ಶಾಂತಿಗಾಗಿ ಸಾಹಿತ್ಯ-ಮಹಿಳಾ ಸಮಾವೇಶ

 ಶಾಂತಿ ಪ್ರಕಾಶನದ ಶಾಂತಿಗಾಗಿ ಸಾಹಿತ್ಯ ಅಭಿಯಾನದಡಿ ಸಂಜೆ ನಡೆದ ಮಹಿಳಾ ಸಮಾವೇಶದಲ್ಲಿ ಶ್ರೀಮತಿ ಕುಲ್ಸೂಮ್ ಅಬೂಬಕರ್ ಎಂ.ಎ. (ಜರ್ನಲಿಸಮ್) ಇವರು ಶಾಂತಿ ಎಂಬುದನ್ನು ಹೇರಳವಾದ ಸಂಪತ್ತಿನಿಂದ ಅಥವಾ ಆಡಂಬರದ ಬದುಕಿನಿಂದ ಅಥವಾ ಅಧಿಕಾರದಿಂದ ಪಡೆಯಲು ಸಾಧ್ಯವಿಲ್ಲ. ಸಾಹಿತ್ಯಗಳಿಂದ ಮನಃ ಶಾಂತಿಯನ್ನು ಪಡೆಯಬಹುದು. ಏಕೆಂದರೆ ಸಾಹಿತ್ಯಗಳು ನಮಗೆ ಸೃಜನಶೀಲತೆಯನ್ನು ನೀಡುತ್ತವೆ. ಜ್ಞಾನವನ್ನು ನೀಡುವ ಮೂಲಕ ಯೋಚಿಸುವಂತೆ ಮಾಡುತ್ತವೆ. ಉತ್ತಮ ಸಾಹಿತ್ಯಗಳನ್ನು ಓದುವದರಿಂದ ಉತ್ತಮ ನಾಗರಿಕರಾಗಲು ಸಾಧ್ಯವಿದೆ. ಕುರ್‌ಆನ್‌ನ ಒಂದು ಸಾಹಿತ್ಯ ಅವತರಣದಿಂದಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕು ಅವಳಿಗೆ ಬದುಕುವ ಮತ್ತು ಎಲ್ಲ ರೀತಿಯ ಹಕ್ಕುಗಳನ್ನು ಇಸ್ಲಾಂ ನಲ್ಲಿ ಕೊಡಲಾಗಿದೆ. ಸಾಹಿತ್ಯವು ಸಾಹಿತಿಗೆ ಮನೋಧಾರಣೆಯನ್ನು ನೀಡುತ್ತದೆ. ಮಕ್ಕಳಲ್ಲಿ ಸಾಹಿತ್ಯದ ಅರಿವನ್ನು ಮೂಡಿಸಬೇಕು. ಭಾರತದಲ್ಲಿ ಶಾಂತಿಯುತವಾದಂತಹ, ಸಹಬಾಳ್ವೆಯ ಅಗತ್ಯವಿದೆ. ಉತ್ತಮ ಸಾಹಿತ್ಯಗಳಿಂದ ಸಮಾಜದ ಬದಲಾವಣೆ ಸಾಧ್ಯ ಎಂದು ಹೇಳಿದರು.
ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಶ್ರೀಮತಿ ಶಾಂತಾಶ್ರೀ ಎಂ.ಎಸ್.ಡಬ್ಲ್ಯೂ ಜಿಲ್ಲಾ ಕಾರಾಗೃಹಾಧಿಕಾರಿಗಳು ಶಾಂತಿಪ್ರಕಾಶನವು ಸಾಹಿತ್ಯದ ಮೂಲಕ ಶಾಂತಿಯನ್ನು ಸಾರುವುದಕ್ಕೆ ಇಸ್ಲಾಂನ ನಿಜರೂಪ ತಿಳಿಸಲು ಹೊರಟಿದೆ. ಯಾವುದೇ ಧರ್ಮ ಗ್ರಂಥಗಳು ಕೆಟ್ಟದ್ದನ್ನು ಸಾರುವುದಿಲ್ಲ. ಕೆಟ್ಟನ್ನು ಸಾರುವುದು ಧರ್ಮಗಳಲ್ಲ. ಬದಲಾವಣೆಯನ್ನು ಬಯಸುವಂತಹ ವ್ಯಕ್ತಿ ತನ್ನದೇ ಆದಂತಹ ದಾರಿಯನ್ನು ಹುಡುಕುತ್ತಾನೆ. ಸಾಹಿತಿಗಳಿಗೂ ಬದಲಾವಣೆಯೇ ಮುಖ್ಯ

ಉದ್ದೇಶ. ತಮ್ಮ ಸಾಹಿತ್ಯಗಳ ಮೂಲಕ ಬದಲಾವಣೆಯನ್ನು ತರುವ ಪ್ರಯತ್ನ ಅವರದ್ದು. ಇಂದು ನಾವು ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ನಾವು ಅಪರಾಧವನ್ನು ದ್ವೇಷಿಸಬೇಕು ಹೊರತಾಗಿ ಅಪರಾಧಿಯನ್ನಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಶಮೀರಾ ಜಹಾನ್ ಅನುಪಮ ಸಲಹಾ ಸಮಿತಿ ಸದಸ್ಯರು ಸಾಹಿತ್ಯ ಮನುಷ್ಯನ ವೈಚಾರಿಕತೆಯನ್ನು ಬದಲಿಸಬಹುದು. ಸಾಹಿತ್ಯ ಪ್ರೇಮಿ ಅಂಧಕಾರದ ಪ್ರಕಾಶದಲ್ಲಿರುತ್ತಾನೆ. ಇಂದು ನಾವು ಸಾಹಿತ್ಯ ಪ್ರೇಮಿಗಳಾಗಬೇಕು. ಖಂಡಿತವಾಗಿಯೂ ಉತ್ತಮ ಸಾಹಿತ್ಯಗಳು ನಮ್ಮನ್ನು ಜ್ಞಾನಿಗಳಾಗಿಸುವುವು. ಎಲ್ಲಾ ಧರ್ಮಗಳನ್ನು ತಿಳಿಯಲು ನಾವು ಪ್ರಯತ್ನಿಸಿದರೆ ಖಂಡಿತವಾಗಿಯೂ ಯಾವುದೇ ಘರ್ಷಣೆಗಳಾಗುವುದಿಲ್ಲ. ಪರಸ್ಪರ ಸೌಹಾರ್ದತೆ ಇರುತ್ತದೆ. ಒಂದು ವರದಿಯ ಪ್ರಕಾರ ಅತಿ ಹೆಚ್ಚು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿರುವವರು ಪುರುಷರು. ಆದರೆ ಇದರಿಂದ ನಷ್ಟಕ್ಕೊಳಗಾಗುತ್ತಿರುವವರು ಮಹಿಳೆ ಮತ್ತು ಮಕ್ಕಳು. ಸೃಷ್ಟಿಯ ಉದ್ದೇಶವನ್ನು ಅರ್ಥಮಾಡಿಕೊಂಡರೆ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಮತ್ತು ಜೀವನವನ್ನು ಹಸನವಾಗಿ ಸಾಗಿಸುವ ರೀತಿ ದೊರೆಯುತ್ತದೆ ಎಂದರು. 
