ವಿವಿಧ ವ್ಯಾಸಂಗ ವೇತನ ನ್ಯೂನ್ಯತೆ ಸರಿಪಡಿಸಿಕೊಳ್ಳಲು ಅವಕಾಶ.

ಕೊಪ್ಪಳ, ಸೆ.೨೪ (ಕ ವಾ)  ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ವಿದ್ಯಾರ್ಥಿ ವೇತನ ಹಾಗೂ ಮಾಸಿಕ ವ್ಯಾಸಂಗ ವೇತನಗಳ ಆನ್‌ಲೈನ್ ಅರ್ಜಿ ಸಲ್ಲಿಕೆಯಲ್ಲಿ ಉಂಟಾಗಿದ್ದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
     ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ಪೂರ್ಣಾವಧಿ ಪಿ.ಹೆಚ್.ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ ಹಾಗೂ ಫೆಲೋಷಿಪ್ ಸೌಲಭ್ಯಕ್ಕಾಗಿ ಈ ಹಿಂದೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಪ್ರಸಕ್ತ ಸಾಲಿನ ಈ ವ್ಯಾಸಂಗ ವೇತನ ಯೋಜನೆಗಳಿಗೆ ಕೆಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಕೆಲ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆಯಲ್ಲಿ ನ್ಯೂನ್ಯತೆಗಳಾಗಿವೆ ಎಂದು ತಿಳಿಸಿ, ಸರಿಪಡಿಸಿಕೊಳ್ಳಲು ಅವಕಾಶ ಕೋರಿ ಮನವಿ ಸಲ್ಲಿಸಿದ್ದರು.
     ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳು, ಕಾಲೇಜು ಕೋರ್ಸ್ ಮತ್ತು ಕೋರ್ಸಿನ ವರ್ಷ, ಹಿಂದಿನ ಸಾಲಿನ ಅಂಕಪಟ್ಟಿಗಳನ್ನು ಅಪಲೋಡ್ ಮಾಡುವುದು, ದೂರದ ವಿವರ, ಪ್ರವೇಶ ಸಂಖ್ಯೆ ಮತ್ತು ದಿನಾಂಕ ಹಾಗೂ ಅಗತ್ಯ ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪಲೋಡ್ ಮಾಡಲು ಸಂಬಂಧಪಟ್ಟ ಕಾಲೇಜು, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಈ ಕಾಲಾವಕಾಶದ ಸದುಪಯೋಗ ಪಡೆದುಕೊಂಡು ಆನ್‌ಲೈನ್ ಅರ್ಜಿ ಸಲ್ಲಿಕೆಯಲ್ಲಿ ಉಂಟಾದ ನ್ಯೂನ್ಯತೆಗಳನ್ನು ಸೆ.೩೦ ರೊಳಗಾಗಿ ಸರಿಪಡಿಸಿಕೊಳ್ಳಬಹುದಾಗಿದೆ. ನಂತರ ಯಾವುದೇ ರೀತಿಯ ತಿದ್ದುಪಡಿಗಳಿಗೆ ಅವಕಾಶವನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಯಾ ಕಾಲೇಜು ಅಥವಾ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಅಥವಾ ಜಿಲ್ಲಾ ಬಿಸಿಎಂ ಕಛೇರಿ, ಕೊಪ್ಪಳ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ತಿಳಿಸಿದ್ದಾರೆ.  
ಸೆ. ೨೭ ರಂದು ಆಕಾಶವಾಣಿಯಲ್ಲಿ ಈಶಾನ್ಯ ಐಸಿರಿ ಸರಣಿ ಪ್ರಸಾರ
ಕೊಪ್ಪಳ, ಸೆ.೨೬ (ಕ ವಾ)  ಹೈದ್ರಾಬಾದ್-ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಈ ಭಾಗದ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸಲಿರುವ ಈಶಾನ್ಯದ ಐಸಿರಿ ಸರಣಿ ಕಾರ್ಯಕ್ರಮದ ಎರಡನೆ ಸಂಚಿಕೆಯು ಸೆ. ೨೭ ರಂದು ಬೆಳಿಗ್ಗೆ ೧೦ ರಿಂದ ೧೧ ಗಂಟೆಯವರೆಗೆ ಹೊಸಪೇಟೆ, ಕಲಬುರಗಿ ಮತ್ತು ರಾಯಚೂರು ಆಕಾಶವಾಣಿ ಕೇಂದ್ರದಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
     ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಾಯೋಜಕತ್ವದಲ್ಲಿ ಕಲಬುರಗಿ ಆಕಾಶವಾಣಿ ಕೇಂದ್ರವು ರೂಪಿಸಿರುವ ಈ ಕಾರ್ಯಕ್ರಮ ಒಟ್ಟು ೫೨ ಸಂಚಿಕೆಗಳಲ್ಲಿ ಸರಣಿ ಮೂಡಿಬರಲಿದೆ.  ಸೆ. ೨೭ ರಂದು ಭಾನುವಾರ ಪ್ರಸಾರವಾಗುವ ಈ ಸಂಚಿಕೆಯಲ್ಲಿ ಈಶಾನ್ಯ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಕುರಿತು ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಖಮರುಲ್ ಇಸ್ಲಾಂ ಅವರ ವಿಚಾರಗಳು, ಖ್ಯಾತ ಚಲನಚಿತ್ರ ನಟ ವೈಜನಾಥ ಬಿರಾದಾರ ಅವರ ಅನುಭವ, ಎನ್.ಬಿ. ಪಾಟೀಲ್ ಅವರಿಂದ ಗಾಂಧೀಜಿ ಹಾಗೂ ಶರಣರ ದೃಷ್ಟಿಯಲ್ಲಿ ಶಿಕ್ಷಣ, ಪಿ. ವಿಲಾಸಕುಮಾರ ಅವರಿಂದ ಕಾನೂನು ಸಲಹೆ, ಪರಿಣಿತ ಮಹಿಳೆಯರಿಂದ ಆಹಾರ, ಆರೋಗ್ಯ.  ಸಾಧಕ ಮಹಿಳೆಯರ ಕುರಿತು ಮಾಹಿತಿ.  ಶಂಭುಲಿಂಗ ವಾಲ್ದೊಡ್ಡಿ ಹಾಗೂ ಸಂಗಡಿಗರಿಂದ ಜನಪದ ಸಂಗೀತ ಸೊಬಗು ಮತ್ತು ಊರು-ಟೂರು ಕಾರ್ಯಕ್ರಮದಡಿ ಸನ್ನತ್ತಿಯ ಚಂದ್ರಲಾಂಬಾ ದೇವಿ ದರ್ಶನ ಕಾರ್ಯಕ್ರಮಗಳು ಪ್ರಸಾರವಾಗಲಿವೆ. 
     ಇವುಗಳಲ್ಲದೆ ಕಳೆದ ವಾರದಲ್ಲಿ ಹೈ-ಕ ಭಾಗದ ಕೊಪ್ಪಳ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ವಾರದ ವರದಿ, ಮಹಾತ್ಮರ ಗಣ್ಯರ ನುಡಿಮುತ್ತುಗಳು, ನಗೆಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‌ಗಳು ಮೂಡಿ ಬರಲಿವೆ. ಸರಣಿಯ ನಿರ್ಮಾಣ ಹಾಗೂ ನಿರ್ವಹಣೆಯನ್ನು ಕಾರ್ಯಕ್ರಮ ಅಧಿಕಾರಿ ಸೋಮಶೇಖರ ಎಸ್. ರುಳಿ ಅವರು ಮಾಡಲಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

Please follow and like us:
error