨ ಸುಸಜ್ಜಿತ ಬೋಟುಗಳ ವ್ಯವಸ್ಥೆ ಕಲ್ಪಿಸಬೇಕು. ಬೋಟಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಜೀವ ಹಾನಿಯಾಗದಂತೆ ಪ್ರತಿಯೊಂದು ಬೋಟುಗಳಲ್ಲಿ ಸುಸಜ್ಜಿತ ಜೀವರಕ್ಷಕ ಉಡುಪುಗಳು (ಲೈಫ್ ಜಾಕೆಟ್) ಹಾಗೂ ಏರ್ ಟ್ಯೂಬಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಬೋಟುಗಳನ್ನು ಚಾಲನೆ ಮಾಡುವ ಚಾಲಕರು ಅನುಭವ ಇರುವ ಹಾಗೂ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ವಿಭಾಗ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಪರವಾನಿಗೆಯನ್ನು ಹೊಂದಿರತಕ್ಕದ್ದು, ನಿಗದಿತ ಚಾಲಕರನ್ನು ಹೊರತುಪಡಿಸಿ ಪರವಾನಿಗೆ ಹೊಂದಿರದ ಬೇರಾವುದೇ ಚಾಲಕರನ್ನು ನೇಮಿಸುವಂತಿಲ್ಲ ಬೋಟುಗಳ ಚಾಲನೆ ಪರವಾನಿಗೆಯನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಕೊರಳಲ್ಲಿ (ಬ್ಯಾಡ್ಜ್) ಹಾಕಿಕೊಳ್ಳುವುದು. ಸಕ್ಷಮ ಇಲಾಖೆಯವರು ನೀಡಿದ ಪರವಾನಿಗೆಯಲ್ಲಿ ಎಷ್ಟು ಜನ ಪ್ರಯಾಣಿಕರನ್ನು ಕರೆದೊಯ್ಯಲು ನಿರ್ದಿಷ್ಟಪಡಿಸಲಾಗಿದೆಯೋ ಅಷ್ಟೆ ಪ್ರಯಾಣಿಕರನ್ನು ಮಾತ್ರ ತುಂಬುವುದು ಹಾಗೂ ಸದರಿ ಬೋಟುಗಳಲ್ಲಿ ಪರವಾನಿಗೆಯ ವಿವರಗಳನ್ನು ಸಾರ್ವಜನಿಕರ ಗಮನಕ್ಕೆ ಬರುವ ಹಾಗೆ ಅಂಟಿಸತಕ್ಕದ್ದು. ಈ ಎಲ್ಲಾ ಅಂಶಗಳನ್ನು ತಪ್ಪದೇ ಪಾಲಿಸಲು ತಿಳಿಸಿದೆ. ಉಲ್ಲಂಘನೆಯಾದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಅಂತಹ ಪರವಾನಿಗೆಯನ್ನು ರದ್ದುಪಡಿಸಿ ಬೋಟುಗಳನ್ನು ಜಫ್ತು ಮಾಡಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು.   ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಹಾಗೂ ಆಯ್ಕೆಯಾದ ಬಿಡ್‌ದಾರರ ಪ್ರತಿದಿನದ ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. 
Please follow and like us:
error