ಮುಂದುವರೆದು ಮಾತನಾಡುತ್ತಾ ಅವರು ಮಹಿಳೆ ಮೇಲೆ ಆಗುತ್ತಿರುವ ಅತ್ಯಾಚಾರ, ಶೋಷಣೆಗಳ ಬಗ್ಗೆ ವಿವರಿಸುತ್ತಾ ಬಂಡವಾಶಾಹಿತ್ವದ ಪರಿಣಾಮ ಇಂದು ಮಹಿಳೆ ಕೇವಲ ಹಣಸಂಪಾದನೆಯ ವಸ್ತುವಾಗಿದ್ದಾಳೆ. ಮಹಿಳಾ ಸ್ವಾತಂತ್ರ್ಯ ಕೇವಲ ಒಂದು ಮುಖವಾಡವಷ್ಟೆ. ನಿಜವಾದ ಧರ್ಮ ಯಾವುದು ? ಸೃಷ್ಟಿಯ ಉದ್ದೇಶವೇನು ಎಂಬುದನ್ನು ಶಾಂತಿ ಪ್ರಕಾಶನದ ಸಾಹಿತ್ಯಗಳು ಬೋಧಿಸುತ್ತವೆ. ಪ್ರವಾದಿ ಮುಹಮ್ಮದ್ ಕೇವಲ ಮುಸ್ಲಿಂರ ಪ್ರವಾದಿಗಳಲ್ಲ, ಅವರು ಸಕಲ ಮಾನವ ಕುಲಕೆ ಪ್ರವಾದಿ. ಅಲ್ಲಾಹ್ ಎಂದರೆ ಮುಸ್ಲಿಂರ ಪ್ರಭುವಲ್ಲ. ಅವನು ಎಲ್ಲರ ಪ್ರಭು, ಸಕಲಸೃಷ್ಟಿಗಳಿಗೆ ಆತನೇ ಪ್ರಭು ಎಂದು ಹೇಳಿದರು. 
ಶಾಂತಿ ಪ್ರಕಾಶನದ ರಜತ ಮಹೋತ್ಸವದ ಶಾಂತಿಗಾಗಿ ಸಾಹಿತ್ಯ ಅಭಿಯಾನದಡಿ ನಡೆದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕೇಂದ್ರೀಯ ವಿದ್ಯಾಲಯ ಕೊಪ್ಪಳ, ದ್ವಿತೀಯ ಸ್ಥಾನವನ್ನು ಸ್ವಾಮಿ ವಿವೇಕಾನಂದ ಶಾಲೆ ಕೊಪ್ಪಳ ಹಾಗೂ ತೃತೀಯ ಸ್ಥಾನವನ್ನು ಶಿವಶಾಂತವೀರ ಪಬ್ಲಿಕ್ ಶಾಲೆ ಕೊಪ್ಪಳ ಪಡೆದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಮೃತ, ಜ್ಯೋತಿ, ರಶ್ಮಿ ಇವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. 
ಈ ಸಂದರ್ಭದಲ್ಲಿ ಶ್ರೀಮತಿ ಗೌರಮ್ಮ ಲೋಹಿತ ದೇಸಾಯಿ ಎಂ.ಎ. ಎಲ್.ಎಲ್.ಬಿ. ವಕೀಲರು, ಶ್ರೀಮತಿ ಕೋಮಲತಾ ಕುದರಿಮೋತಿ ಜಿಲ್ಲಾಧ್ಯಕ್ಷರು, ಅಕ್ಕಮಹಾದೇವಿ ಸಂಘ, ಶ್ರೀಮತಿ ಶಾರದಾ ಶ್ರವಣ ರಾಜಪೂತ ಎಂ.ಎ. ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಹಮ್ಮದಿ ಅಸರಾ ಕಾರ್ಯಕ್ರಮವನ್ನು ನಿರೂಪಿಸಿ ಗಣ್ಯರನ್ನು ಸ್ವಾಗತಿಸಿದರು. ಶ್ರೀಮತಿ ರಿಹಾನಾ ಮುಲ್ಲಾ ಕಾರ್ಯಕ್ರಮವನ್ನು ವಂದಿಸಿದರು.
Please follow and like us:
error